ಜಪಾನ್‌ನಿಂದ ಭಾರತದಲ್ಲಿ 3.2 ಲಕ್ಷ ಕೋಟಿ ರೂ.ಗೆ ಹೂಡಿಕೆ ಏರಿಕೆ ಗುರಿ: ಪ್ರಧಾನಿ
ಹೊಸದಿಲ್ಲಿ, ಮಾ. 19: ಜಪಾನ್ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಹೂಡಿಕೆ ಗುರಿಯನ್ನು 3.2 ಲಕ್ಷ ಕೋಟಿ ಅಥವಾ 5 ಶತಕೋಟಿ ಯೆನ್‌ಗೆ ಹೆಚ್ಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ನಡುವಿನ ದ್ವಿಪಕ್ಷೀಯ ಮಾತುಕತೆಯ ಹಿನ್ನೆಲೆಯಲ್ಲಿ ಭಾರತ ಹಾಗೂ ಜಪಾನ್ 6 ಒಪ್ಪಂದಗಳಿಗೆ ಸಹಿ ಹಾಕಿದೆ.
ಭಾರತದಲ್ಲಿ ಜಪಾನ್‌ನ ಕಂಪೆನಿಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಅವರು ತಿಳಿಸಿದ್ದಾರೆ. ಭಾರತ-ಜಪಾನ್ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ, ‘‘ಪ್ರಗತಿ, ಸಮೃದ್ಧಿ ಹಾಗೂ ಪಾಲುದಾರಿಕೆ ಭಾರತ-ಜಪಾನ್ ಸಂಬಂಧಕ್ಕೆ ಆಧಾರವಾಗಿದೆ’’ ಎಂದರು. ಸೈಬರ್ ಭದ್ರತೆ, ಸಾಮರ್ಥ್ಯ ವರ್ಧನೆ, ಮಾಹಿತಿ ಹಂಚಿಕೆ ಹಾಗೂ ಸಹಕಾರದ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳ ವಿನಿಮಯಕ್ಕೆ ಇಬ್ಬರು ನಾಯಕರು ಸಾಕ್ಷಿಯಾದರು. ಇದಕ್ಕಿಂತ ಮುನ್ನ ಪ್ರದಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಹೈದರಾಬಾದ್ ಹೌಸ್‌ನಲ್ಲಿ ಕಿಶಿಡಾ ಅವರನ್ನು ಬರ ಮಾಡಿಕೊಂಡರು. ಅನಂತರ ಉಭಯ ನಾಯಕರು ಸಕಾರಾತ್ಮಕ ಮಾತುಕತೆ ನಡೆಸಿದರು. ‘‘ಭಾರತ-ಜಪಾನ್ ಪಾಲುದಾರಿಕೆ ಸುಧಾರಿಸುವಲ್ಲಿ ಇನ್ನೊಂದು ಹೆಜ್ಜೆ’’ ಮುಂದಿಡಲು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ವರ್ಧನೆ ಹಾಗೂ ಸಾಂಸ್ಕೃತಿಕ ಸಂಪರ್ಕದ ದಾರಿಯ ಕುರಿತು ಚರ್ಚೆ ನಡೆಸಿದರು.
ದ್ವಿಪಕ್ಷೀಯ ಮಾತುಕತೆ ಹಾಗೂ ಆರ್ಥಿಕ ವೇದಿಕೆಯ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ, ‘‘ಭಾರತದಲ್ಲಿ ಅತಿ ದೊಡ್ಡ ಹೂಡಿಕೆದಾರರಲ್ಲಿ ಜಪಾನ್ ಕೂಡ ಒಂದು. ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲ್ ಕಾರಿಡರ್‌ಗೆ ಭಾರತ-ಜಪಾನ್ ಒಂದು ತಂಡ, ಒಂದು ಯೋಜನೆಯಾಗಿ ಕಾರ್ಯ ನಿರ್ವಹಿಸುತ್ತಿದೆ’’ ಎಂದರು.