×
Ad

ಈ ದ್ವೀಪದಲ್ಲಿ ಎರಡು ದಿನದಲ್ಲಿ 1100 ಲಘು ಭೂಕಂಪ !

Update: 2022-03-22 07:20 IST

ಅಝೊರೆಸ್ (ಪೋರ್ಚ್‍ಗಲ್): ಪೋರ್ಚ್‍ಗಲ್‍ನ ಈ ಪುಟ್ಟ ಜ್ವಾಲಾಮುಖಿ ದ್ವೀಪದಲ್ಲಿ ಕಳೆದ 48 ಗಂಟೆಗಳಲ್ಲಿ 1100ಕ್ಕೂ ಹೆಚ್ಚು ಲಘು ಭೂಕಂಪಗಳು ಸಂಭವಿಸಿವೆ.

ಅಟ್ಲಾಂಟಿಕ್ ಸಾಗರದ ನಡುವೆ ಇರುವ ಅಝೊರೆಸ್ ದ್ವೀಪದಲ್ಲಿ ಸಂಭವಿಸಿದ ಈ ವಿಕೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನು ಭೂಕಂಪ ಬಿಕ್ಕಟ್ಟು ಸ್ಥಿತಿ ಎಂದು ತಜ್ಞರು ಬಣ್ಣಿಸಿದ್ದಾರೆ.

ಅಝೊರೆಸ್ ಭೂಕಂಪ- ಜ್ವಾಲಾಮುಖಿ ಸರ್ವೇಕ್ಷಣಾ ಕೇಂದ್ರ ಸಿಐವಿಐಎಸ್‍ಎ ಮುಖ್ಯಸ್ಥ ರೂಯಿ ಮಾರ್ಕಸ್ ಈ ಬಗ್ಗೆ ಹೇಳಿಕೆ ನೀಡಿ, ಸೋಮವಾರ ದ್ವೀಪದಲ್ಲಿ 1.9 ರಿಂದ 3.3 ತೀವ್ರತೆಯ ಭೂಕಂಪಗಳು ದ್ವೀಪದಲ್ಲಿ ಶನಿವಾರ ಸಂಜೆಯಿಂದೀಚೆಗೆ ಪದೇ ಪದೇ ಸಂಭವಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಹುತೇಕ ಭೂಕಂಪಗಳಿಂದ ಯಾವುದೇ ಹಾನಿಯಾಗಿಲ್ಲವಾದರೂ, 1808ರಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯ ಬಿರುಕಿನ ಪ್ರದೇಶದಲ್ಲಿ ಇದು ಸಂಭವಿಸಿದೆ ಎಂದು ಹೇಳಿದ್ದಾರೆ.

ಅಝೊರೆಸ್ ದ್ವೀಪ ಸಮೂಹದ ಒಂಬತ್ತು ದ್ವೀಪಗಳಲ್ಲಿ ಸಾವೊ ಜಾರ್ಜ್ ಒಂದಾಗಿದ್ದು, ಸುಮಾರು 8400 ಮಂದಿ ಇಲ್ಲಿ ವಾಸವಿದ್ದಾರೆ. ಇದು ಜನಪ್ರಿಯ ಪ್ರವಾಸಿ ತಾಣವಾದ ಫೈಯಾಲ್ ಮತ್ತು ಪಿಕೊ ಸೇರಿದಂತೆ ಆರ್ಚಿಪೆಲೊಗೊದ ಕೇಂದ್ರ ಗುಂಪಿನಲ್ಲಿ ಸೇರಿದೆ.

ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೆಲಾಸ್‍ನ ಮೇಯರ್ ಲೂಯಿಸ್ ಸಿಲ್ವೇರಿಯಾ ಹೇಳಿದ್ದಾರೆ. ಭೂಕಂಪದ ಹಿನ್ನೆಲೆಯಲ್ಲಿ ಸೋಮವಾರ ತುರ್ತು ಯೋಜನೆಗೆ ಚಾಲನೆ ನೀಡಲು ಆದೇಶ ನೀಡಿದ್ದಾರೆ.

ಕಳೆದ ವರ್ಷ ಅಝೊರೆಸ್ ಆಗ್ನೇಯಕ್ಕೆ 1400 ಕಿಲೋಮೀಟರ್ ದೂರದಲ್ಲಿ ಜ್ವಾಲಾಮುಖಿ ಸ್ಫೋಟಕ್ಕೆ ಮುನ್ನ ಸರಣಿ ಭೂಕಂಪಗಳು ಸಂಭವಿಸಿದ್ದವು. 85 ದಿನಗಳ ಕಾಲ ಸಂಭವಿಸಿದ ಈ ಲಾವಾರಸ ಚಿಮ್ಮುವಿಕೆಯಲ್ಲಿ ಸಾವಿರಾರು ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News