ಬಡತನದಲ್ಲಿ ಉತ್ತರಪ್ರದೇಶಕ್ಕೆ 3ನೇ ಸ್ಥಾನ : ಬಿಜೆಪಿಗೆ ಅಖಿಲೇಶ್ ಯಾದವ್ ತರಾಟೆ

Update: 2022-03-21 16:07 GMT

ಲಕ್ನೋ, ಮಾ. 21: ಉತ್ತರಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ನೀತಿ ಆಯೋಗದ ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ)ದ ದೇಶದ ಕಳಪೆ ರಾಜ್ಯಗಳ ಪಟ್ಟಿಯಲ್ಲಿ ಉತ್ತರಪ್ರದೇಶ ಕೂಡ ಸೇರಿದೆ ಎಂದಿದ್ದಾರೆ.

‘‘ನೀತಿ ಆಯೋಗದ ಮೊದಲ ಬಹು ಆಯಾಮಗಳ ಬಡತನ ಸೂಚ್ಯಂಕ (ಎಂಪಿಐ)ದಲ್ಲಿ ಬಿಜೆಪಿ ಆಡಳಿತವಿರುವ ಮೂರು ಅತಿ ಬಡ ರಾಜ್ಯಗಳಲ್ಲಿ ಉತ್ತರಪ್ರದೇಶ ಕೂಡ ಸೇರಿದೆ. ಪೋಷಕಾಂಶ ಕೊರತೆಯಲ್ಲಿ ಉತ್ತರಪ್ರದೇಶ ಮೂರನೇ ಸ್ಥಾನ ಪಡೆದುಕೊಂಡಿದೆ.

ಶಿಶು, ಹದಿಹರೆಯದವರ ಮರಣ ಪ್ರಮಾಣದಲ್ಲಿ ಇಡೀ ದೇಶದಲ್ಲಿ ಉತ್ತರಪ್ರದೇಶ ಅತಿ ಕೆಳ ಮಟ್ಟದಲ್ಲಿದೆ. ಇದು ಬಿಜೆಪಿ ಸರಕಾರದ ವಿಫಲತೆಯ ಸಂಕೇತವಾಗಿದೆ’’ ಎಂದು ಅಖಿಲೇಶ್ ಯಾದವ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಅತಿ ಬಡ ರಾಜ್ಯಗಳಲ್ಲಿ ಉತ್ತರಪ್ರದೇಶ ಕೂಡ ಇದೆ ಎಂಬ ಪ್ರತಿಪಾದನೆಯ ದಿನಪತ್ರಿಕೆಯ ವರದಿಯನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ನೀತಿ ಆಯೋಗದ ಎಂಪಿಐ ರ್ಯಾಂಕಿಂಗ್ ವರದಿ ಪ್ರಕಾರ ಬಿಹಾರ್, ಜಾರ್ಖಂಡ್ ಹಾಗೂ ಉತ್ತರಪ್ರದೇಶ ದೇಶದ ಅತಿ ಬಡ ರಾಜ್ಯಗಳಾಗಿ ಹೊರ ಹೊಮ್ಮಿರುವುದನ್ನು ಅಖಿಲೇಶ್ ಯಾದವ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News