ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೂ ಅವಕಾಶ ನೀಡಿ:ಉಡುಪಿಜಿಲ್ಲಾ ಬೀದಿಬದಿ, ಜಾತ್ರಾ ವ್ಯಾಪಾರಸ್ಥರ ಒಕ್ಕೂಟ ಒತ್ತಾಯ
ಉಡುಪಿ : ಜಾತ್ರಾ ಮಹೋತ್ಸವದಲ್ಲಿ ಯಾವುದೇ ತಾರತಮ್ಯ ಮಾಡದೆ ಮುಸ್ಲಿಮ್ ವ್ಯಾಪಾರಿಗಳಿಗೂ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಗೊಂದಲವನ್ನು ಪರಿಹರಿಸಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸಬೇಕು ಎಂದು ಉಡುಪಿ ಜಿಲ್ಲಾ ಬೀದಿಬದಿ ಹಾಗೂ ಜಾತ್ರಾ ವ್ಯಾಪಾರಸ್ಥರ ಒಕ್ಕೂಟ ಒತ್ತಾಯಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್, ಈ ಬಾರಿ ಕಾಪು ಮಾರಿಪೂಜೆ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದೆ ಇರುವುದು ನಮಗೆ ತುಂಬಾ ಬೇಸರ ಆಗಿದೆ. ಉಡುಪಿ ಸೌಹಾರ್ದತೆಯ ಜಿಲ್ಲೆ. ಇಲ್ಲಿ ಯಾವತ್ತೂ ಧರ್ಮಗಳ ಮಧ್ಯೆ ಯಾವುದೇ ಸಂಘರ್ಷಗಳು ನಡೆದಿಲ್ಲ ಎಂದರು.
ಮುಸ್ಲಿಮರು ಹಿಬಾಜ್ ಪ್ರಕರಣದ ತೀರ್ಪಿಗೆ ಸಂಬಂಧಿಸಿ ಬಂದ್ ಮಾಡಿದ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಯಾವತ್ತೂ ಯಾವುದೇ ರೀತಿ ಬಂದ್ ಮಾಡಿಲ್ಲ. ಆ ದಿನ ಕೂಡ ನಾವು ಎಲ್ಲರೂ ವ್ಯಾಪಾರ ಮಾಡಿದ್ದೇವೆ. ಯಾಕೆಂದರೆ ನಾವು ದಿನಗೂಲಿಯಲ್ಲಿ ಬದುಕು ನಡೆಸುವವರು. ಒಂದು ದಿನ ಕೆಲಸ ಮಾಡದಿದ್ದರೆ ಉಪವಾಸ ಮಲಗುವ ಸ್ಥಿತಿ ನಮ್ಮದು. ನಮ್ಮ ದುಡಿಮೆಯನ್ನೇ ನಂಬಿ ನಮ್ಮ ಕುಟುಂಬ ಗಳಿವೆ ಎಂದು ಅವರು ಹೇಳಿದರು.
ಈ ಹಿಂದೆ ಕೊರೋನದಿಂದಾಗಿ ಸುಮಾರು ಎರಡು ವರ್ಷ ನಾವು ವ್ಯಾಪಾರ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವು. ಇದೀಗ ಜಾತ್ರೆಗಳಲ್ಲಿ ನಮಗೆ ವ್ಯಾಪಾರ ಮಾಡಲು ಬಿಡದೆ ತುಂಬಾ ಕಷ್ಟ ಆಗುತ್ತಿದೆ. ನಮಗೆ ಬೇರೆ ಕೆಲಸ ಮಾಡುವ ಶಕ್ತಿ ಇಲ್ಲ. ಜಾತ್ರೆಯನ್ನೇ ನಂಬಿಕೊಂಡು ವ್ಯಾಪಾರ ಮಾಡು ತ್ತಿದ್ದೇವೆ. ಹಾಗಾಗಿ ನಮಗೆ ಈ ಬಾರಿ ಕೂಡ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ದೇವಸ್ಥಾನದ ಆಡಳಿತ ಮಂಡಳಿಯವರು ಸೂಚಿಸಿದ ಜಾಗದಲ್ಲಿ ನಾವು ಸುಂಕ ನೀಡಿ ವ್ಯಾಪಾರ ಮಾಡುತ್ತೇವೆ. ದೇವಸ್ಥಾನಕ್ಕೆ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಹಿಂದೂ ಸಮಾಜೋತ್ಸವ ನಡೆದ ಸಂದರ್ಭದಲ್ಲಿ ನಾವು ಹಿಂದೂ ಬಾಂಧವರಿಗೆ ತಂಪು ಪಾನೀಯಗಳನ್ನು ನೀಡುವ ಮೂಲಕ ಸೌಹಾರ್ದ ಮೆರೆದಿದ್ದೇವೆ. ಆದುದರಿಂದ ಜಿಲ್ಲಾಡಳಿತ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಿ ನಮಗೆ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷ ಮುಹಮ್ಮದ್ ಇಬ್ರಾಹಿಂ, ತೌಫಿಕ್, ಹಮೀದ್ ನೇಜಾರು, ಶಾಹಿದ್ ನೇಜಾರ್, ಯಾಸೀನ್ ಕೆಮ್ಮಣ್ಣು, ಮುಹಮ್ಮದ್ ಅಖಿಲ್ ಸಾಸ್ತಾನ್ ಉಪಸ್ಥಿತರಿದ್ದರು.
450 ಮುಸ್ಲಿಮ್ ವ್ಯಾಪಾರಸ್ಥರು!
ಒಕ್ಕೂಟದಲ್ಲಿ ಸುಮಾರು 700-800 ಸದಸ್ಯರಿದ್ದು, ಇದರಲ್ಲಿ ಸುಮಾರು 450 ಮುಸ್ಲಿಮ್ ವ್ಯಾಪಾರಿಗಳಿದ್ದಾರೆ. ಹಿಂದೂ ಮತ್ತು ಮುಸ್ಲಿಮ್ ವ್ಯಾಪಾರಸ್ಥರು ಎಲ್ಲ ಒಟ್ಟಾಗಿ ಅನೋನ್ಯತೆಯಿಂದ ಯಾವುದೇ ಸಂಘರ್ಷಕ್ಕೆ ಅವಕಾಶ ನೀಡದಂತೆ ದೇವಸ್ಥಾನದ ಜಾತ್ರೆಗಳಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಇದೀಗ ಯಾವುದೋ ತಪ್ಪು ಮಾಹಿತಿಯಿಂದ ನಮಗೆ ವ್ಯಾಪಾರ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಮುಹಮ್ಮದ್ ಆರೀಫ್ ತಿಳಿಸಿದರು.
ಈ ವರ್ಷ ಪೆರ್ಡೂರು ಜಾತ್ರೆಯಲ್ಲಿ ಈ ತಾರತಮ್ಯ ಆರಂಭವಾಗಿದೆ. ಮುಂದೆ ಶಿವಪುರ, ಪೆರ್ಣಂಕಿಲ, ಪಡುಬಿದ್ರಿ ಜಾತ್ರೆಯಲ್ಲೂ ನಮಗೆ ಅವಕಾಶ ನೀಡಿಲ್ಲ. ವ್ಯಾಪಾರ ಮಾಡಲು ಹೋದ ಎಷ್ಟೋ ಮಂದಿ ಮುಸ್ಲಿಮ್ ವ್ಯಾಪಾರಿಗಳು ಅವಕಾಶ ಸಿಗದೆ ವಾಪಾಸ್ಸು ಬಂದಿದ್ದಾರೆ. ಆಟಿಕೆ, ಐಸ್‌ಕ್ರೀಮ್, ಫ್ರೆಶ್‌ಲೈಮ್, ಫ್ಯಾನ್ಸಿ ಸಾಮಗ್ರಿಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರಿದ್ದೇವೆ. ಆಗಸ್ಟ್‌ನಿಂದ ನಮ್ಮ ವ್ಯಾಪಾರ ಆರಂಭವಾಗುತ್ತದೆ. ಮಳೆಗಾಲದಲ್ಲಿ ನಮಗೆ ಯಾವುದೇ ಕೆಲಸ ಇರುವುದಿಲ್ಲ ಎಂದು ಅವರು ತಿಳಿಸಿದರು.
‘ನಾವು ಹಿಂದು ಮುಸ್ಲಿಮ್ ಎಂಬ ಯಾವುದೇ ಬೇಧಬಾವ ಇಲ್ಲದೆ ಒಟ್ಟಿಗೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಈಗ ಕೆಲವು ಕಡೆ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಇದು ಒಳ್ಳೆಯದಲ್ಲ. ನಾವೆಲ್ಲ ಒಂದಾಗಿ ಒಟ್ಟಾಗಿ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ, ಸಂಘರ್ಷಗಳು ಉಂಟಾಗಿಲ್ಲ. ಧರ್ಮದ ಹೆಸರಿನಲ್ಲಿ ತಾರತಮ್ಯ ತೋರದೆ ಎಲ್ಲರಿಗೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಎಲ್ಲರು ಈ ವ್ಯಾಪಾರವನ್ನೇ ನಂಬಿಕೊಂಡು ಸಾಲ ಮಾಡಿ ಕೊಂಡಿದ್ದಾರೆ. ಕೊರೋನಾದಿಂದ ಎರಡು ವರ್ಷ ಸಾಕಷ್ಟು ನೋವು ತಿಂದಿದ್ದೇವೆ’
-ಗಜೇಂದ್ರ, ಜಾತ್ರಾ ವ್ಯಾಪಾರಸ್ಥರು