ತಾಂತ್ರಿಕ ಕಾರಣಗಳಿಂದ ಕರಾಚಿಯಲ್ಲಿ ಲ್ಯಾಂಡ್ ಆದ ದಿಲ್ಲಿ-ದೋಹಾ ವಿಮಾನ !

Update: 2022-03-21 05:07 GMT

ಹೊಸದಿಲ್ಲಿ:ದಿಲ್ಲಿಯಿಂದ ದೋಹಾಗೆ ತೆರಳುತ್ತಿದ್ದ ಖತರ್ ಏರ್‌ವೇಸ್ ವಿಮಾನವನ್ನು ತಾಂತ್ರಿಕ ಕಾರಣಗಳಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿ ಇಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಕ್ಯೂ ಆರ್ 579 ವಿಮಾನ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.

"ಕರಾಚಿಗೆ ತಿರುಗಿಸಲಾಗಿರುವ ಕ್ಯೂ ಆರ್ 579  ದಿಲ್ಲಿ-ದೋಹಾ ವಿಮಾನದ ಸ್ಥಿತಿ ಏನು? ಯಾವುದೇ ಮಾಹಿತಿಯನ್ನು ನೀಡಲಾಗುತ್ತಿಲ್ಲ.  ಪ್ರಯಾಣಿಕರಿಗೆ ಯಾವುದೇ ಆಹಾರ ಅಥವಾ ನೀರನ್ನು ನೀಡುತ್ತಿಲ್ಲ. ಕಸ್ಟಮರ್ ಕೇರ್ ನ ಸುಳಿವೇ ಇಲ್ಲ.  ದಯವಿಟ್ಟು ಸಹಾಯ ಮಾಡಿ" ಎಂದು ಡಾ.  ಸಮೀರ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಅನೇಕ ಪ್ರಯಾಣಿಕರು ದೋಹಾದಿಂದ ಸಂಪರ್ಕದ ವಿಮಾನಗಳನ್ನು ಹೊಂದಿದ್ದಾರೆ.  ಆದರೆ ವಿಮಾನವು ಕರಾಚಿಯಿಂದ ಯಾವಾಗ ಟೇಕ್ ಆಫ್ ಆಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪ್ರಯಾಣಿಕ ರಮೇಶ್ ರಾಲಿಯಾ ವೀಡಿಯೊ ಸಂದೇಶದಲ್ಲಿ ಹೇಳಿದರು.

ವಿಮಾನವು ಸೋಮವಾರ ಮುಂಜಾನೆ 3:50 ಕ್ಕೆ ದಿಲ್ಲಿಯಿಂದ ಹೊರಟು 5:30 ಕ್ಕೆ ಕರಾಚಿಯಲ್ಲಿ ಇಳಿಯಿತು ಎಂದು ರಾಲಿಯಾ ಹೇಳಿದರು.

"ವಿಮಾನ ಲ್ಯಾಂಡ್ ಆದ ನಂತರ ಅವರು ಎಲ್ಲರನ್ನು ವಿಮಾನ ನಿಲ್ದಾಣದಿಂದ ಇಳಿಸಿ ಕಾಯುವಂತೆ ಮಾಡಿದರು. ಈಗ ಬೆಳಿಗ್ಗೆ 9 ಗಂಟೆಯಾಗಿದೆ" ಎಂದು ಪ್ರಯಾಣಿಕರೊಬ್ಬರು ವೀಡಿಯೊ ಸಂದೇಶದಲ್ಲಿ ಹೇಳಿದರು.

 "ವಿಮಾನ ಯಾವಾಗ ಟೇಕ್ ಆಫ್ ಆಗುತ್ತದೆ ಎಂದು ಅವರು ನಮಗೆ ತಿಳಿಸಿಲ್ಲ. ಮಹಿಳೆಯರು ಮತ್ತು ಮಕ್ಕಳಿದ್ದಾರೆ ಹಾಗೂ  ಅನೇಕ ಜನರು ದೋಹಾದಿಂದ ಸಂಪರ್ಕ ವಿಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News