ಮಲ್ಲಾರು ಗುಜರಿ ಅಂಗಡಿಯಲ್ಲಿ ಸ್ಪೋಟ; ಇಬ್ಬರು ಸಜೀವ ದಹನ, ಬೆಳಪು ಗ್ರಾಪಂ ಸದಸ್ಯ ಸಹಿತ ಐವರಿಗೆ ಗಾಯ
ಕಾಪು : ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಾರು ಗ್ರಾಮದ ಗುಡ್ಡೇಕೆರಿ ಸಲಾಫಿ ಮಸೀದಿ ಬಳಿಯ ಗುಜರಿ ಅಂಗಡಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಸ್ಪೋಟದಿಂದ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದು, ಮೂವರು ಗಂಭೀರ ಸೇರಿದಂತೆ ಐವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಗುಜರಿ ಅಂಗಡಿಯ ಪಾಲುದಾರರಾದ ಚಂದ್ರನಗರದ ದಿ.ಶೇಕಬ್ಬ ಬ್ಯಾರಿ ಎಂಬವರ ಮಗ ರಜಬ್(೪೪) ಹಾಗೂ ಮಲ್ಲಾರು ಗುಡ್ಡಿಕೇರಿಯ ಶಾಬನ್ ಬ್ಯಾರಿಯ ಮಗ ರಜಬ್(೪೩) ಎಂದು ಗುರುತಿಸಲಾಗಿದೆ. ಇನ್ನೋರ್ವ ಪಾಲುದಾರ ಚಂದ್ರನಗರದ ಹಸನಬ್ಬ, ಸಾಗರ ಮೂಲದ ಪಕೀರ್ಣ ಕಟ್ಟೆ ಬಿಗ್ರೌಂಡ್ ನಿವಾಸಿ ನಯಾಜ್, ಬೆಳಪು ಗ್ರಾಪಂ ಸದಸ್ಯ ಫಾಹೀಂ ಬೆಳಪು ಹಾಗೂ ಉತ್ತರ ಕರ್ನಾಟಕದ ಕಾರ್ಮಿಕರಾದ ಈರಪ್ಪ ಹಾಗೂ ವೀರೇಶ್ ಎಂಬ ವರು ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರು ಮಣಿಪಾಲ ಹಾಗೂ ಓರ್ವ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೋಟಿನ ಕಂಪ್ರೆಸರ್ ಸ್ಪೋಟ
ಗುಜರಿ ಅಂಗಡಿಯಲ್ಲಿದ್ದ ಬೋಟಿನ ಐಡ್ರೋಲಿಕ್ ಕಂಪ್ರೆಸರ್‌ನ್ನು ಗ್ಯಾಸ್ ಸಿಲಿಂಡರ್ ಮೂಲಕ ಕಟ್ ಮಾಡುತ್ತಿರುವ ವೇಳೆ ಈ ಸ್ಪೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಿಂದ ಅಂಗಡಿಯಲ್ಲಿದ್ದ ಹಳೆಯ ಫ್ರಿಜ್ಡ್, ವಾಶಿಂಗ್ ಮೆಶಿನ್, ಕೇಬಲ್ ಸೇರಿದಂತೆ ೧೦ಲಕ್ಷ ರೂ. ಅಧಿಕ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿ ಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಹಲವು ವರ್ಷಗಳಿಂದ ಈ ಗುಜರಿ ಅಂಗಡಿಯನ್ನು ರಜಾಬ್, ರಜಬ್ ಮಲ್ಲಾರ್ ಹಾಗೂ ಹಸನಬ್ಬ ಪಾಲುದಾರಿಕೆಯಲ್ಲಿ ನಡೆಸಿಕೊಂಡು ಬರುತ್ತಿದ್ದರು. ಬೆಳಗ್ಗೆ ಅಂಗಡಿಯಲ್ಲಿ ಒಮ್ಮೇಲೆ ಸ್ಪೋಟ ಸಂಭವಿಸಿದ್ದು, ಇದರ ಪರಿಣಾಮ ಅಂಗಡಿಗೆ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ. ಈ ಸಮಯ ಅಂಗಡಿಯ ಒಳಗಡೆ ಮೂವರು ಪಾಲುದಾರರು ಸೇರಿದಂತೆ ಒಟ್ಟು ಏಳು ಮಂದಿ ಕೆಲಸ ಮಾಡು ತ್ತಿದ್ದರು.
ಅದರಲ್ಲಿ ಈರಪ್ಪ ಹಾಗೂ ವೀರೇಶ್ ದಿನಗೂಲಿಗಾಗಿ ಇಂದು ಕೆಲಸಕ್ಕೆ ಬಂದಿದ್ದರು. ವಾಹನದಿಂದ ಸಾಮಗ್ರಿ ಅನ್‌ಲೌಡ್ ಮಾಡುತ್ತಿದ್ದ ಶಂಶುದ್ದೀನ್ ಹೊರಗೆ ಓಡಿ ಹೋಗುವ ಮೂಲಕ ಅಪಾಯದಿಂದ ಪಾರಾದರು. ಒಳಗೆ ಇದ್ದ ರಜಬ್ ಚಂದ್ರನಗರ ಹಾಗೂ ರಜಬ್ ಮಲ್ಲಾರ್ ಸಜೀವ ದಹನಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಉಳಿದವರು ತೀವ್ರವಾಗಿ ಗಾಯಗೊಂಡರು.
೪ ವಾಹನಗಳಲ್ಲಿ ಕಾರ್ಯಾಚರಣೆ
ಗುಜರಿ ಅಂಗಡಿ ತುಂಬಾ ಇದ್ದ ಹಳೆಯ ಸಾಮಾಗ್ರಿಗಳು ಬೆಂಕಿಯ ಕೆನ್ನಾಲಿಗೆಗೆ ಸ್ಫೋಟಿಸುತ್ತಿದ್ದವು. ಈ ಸುದ್ದು ಸುತ್ತಮುತ್ತಲಿನ ಜನತೆಯಲ್ಲಿ ಆತಂಕ ಸೃಷ್ಠಿಸಿತು ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳಿದ್ದು, ಅಗ್ನಿಶಾಮಕದಳದ ಸಕಾಲಿಕ ಕಾರ್ಯಾ ಚರಣೆಯಿಂದ ಸಂಭಾವ್ಯ ಅವಘಡ ತಪ್ಪಿದೆ. ಇಲ್ಲವಾದಲ್ಲಿ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬವ ಸಾಧ್ಯತೆಯಿತ್ತು ಎಂದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಬೆಳಗ್ಗೆ ೧೦.೪೫ಕ್ಕೆ ಸ್ಥಳಕ್ಕೆ ಆಗಮಿಸಿದ ಉಡುಪಿಯ ಮೂರು ಅಗ್ನಿಶಾಮಕ ವಾಹನ ಹಾಗೂ ಪಾದೂರಿನ ಕಚ್ಚಾ ತೈಲ ಸಂಗ್ರಹಗಾರ ಐಎಸ್‌ಪಿ ಆರ್‌ಎಲ್‌ನ ಒಂದು ವಾಹನಗಳು ನಿರಂತರ ಮೂರೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.
ಮಂಗಳೂರು ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಹಾಗೂ ಠಾಣಾ ಅಧಿಕಾರಿ ಸತೀಶ್ ಎನ್. ನೇತೃತ್ವದಲ್ಲಿ ಸುಮಾರು ೧೫ ಮಂದಿ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿದರು.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಕಾಪು ತಹಶೀಲ್ದಾರ್ ಶ್ರೀನಿವಾಸ್ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಎಸ್ಸೈ ರಾಘವೇಂದ್ರ ಭೇಟಿ ನೀಡಿದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇವೆಗಿಳಿದ ಗ್ರಾಪಂ ಸದಸ್ಯ ಗಂಭೀರ!
ಬೆಂಕಿ ಅವಘಡದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಬೆಳಪು ಗ್ರಾಪಂ ಸದಸ್ಯ ಫಹೀಮ್, ಕಾರ್ಯಾಚರಣೆ ವೇಳೆ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಕಿ ನಂದಿಸಲು ಹಾಗೂ ಒಳಗಡೆ ಸಿಲುಕಿಕೊಂಡವರನ್ನು ರಕ್ಷಿಸುವ ನಿಟ್ಟಿನಲ್ಲಿ ಫಾಹೀಮ್ ಮುಂದಾದರು. ಈ ವೇಳೆ ಇವರು ಐಎಸ್‌ಪಿಆರ್‌ಎಲ್‌ನ ಫೈಯರ್ ವಾಹನದ ಪೈಪ್ ಹಿಡಿದುಕೊಂಡು ಅಂಗಡಿಯೊಳಗೆ ನುಗ್ಗಿದರು. ಆಗ ಒಮ್ಮೇಲೆ ನೀರು ಬಿಟ್ಟ ಪರಿಣಾಮ ಪೈಪಿನ ತುದಿಯ ಭಾಗ ಫಾಹೀಮ್ ಅವರ ಮುಖಕ್ಕೆ ಬಡಿಯೆತ್ತೆನ್ನಲಾಗಿದೆ.
3 ತಿಂಗಳ ಹಿಂದೆ ವಿದೇಶದಿಂದ ಬಂದಿದ್ದರು
ಮೃತ ಮಲ್ಲಾರಿನ ರಜಬ್ ಅವರಿಗೆ ಇಬ್ಬರು ಮಕ್ಕಳಿದ್ದು, ಪತ್ನಿ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಇವರು ವಿದೇಶದಲ್ಲಿ ದುಡಿಯುತ್ತಿದ್ದು ಮೂರು ತಿಂಗಳ ಹಿಂದೆ ಊರಿಗೆ ಬಂದು ಇವರ ಗುಜರಿ ವ್ಯಾಪಾರದಲ್ಲಿ ಪಾಲುದಾರ ರಾಗಿ ಸೇರಿಕೊಂಡಿದ್ದರು.
ಅದೇ ರೀತಿ ಚಂದ್ರನಗರದ ರಜಬ್, ಪ್ರಸ್ತುತ ಮಜೂರಿನಲ್ಲಿ ವಾಸವಾಗಿದ್ದು, ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಗಂಭೀರ ಗಾಯಗೊಂಡಿರುವ ನಿಯಾಝ್ ಪತ್ನಿ ಇತ್ತೀಚೆಗಷ್ಟೆ ಮಗುವಿನ ಜನ್ಮ ನೀಡಿದ್ದು, ಬಾಣಂತಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ತಕ್ಷಣ ಮೊದಲು ಸ್ಥಳಕ್ಕೆ ನಾನು ಸೇರಿದಂತೆ ನಮ್ಮ ಆರು ಮಂದಿಯ ತಂಡದವರು ಹೋಗಿದ್ದೇವು. ಅಲ್ಲಿಗೆ ಹೋಗುವಾಗ ದಟ್ಟ ಹೊಗೆ ಆವರಿಸಿತ್ತು. ಒಳಗಿನಿಂದ ಆಕ್ರಂದನ ಕೇಳಿ ಬರುತ್ತಿತ್ತು. ವಸ್ತು ಸ್ಪೋಟದ ಶಬ್ದ ಕೇಳಿತ್ತಿತ್ತು. ಮೂರು ಟ್ರಿಪ್‌ನಲ್ಲಿ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿ ದ್ದೇವೆ. ಒಬ್ಬ ಗಾಯಾಳನ್ನು ರಕ್ಷಿಸಿದ್ದೇವೆ.
-ಸಮದ್ ಮಜೂರು, ಚಾಲಕರು, ಐಎಸ್‌ಪಿಆರ್‌ಎಲ್ ಫೈಯರ್ ವಾಹನ.
ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಆಗ್ರಹ
ಘಟನಾ ಸ್ಥಳಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿದ್ದು, ಆಸ್ತಿ ಪಾಸ್ತಿ ನಷ್ಟ ಹಾಗೂ ಜೀವಹಾನಿಗಾಗಿ ಸೂಕ್ತ ಪರಿಹಾರ ಕಲ್ಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಪುರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್, ಪುರಸಭಾ ಸದಸ್ಯ ರಾದ ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ, ಸೊರಕೆ ಆಪ್ತ ಕಾರ್ಯದರ್ಶಿ ಅಶೋಕ್ ನಾಯರಿ ಉಪಸ್ಥಿತರಿದ್ದರು.
ಅದೇ ರೀತಿ ಅಗ್ನಿ ದುರಂತದಲ್ಲಿ ಮೃತರ ಬಗ್ಗೆ ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲ ಸಂತಾಪ ವ್ಯಕ್ತ ಪಡಿಸಿದೆ. ಮಡಿದವರ ಕುಟುಂಬಕ್ಕೆ ಸರಕಾರವು ಗರಿಷ್ಠ ಪರಿಹಾರ ನೀಡಬೇಕು ಎಂದು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.