ಕೋವಿಶೀಲ್ಡ್ ಡೋಸ್ ಅಂತರ 12-16 ವಾರಗಳಿಂದ 8-16 ವಾರಗಳಿಗೆ ಇಳಿಕೆ
ಹೊಸದಿಲ್ಲಿ, ಮಾ. 20: ಕೋವಿಡ್ ಲಸಿಕೆ ಕೋವಿಶೀಲ್ಡ್ನ ಮೊದಲ ಡೋಸ್ ನೀಡಿದ 8-16 ವಾರಗಳ ನಡುವೆ ಎರಡನೇ ಡೋಸ್ ನೀಡುವಂತೆ ನ್ಯಾಷನಲ್ ಟೆಕ್ನಾಲಜಿ ಅಡ್ವೆಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (ಎನ್ಟಿಎಜಿಐ) ಶಿಫಾರಸು ಮಾಡಿದೆ. ರಾಷ್ಟ್ರೀಯ ಕೋವಿಡ್ ಲಸಿಕೀಕರಣ ಕಾರ್ಯಕ್ರಮದ ಅಡಿಯಲ್ಲಿ ಪ್ರಸ್ತುತ ಕೋವಿಶೀಲ್ಡ್ ನ ಮೊದಲ ಡೋಸ್ ಬಳಿಕ 12-16 ವಾರಗಳ ನಡುವೆ ಎರಡನೇ ಡೋಸ್ ನೀಡಲಾಗುತ್ತಿದೆ.
ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಎರಡನೇ ಡೋಸ್ ನೀಡುವ ಭಾರತ ಬಯೋಟೆಕ್ ನ ಕೊವ್ಯಾಕ್ಸಿನ್ ಅವಧಿಯಲ್ಲಿ ಯಾವುದೇ ಬದಲಾವಣೆಯ ಸಲಹೆಯನ್ನು ಎನ್ಟಿಎಜಿಐ ಇದುವರೆಗೆ ನೀಡಿಲ್ಲ. ಕೋವಿಶೀಲ್ಡ್ ಗೆ ನೀಡಲಾಗಿರುವ ಈ ಶಿಫಾರಸನ್ನು ರಾಷ್ಟ್ರೀಯ ಕೋವಿಶೀಲ್ಡ್ ಲಸಿಕೀಕರಣ ಕಾರ್ಯಕ್ರಮದಲ್ಲಿ ಇನ್ನಷ್ಟೇ ಅಳವಡಿಸಬೇಕಿದೆ. ಪ್ರೋಗ್ರಾಮೆಟಿಕ್ ದತ್ತಾಂಶದಿಂದ ಪಡೆದ ಇತ್ತೀಚೆಗಿನ ಜಾಗತಿಕ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಎನ್ಟಿಎಜಿಐ ಈ ಹೊಸ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘‘ಇದರ ಪ್ರಕಾರ ಕೋವಿಶೀಲ್ಡ್ ನ ಎರಡನೇ ಡೋಸ್ ಅನ್ನು 8 ವಾರಗಳ ಬಳಿಕ ನೀಡಬಹುದು. 12ರಿಂದ 16 ವಾರಗಳ ನಡುವೆ ಕೋವಿಶೀಲ್ಡ್ ಲಸಿಕೆ ನೀಡುವುದರಿಂದ ಪ್ರತಿಕಾಯ ಪ್ರತಿಕ್ರಿಯೆ ಉತ್ಪಾದನೆಯಾಗುವ ರೀತಿಯಲ್ಲೇ 8-16 ವಾರಗಳ ನಡುವೆಯೂ ಪ್ರತಿಕಾಯ ಪ್ರತಿಕ್ರಿಯೆ ಉತ್ಪತ್ತಿಯಾಗುತ್ತದೆ’’ ಎಂದು ಮೂಲಗಳು ತಿಳಿಸಿವೆ. ಹಲವು ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಉಳಿದ ಏಳೆಂಟು ಕೋಟಿ ಜನರಿಗೆ ಕೋವಿಶೀಲ್ಡ್ ನ ಎರಡನೇ ಡೋಸ್ ಅನ್ನು ನೀಡುವುದನ್ನು ತ್ವರಿತಗೊಳಿಸುವುದಕ್ಕೆ ಇದು ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೋವಿಶೀಲ್ಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ಅನಂತರವನ್ನು ಎನ್ಟಿಎಜಿಐ ಶಿಫಾರಿಸಿನ ಆಧಾರದಲ್ಲಿ 6-8 ವಾರಗಳಿಂದ 12-16 ವಾರಗಳಿಗೆ ವ 2021 ಮೇ 13ರಂದು ವಿಸ್ತರಿಸಿತ್ತು.