ರಷ್ಯಾ ಭೀತಿ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳಿ: ನ್ಯಾಟೋ ದೇಶಗಳಿಗೆ ಉಕ್ರೇನ್ ತರಾಟೆ
ಕೀವ್: ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ) ದೇಶಗಳನ್ನು ಮತ್ತೆ ತರಾಟೆಗೆ ತೆಗೆದುಕೊಂಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಸ್ಕಿ, ನ್ಯಾಟೋ ದೇಶಗಳಿಗೆ ರಷ್ಯಾದ ಭೀತಿ ಇದೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಿ ಎಂದು ಅಗ್ರಹಿಸಿದ್ದಾರೆ.
ಫೆ.24ರಂದು ಉಕ್ರೇನ್ ಮೇಲೆ ಆರಂಭವಾದ ರಷ್ಯನ್ ದಾಳಿ ಮುಕ್ತಾಯವಾಗುವ ಸಾಧ್ಯತೆಗಳು ಗೋಚರಿಸುತ್ತಿಲ್ಲವಾದ ಹಿನ್ನೆಲೆಯಲ್ಲಿ ಝೆಲೆಸ್ಕಿ ಈ ಹೇಳಿಕೆ ನೀಡಿದ್ದಾರೆ.
"ನ್ಯಾಟೋ ನಮ್ಮನ್ನು ಒಪ್ಪಿಕೊಳ್ಳಬೇಕು ಅಥವಾ ರಷ್ಯಾದ ಭೀತಿಯಿಂದಾಗಿ ನಮ್ಮನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಬೇಕು" ಎಂದು ಸವಾಲು ಹಾಕಿದ್ದಾಗಿ ಸರ್ಕಾರಿ ಪ್ರಸಾರ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ 'ಕೀವ್ ಇಂಡಿಪೆಂಡೆಂಟ್' ವರದಿ ಮಾಡಿದೆ.
"ಆಗ ನಮಗೆ ಸಮಾಧಾನವಾಗುತ್ತದೆ. ನ್ಯಾಟೋ ಸದಸ್ಯ ರಾಷ್ಟ್ರ ಅಲ್ಲದಿದ್ದರೂ ನಮಗೆ ಭದ್ರತಾ ಖಾತರಿಯನ್ನು ನ್ಯಾಟೋ ಸದಸ್ಯ ದೇಶಗಳು ನೀಡುವುದಕ್ಕೆ ಒಪ್ಪಿಗೆ ಕೊಡುತ್ತೇವೆ. ರಾಜಿಯ ಅಂಶ ಇರುವುದು ಅಲ್ಲಿ. ಅಲ್ಲಿಗೆ ಯುದ್ಧ ಕೊನೆಗೊಳ್ಳುತ್ತದೆ" ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯಲು ಮುಂದಾಗಿರುವುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕೋಪಕ್ಕೆ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ವಿಶೇಷ ಸೇನಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ದೇಶದ ಮೇಲೆ ಆಕ್ರಮಣ ನಡೆಸಿದ್ದಾರೆ. ಆದಾಗ್ಯೂ ಉಕ್ರೇನ್ ನ್ಯಾಟೋ ಮಿಲಿಟರಿ ಕೂಟದ ಸದಸ್ಯತ್ವ ಪಡೆಯುವುದಿಲ್ಲ ಎಂದು ಝೆಲೆಸ್ಕಿ ಇತ್ತೀಚಿನ ದಿನಗಳಲ್ಲಿ ಒಪ್ಪಿಕೊಂಡಂತಿದೆ.
"ನ್ಯಾಟೋ ದೇಶಗಳು ಉಕ್ರೇನನ್ನು ಸೇರಿಸಿಕೊಳ್ಳಲು ಸಿದ್ಧವಿಲ್ಲ ಎನ್ನುವ ವಾಸ್ತವದ ಬಗ್ಗೆ ನನಗೆ ಬಹಳ ಹಿಂದೆಯೇ ಅರಿವಾಗಿದೆ. ಈ ಕೂಟಕ್ಕೆ ವಿವಾದಾತ್ಮಕ ಅಂಶಗಳ ಬಗ್ಗೆ ಮತ್ತು ರಷ್ಯಾ ಜತೆಗಿನ ಸಂಘರ್ಷದ ಬಗ್ಗೆ ಭಯ ಇದೆ" ಎಂದು ಅವರು ಹೇಳಿಕೆ ನೀಡಿದ್ದರು.