ಬಿಹಾರ: ವಿಷಪೂರಿತ ಮದ್ಯ ಸೇವನೆ ಶಂಕೆ; 10 ಮಂದಿ ಸಾವು
ಮಧೇಪುರ/ಭಾಗಲ್ಪುರ, ಮಾ. 20: ಮದ್ಯಕ್ಕೆ ನಿಷೇಧ ಹೇರಲಾಗಿರುವ ಬಿಹಾರದ ಎರಡು ಜಿಲ್ಲೆಗಳಲ್ಲಿ ಹೋಳಿ ಆಚರಣೆಯ ಸಂದರ್ಭ ವಿಷಪೂರಿತ ಮದ್ಯ ಸೇವಿಸಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿರುವುದಾಗಿ ಪೊಲೀಸರು ರವಿವಾರ ತಿಳಿಸಿದ್ದಾರೆ.
ಬಾಗಲ್ಪುರ ಪಟ್ಟಣದ ಸಾಹೀಬ್ಗಂಜ್ ಪ್ರದೇಶದಲ್ಲಿ ನಾಲ್ವರು ಮೃತಪಟ್ಟಿರುವುದು ಸೇರಿದಂತೆ ಬಾಗಲ್ಪುರ ಜಿಲ್ಲೆಯಿಂದ 8 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೃತಪಟ್ಟ ಇತರ ಪ್ರಕರಣಗಳು ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೇರೆ ಬೇರೆ ಗ್ರಾಮಗಳಿಂದ ವರದಿಯಾಗಿವೆ. ಮೃತಪಟ್ಟವರು ವಿಷಪೂರಿತ ಮದ್ಯ ಸೇವಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತಿಳಿಯಲಿದೆ ಎಂದು ನಾರಾಯಣಪುರ ಎಸ್ಎಚ್ಒ ರಮೇಶ್ ಶಾ ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಓರ್ವನಿಗೆ ಹೃದಯಾಘಾತ ಸಂಭವಿಸಿತ್ತು ಹಾಗೂ ಇನ್ನೋರ್ವ ಏಣಿ ಹತ್ತುತ್ತಿರುವಾಗ ಕೆಳಗೆ ಬಿದ್ದಿದ್ದಾನೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ವಿಷಪೂರಿತ ಮದ್ಯ ಸೇವಿಸಿರುವ ಬಗ್ಗೆ ದೃಡವಾಗಲಿದೆ ಎಂದು ಯುನಿವರ್ಸಿಟಿ ಪೊಲೀಸ್ ಠಾಣೆಯ ಎಸ್ಎಚ್ಒ ರೀಟಾ ಕುಮಾರಿ ತಿಳಿಸಿದ್ದಾರೆ.
ವಿಷಪೂರಿತ ಮಧ್ಯಸೇವಿಸಿ ಸಾಹೀಬ್ಗಂಜ್ ನಿವಾಸಿಯೊರ್ವರು ದೃಷ್ಟಿ ಕಳೆದುಕೊಂಡಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆಯಲ್ಲಿ ಟಯರ್ ಉರಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ವಾಹನ ಸಂಚಾರ ಮತ್ತೆ ಆರಂಭವಾಯಿತು.