×
Ad

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಪ್ರಶಸ್ತಿ ಕನಸು ಭಗ್ನ

Update: 2022-03-21 07:35 IST
 ಲಕ್ಷ್ಯ ಸೇನ್ (ಫೋಟೊ- PTI)

ಬರ್ಮಿಂಗ್‍ಹ್ಯಾಂ: ಬ್ಯಾಡ್ಮಿಂಟನ್‍ನಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗಿರುವ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಭಾರತದ 21 ವರ್ಷದ ಕನಸು ಈ ಬಾರಿಯೂ ನನಸಾಗಿಲ್ಲ. ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ರವಿವಾರ ನಡೆದ ಪುರುಷರ ವಿಭಾಗದ ಫೈನಲ್‍ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ಮತ್ತು ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ನೇರ ಗೇಮ್‍ಗಳಿಂದ ಸೋಲು ಅನುಭವಿಸಿದರು.

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ 20 ವರ್ಷದ ಉದಯೋನ್ಮುಖ ಆಟಗಾರ ಇಂದು ಕೋರ್ಟ್‍ನಲ್ಲಿ ಹಲವು ತಪ್ಪುಗಳನ್ನು ಎಸಗಿ 10-21, 15-21 ಗೇಮ್‍ಗಳಿಂದ ಎದುರಾಳಿಗೆ ಶರಣಾದರು. ಈ ಮೂಲಕ ಐತಿಹಾಸಿಕ ವಿಜಯ ಸಾಧಿಸುವ ಮೂಲಕ ಇತಿಹಾಸ ಬರೆಯುವ ಅವಕಾಶ ತಪ್ಪಿಸಿಕೊಂಡರು. ಕೇವಲ 53 ನಿಮಿಷಗಳ ಹೋರಾಟದಲ್ಲಿ ಅಕ್ಸೆಲ್ಸೆನ್ ಗೆಲುವಿನ ನಗೆ ಬೀರಿದರು.

"ಬಹುಶಃ ಅವರ ತಂತ್ರಗಾರಿಕೆ ಇದೆ ಎನಿಸುತ್ತದೆ. ಕಳೆದ ವಾರ ಅವರ ವಿರುದ್ಧ ಆಡಿದ್ದೆ. ಆದರೆ ಇಂದು ಅವರ ದಾಳಿ ಹಾಗೂ ರಕ್ಷಣೆ ಎರಡೂ ಅದ್ಭುತವಾಗಿತ್ತು. ನಿಜವಾಗಿಯೂ ತಾಳ್ಮೆ ಪ್ರದರ್ಶಿಸಿದ ಅವರು ಅತ್ಯುತ್ತಮ ಪಂದ್ಯವಾಡಿದರು" ಎಂದು ಪಂದ್ಯದ ಬಳಿಕ ಸೇನ್ ನುಡಿದರು.

ಆರಂಭಿಕ ಗೇಮ್‍ನಲ್ಲಿ ನಾನು ಹಲವು ಪ್ರಮಾದಗಳನ್ನು ಎಸಗಿದೆ. ಅದಕ್ಕೆ ನಾನು ಬೆಲೆ ತೆರಬೇಕಾಯಿತು, ಎರಡನೇ ಗೇಮ್‍ನಲ್ಲಿ ನಾನು ಪ್ರತಿರೋಧ ತೋರಿದೆ. ಅದರೆ ಎದುರಾಳಿ ಅದ್ಭುತ ಆಟವಾಡಿದರು ಎಂದು ಬಣ್ಣಿಸಿದರು.

ಶನಿವಾರ ಆಲ್‍ ಇಂಗ್ಲೆಂಡ್ ಟೂರ್ನಿಯ ಫೈನಲ್ ಪ್ರವೇಶಿಸಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಸೇನ್ ಪಾತ್ರರಾಗಿದ್ದರು. ಪ್ರಕಾಶ್ ನಾಥ್ (1947), ಪ್ರಕಾಶ್ ಪಡುಕೋಣೆ (1980, 81), ಪುಲ್ಲೇಲ ಗೋಪಿಚಂದ್ (2001) ಮತ್ತು ಸೈನಾ ನೆಹ್ವಾಲ್ (2015) ಮಾತ್ರ ಈ ಮುನ್ನ ಈ ಸಾಧನೆ ಮಾಡಿದ್ದರು, ವಾರದ ಹಿಂದಷ್ಟೇ ಸೇನ್, ಅಕ್ಸೆಲ್ಸೆನ್‍ಗೆ ಜರ್ಮನ್ ಓಪನ್ ಟೂರ್ನಿಯಲ್ಲಿ ಸೋಲುಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News