ಬಸವಣ್ಣನವರ ವಚನಗಳಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ

Update: 2022-03-22 05:20 GMT
Basavanna

12ನೇ ಶತಮಾನದಲ್ಲಿ ಬಸವಣ್ಣನವರು ‘‘ಉಳ್ಳವರು ಶಿವಾಲಯವ ಮಾಡಿಹರು ನಾನೇನು ಮಾಡಲಿ ಬಡವನಯ್ಯ’’ ಎಂದು ಹೇಳಿದರು. ಈ ಉಳ್ಳವರ ಮತ್ತು ಬಡವರಬಗ್ಗೆ ಅರಿವು ಮೂಡಿದಾಗ ಸಾಮಾಜಿಕ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುವವು. ಒಂದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಈ ರೀತಿಯಾಗಿ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸಬೇಕಾಗುತ್ತಿದೆ. ಸಾಮಾಜಿಕ ವೈರುಧ್ಯಗಳನ್ನು ಗುರುತಿಸಲು ವರ್ಗಪ್ರಜ್ಞೆ ಅವಶ್ಯವಾಗಿದೆ ಎಂಬುದನ್ನು ಬಸವಣ್ಣನವರು ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ತೋರಿಸಿಕೊಟ್ಟರು.

ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ಕಟ್ಟ ಕಡೆಯ ಮನುಷ್ಯರನ್ನು ಮೊತ್ತ ಮೊದಲು ಗುರುತಿಸುವುದು ಬಸವಣ್ಣನವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಇದು ಬಹಳ ಮಹತ್ವದ ವಿಚಾರ. ಇಡೀ ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಬಸವಣ್ಣನವರು ಮನುಷ್ಯರನ್ನು ವರ್ಗಗಳಾಗಿ ವಿಂಗಡಿಸುತ್ತಾರೆ. ಐರೋಪ್ಯ ರಾಷ್ಟ್ರಗಳಲ್ಲಿ 13ನೇ ಶತಮಾನದಲ್ಲಿ ವರ್ಗಪ್ರಜ್ಞೆ ಬಂದಿತು. ನಂತರ ಅದು ಸ್ಪಷ್ಟವಾಗಿ ಗೋಚರಿಸಿದ್ದು 19ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರು ಬಂದಾಗ. ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ‘‘ಉಳ್ಳವರು ಶಿವಾಲಯವ ಮಾಡಿಹರು ನಾನೇನು ಮಾಡಲಿ ಬಡವನಯ್ಯ್’’ ಎಂದು ಹೇಳಿದರು. ಈ ಉಳ್ಳವರ ಮತ್ತು ಬಡವರ ಬಗ್ಗೆ ಅರಿವು ಮೂಡಿದಾಗ ಸಾಮಾಜಿಕ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುವವು. ಒಂದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಈ ರೀತಿಯಾಗಿ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸಬೇಕಾಗುತ್ತಿದೆ. ಸಾಮಾಜಿಕ ವೈರುಧ್ಯಗಳನ್ನು ಗುರುತಿಸಲು ವರ್ಗಪ್ರಜ್ಞೆ ಅವಶ್ಯವಾಗಿದೆ ಎಂಬುದನ್ನು ಬಸವಣ್ಣನವರು ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ತೋರಿಸಿಕೊಟ್ಟರು. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುತ್ತಲೇ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ವೈರುಧ್ಯಗಳನ್ನು ಗುರುತಿಸುವ ಕ್ರಿಯೆ ಬಹಳ ಗುರುತರವಾದುದು. ಇಂತಹ ಅದ್ವಿತೀಯವಾದ ಚಿಂತನಾ ಕಾಣಿಕೆಯನ್ನು ಬಸವಣ್ಣನವರು 12ನೇ ಶತಮಾನದಲ್ಲೇ ನೀಡಿದ್ದು ಐತಿಹಾಸಿಕವಾಗಿದೆ.

‘‘ವೇದ ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ?

ಕವಿ ಗಮಕಿ ವಾದಿ ವಾಗ್ಮಿಗಳು ಹಿರಿಯರೆ?

ನಟಿನಿ ಬಾಣ ವಿಲಾಸಿ ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?

ಹಿರಿಯತನವಾವುದೆಂದಡೆ ಗುಣಜ್ಞಾನ ಆಚಾರಧರ್ಮ

ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ.’’

ಎಂದು ಬಸವಣ್ಣನವರು ತಿಳಿಸಿದ್ದಾರೆ. ವೇದಾಗಮ ಪಂಡಿತರು, ಕವಿ, ವಾಗ್ಮಿ ಮುಂತಾದವರು ರಾಜನ ದರ್ಬಾರದಲ್ಲಿ ಇರುವವರು. ಇವರ ಜ್ಞಾನಕ್ಕೆ ರಾಜಮನ್ನಣೆ ಇದೆ. ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇದೆ. ಇವರೆಲ್ಲ ಸಮಾಜದಲ್ಲಿ ಉನ್ನತ ವರ್ಗ ಮತ್ತು ವರ್ಣಗಳಿಗೆ ಸಂಬಂಧಿಸಿದವರು. ಈ ಜ್ಞಾನಕ್ಕೆ ಮುಖಾಮುಖಿಯಾಗಿ ಕಾಯಕಜೀವಿಗಳ ಜ್ಞಾನವೂ ಇದೆ. ಆ ಜ್ಞಾನವನ್ನು ಅವರು ತಮ್ಮ ಕಾಯಕದ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅವರದು ಅನುಭವಜ್ಞಾನ ಎನಿಸುತ್ತದೆ. ‘ನಟಿನಿ’, ಅಂದರೆ ನಾಲ್ಕು ಕಾಸಿಗೋಸ್ಕರ ದಾರಿಯಲ್ಲಿ ನೃತ್ಯ ಮಾಡುವವಳು. ಬಹುರೂಪಿಗಾರರು ಹೀಗೆ ಬೀದಿಬದಿಯಲ್ಲೇ ತಮ್ಮ ಕಲೆಯ ಪ್ರದರ್ಶನ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು. ‘ಬಾಣ’, ಅಂದರೆ ಬಾಣವನ್ನು ಗುರಿಯಾಗಿಡುವ ತಜ್ಞ ಗುರಿಕಾರರು. ‘ವಿಲಾಸಿ’ ಅಂದರೆ ಜನರನ್ನು ತಮ್ಮ ಚಮತ್ಕಾರದ ನುಡಿಗಳಿಂದ ರಂಜಿಸುವವರು ಮತ್ತು ಹಗ್ಗದ ಮೇಲೆ ಕಸರತ್ತು ಮಾಡುವಂತಹ ಸುವಿದ್ಯೆಯನ್ನು ಕಲಿತ ‘‘ಡೊಂಬನೇನು ಕಿರಿಯನೆ’’ ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಸಮತೋಲನದ ತತ್ತ್ವವನ್ನು ನಾವು ವಿಜ್ಞಾನದ ಪಾಠದಲ್ಲಿ ಕಲಿಯುತ್ತೇವೆ. ಆದರೆ ಡೊಂಬರಾಟದವರ ಹಾಗೆ ಹಗ್ಗದ ಮೇಲೆ ನಡೆಯಲು ಈ ಸಮತೋಲನದ ಪಾಠ ಹೇಳುವವರಿಗೆ ಬರುವುದಿಲ್ಲ, ಪಾಠ ಕಲಿಯುವವರಿಗೂ ಬರುವುದಿಲ್ಲ. ಏಕೆಂದರೆ ಅದು ಅನುಭವದಿಂದ ಬರುವಂತಹದ್ದು. ಇಂತಹ ಅನುಭವ ಜ್ಞಾನವನ್ನು ಪ್ರದರ್ಶಿಸುವವರು ಅದು ಹೇಗೆ ಕಡಿಮೆ? ಈ ಕುರಿತು ಮಾತನಾಡುವವರು ಅದು ಹೇಗೆ ಹೆಚ್ಚು? ಎಂಬ ಪ್ರಶ್ನೆಯನ್ನು ಬಸವಣ್ಣನವರು ಎತ್ತುವ ಮೂಲಕ ಕಾಯಕಜೀವಿಗಳ ಮಹತ್ವವನ್ನು ಸೂಚಿಸುತ್ತಾರೆ. ವಚನದ ಕೊನೆಯಲ್ಲಿ ‘‘ಹಿರಿಯತನವಾವುದೆಂದಡೆ ಗುಣಜ್ಞಾನ ಆಚಾರಧರ್ಮ’’ ಎಂದು ಹೇಳುತ್ತಾರೆ. ಇವೆರಡು ಬಹಳ ಮಹತ್ವದ್ದವುಗಳಾಗಿವೆ. ಗುಣಜ್ಞಾನವು ವ್ಯಷ್ಟಿಪ್ರಜ್ಞೆಯಲ್ಲಿ ಬರುವುದು. ಬಡವನಿರಲಿ, ಶ್ರೀಮಂತನಿರಲಿ ಸದ್ಗುಣ(ಶೀಲ)ಗಳು ಅವನ ಘನತೆವೆತ್ತ ವ್ಯಕ್ತಿತ್ವಕ್ಕೆ ಮೆರುಗು ನೀಡುತ್ತವೆ. ಅವು ಆಚರಣೆಯಲ್ಲಿ ಅನುಷ್ಠಾನಗೊಳ್ಳುತ್ತವೆ. ವ್ಯಕ್ತಿಯ ಆಚಾರಧರ್ಮವು ಸಾಮೂಹಿಕವಾದಾಗ ಮೌಲ್ಯವಾಗುತ್ತದೆ. ಈ ಮೌಲ್ಯವನ್ನು ನಾವು ಸಮಷ್ಟಿಯಲ್ಲಿ ಪಡೆಯಬೇಕಾದರೆ ವ್ಯಷ್ಟಿಯಲ್ಲಿ ರೂಢಿಸಿಕೊಳ್ಳಬೇಕಾಗುತ್ತದೆ. ಹೀಗೆ ಬಸವಣ್ಣನವರು ನಮಗೆ ಹೊಸ ವಿಚಾರವನ್ನು ಕೊಟ್ಟರು. ಅದೇನೆಂದರೆ ಇಷ್ಟಲಿಂಗದ ಮೂಲಕ ವ್ಯಷ್ಟಿಪ್ರಜ್ಞೆ ಮತ್ತು ಜಂಗಮಲಿಂಗದ ಮೂಲಕ ಸಮಷ್ಟಿ (ಸಮಾಜ) ಪ್ರಜ್ಞೆ. ಇಷ್ಟಲಿಂಗದಲ್ಲಿ ನಾವು ಗುಣಗ್ರಾಹಿಗಳಾಗಬೇಕು. ನಂತರ ಅದನ್ನು ಆಚರಣೆಯಲ್ಲಿ ತರಬೇಕು. ಹೀಗೆ ಇಷ್ಟಲಿಂಗದ ಮೂಲಕ ಪಡೆಯುವ ಅರಿವನ್ನು ಸಮಾಜವೆಂಬ ಜಂಗಮಲಿಂಗದಲ್ಲಿ ಆಚರಣೆಗೆ ತರಬೇಕು. ಇಷ್ಟಲಿಂಗ ಅರಿವನ್ನು ಕೊಟ್ಟರೆ, ಸಕಲಜೀವಾತ್ಮರಿಂದ ಕೂಡಿದ ವಿಶ್ವವ್ಯಾಪಿ ಸಮಾಜವೆಂಬ ಜಂಗಮಲಿಂಗ ಆ ಅರಿವನ್ನು ಆಚರಣೆಯಲ್ಲಿ ತರಲು ಪ್ರೇರೇಪಿಸುತ್ತದೆ. ಹೀಗೆ ಒಬ್ಬ ವ್ಯಕ್ತಿ ವ್ಯಷ್ಟಿಪ್ರಜ್ಞೆಯಿಂದ ಸಮಷ್ಟಿಪ್ರಜ್ಞೆಗೆ ಸಾಗುವ ಪ್ರಕ್ರಿಯೆಯನ್ನು ಬಸವಣ್ಣನವರು ತೋರಿಸಿಕೊಟ್ಟಿದ್ದಾರೆ. ಅವರ ದೃಷ್ಟಿಯಲ್ಲಿ ಕಣ್ಣಿಗೆ ಕಾಣುವ ಜಗತ್ತೆಲ್ಲ ಸಕಲಜೀವಾತ್ಮರಿಂದ ಕೂಡಿರುವ ಮಹಾಮನೆ. ಬಸವದರ್ಶನದಲ್ಲಿ ಮಾನವರು ಮನೆಯಿಂದ ಮಹಾಮನೆಯ ಕಡೆಗೆ ಸಾಗುತ್ತಾರೆ. ನಮ್ಮ ಶರೀರ ಒಂದು ಮನೆಯಾದರೆ ಇಡೀ ಜಗತ್ತು ಮಹಾಮನೆ. ಅಂತರಂಗ ಶುದ್ಧಿಯಿಂದ ಪ್ರಾರಂಭಿಸಿ ಬಹಿರಂಗ ಶುದ್ಧಿಯ ಕಡೆಗೆ ಹೋಗಲು ಮಾರ್ಗದರ್ಶನ ಮಾಡುವ ದರ್ಶನವೇ ಬಸವದರ್ಶನ. ಗುಣಜ್ಞಾನವಿಲ್ಲದೆ ಅಂತರಂಗದ ಶುದ್ಧಿ ಇಲ್ಲ. ಸಪ್ತಶೀಲಗಳಿಂದ ಬರುವ ಈ ಗುಣಜ್ಞಾನವು ಸಮತಾಪ್ರಜ್ಞೆಗೆ ಮೂಲವಾಗಿದೆ. ಸಾಮಾಜಿಕ ನ್ಯಾಯವೆಂಬ ಬಹಿರಂಗ ಶುದ್ಧಿಗೆ ಮೂಲವಾದ ಸಮತಾಪ್ರಜ್ಞೆ ಇಲ್ಲದೆ ಆಚಾರಧರ್ಮವಿಲ್ಲ. ಇದಕ್ಕೆ ‘‘ನಡೆ ನುಡಿ ಸಿದ್ಧಾಂತ’’ ಎಂದು ಕರೆಯುತ್ತಾರೆ. ಅರಿವನ್ನು ಪಡೆಯುವುದು. ಪಡೆದ ಅರಿವನ್ನು ಆಚರಣೆಗೆ ತರುವುದು. ಹೀಗೆ ವಿಚಾರವನ್ನು ಆಚರಣೆಗೆ ತರುವ ಕ್ರಮವನ್ನು ಬಸವಣ್ಣನವರು ನಮಗೆ ತಿಳಿಸಿದ್ದಾರೆ.

ಇದನ್ನು ಸಾಧಿಸುವುದಕ್ಕಾಗಿ ಬಸವಣ್ಣನವರು ನಾಲ್ಕು ಸಾಮಾಜಿಕ ಅಂಶಗಳ ಕಡೆಗೆ ಗಮನ ಸೆಳೆಯುತ್ತಾರೆ. ಲಿಂಗಭೇದವಿಲ್ಲದ, ಜಾತಿ ಮತ್ತು ವರ್ಣಭೇದವಿಲ್ಲದ ಹಾಗೂ ವರ್ಗಭೇದವಿಲ್ಲದ ಸಮಾಜದಲ್ಲಿ ಮಾತ್ರ ನಾವು ಇಂಥ ಸಾಮಾಜಿಕ ನ್ಯಾಯವನ್ನು ಕಾಣಲು ಸಾಧ್ಯವಿದೆ. ಈ ವಿಚಾರವನ್ನು ಮನಗಾಣಿಸಲು ಬಸವಣ್ಣನವರು ಅನೇಕ ವಚನಗಳನ್ನು ಬರೆದಿದ್ದಾರೆ. ಅವುಗಳಲ್ಲಿನ ಒಂದು ವಚನ:

‘‘ಲಿಂಗವ ಪೂಜಿಸಿ ಫಲವೇನಯ್ಯ? ಸಮರತಿ ಸಮಕಳೆ ಸಮಸುಖವ ಅರಿಯದನ್ನಕ್ಕ.

ಲಿಂಗವ ಪೂಜಿಸಿ ಫಲವೇನಯ್ಯ?

ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?’’

 ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡು ಎಂದು ಬಸವಣ್ಣನವರು ಹೇಳುವುದಿಲ್ಲ. ಲಿಂಗಪೂಜೆಯಲ್ಲಿ ಕೂಡ ಅವರು ಫಲವನ್ನು ಬಯಸುತ್ತಾರೆ. ಲಿಂಗಪೂಜೆಯ ಫಲ ಯಾವುದು ಎಂಬುದನ್ನು ಅವರು ವಿವರಿಸುತ್ತಾರೆ. 21ನೇ ಶತಮಾನದ ಇಡೀ ಜಗತ್ತಿಗೆ ಬೇಕಾದ ವಚನವಿದು.

ಮೊದಲಿಗೆ ಮೂರು ವಿಚಾರಗಳನ್ನು ಹೇಳುತ್ತಾರೆ. (ಈ ವಚನ ಆನುಭಾವಿಕ ಅರ್ಥವನ್ನೂ ಹೊಂದಿದೆ. ಸಾಮಾಜಿಕ ಅರ್ಥವನ್ನೂ ಹೊಂದಿದೆ. ಸಮಯದ ಅಭಾವದಿಂದ ನಾನಿಲ್ಲಿ ಅದರ ಸಾಮಾಜಿಕ ಅರ್ಥವನ್ನು ಮಾತ್ರ ವಿವರಿಸುತ್ತಿರುವೆ.) ಸಮರತಿ ಎಂದರೆ ಲಿಂಗಸಮಾನತೆ, ಸಮಕಳೆ ಎಂದರೆ ಮಾನವಕುಲಕ್ಕೆ ಇರುವ ತೇಜಸ್. ಸಮಸುಖ ಎಂದರೆ ನಿಸರ್ಗದಲ್ಲಿ ಬಡವರು ಮತ್ತು ಶ್ರೀಮಂತರು ಪಡೆಯುವ ಒಂದೇ ತೆರನಾದ ಸುಖ. ಲಿಂಗಭೇದ ಮಾಡುತ್ತ ಹೆಣ್ಣನ್ನು ಕೀಳಾಗಿ ಕಾಣುವುದು ಸಲ್ಲದು. ಒಳಗಿರುವ ಆತ್ಮಕ್ಕೆ, ಭಾವಕೋಶಕ್ಕೆ ಮತ್ತು ಜ್ಞಾನಕ್ಕೆ ಹೆಣ್ಣು ಗಂಡೆಂಬ ಭೇದಭಾವವಿಲ್ಲ.

 ಇಡೀ ಮಾನವಕುಲಕ್ಕೆ ಮಾನವ ಕಳೆ ಮಾತ್ರ ಇದೆ. ಬ್ರಹ್ಮ ತೇಜಸ್ (ಕಳೆ), ಕ್ಷಾತ್ರ ತೇಜಸ್ ಎನ್ನುವುದು ಮಾನವ ನಿರ್ಮಿತವೇ ಹೊರತಾಗಿ ನಿಸರ್ಗ ನಿರ್ಮಿತವಲ್ಲ. ಭೇದಭಾವ ಮಾಡದ ನಿಸರ್ಗವು ಇಡೀ ಜೀವಸಂಕುಲಕ್ಕೆ ಸಮನಾದ ಸುಖ ಕೊಟ್ಟಿದೆ. ಗಾಳಿ, ಬೆಳಕು, ಬೆಳದಿಂಗಳು, ತಂಪು, ಬಿಸಿ, ಹಣ್ಣು ಹಂಪಲುಗಳ ರುಚಿ ಹೀಗೆ ಯಾವುದನ್ನು ತೆಗೆದುಕೊಂಡರೂ ಬಡವ ಶ್ರೀಮಂತ ಎನ್ನದೆ ಸವನಾಗಿ ನೋಡಿಕೊಂಡಿದೆ.

ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದ ಮುಂತಾದ ಭೇದಗಳು ಕೃತ್ರಿಮವಾದುವು. ಆದ್ದರಿಂದ ಲಿಂಗಭೇದ ಇರಬಾರದು, ಜಾತಿ ಮತ್ತು ವರ್ಣಭೇದ ಇರಬಾರದು ಹಾಗೂ ವರ್ಗಭೇದ ಇರಬಾರದು ಎಂಬ ಅರಿವನ್ನು ವಚನದ ಮೊದಲೆರಡು ಸಾಲುಗಳು ಮೂಡಿಸುತ್ತವೆ. ಇಂಥ ಅರಿವೇ ಲಿಂಗಪೂಜಾ ಫಲ. ಹೀಗೆ ಸಮರತಿ, ಸಮಕಳೆ ಮತ್ತು ಸಮಸುಖವನ್ನು ಅರಿಯದಿದ್ದರೆ ಲಿಂಗಪೂಜಾ ಫಲವಿಲ್ಲ ಎಂದು ಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ನ್ಯಾಯ ಲಭಿಸಬೇಕಾದರೆ ಮಾನವಕುಲ ಒಂದು ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ನಾಲ್ಕನೆಯ ಅಂಶ. ಈ ವಿಚಾರವನ್ನು ವಚನದ ಮುಂದಿನ ಸಾಲುಗಳಲ್ಲಿ ತಿಳಿಸಿದ್ದಾರೆ. ‘‘ಲಿಂಗವ ಪೂಜಿಸಿ ಫಲವೇನಯ್ಯಾ? ಕೂಡಲಸಂಗಮ ದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ’’ ಎಂದು ಹೇಳುವಲ್ಲಿ ಮಾನವಕುಲದ ಏಕತೆಯ ಪಾಠವಿದೆ. ನದಿಯೊಳಗೆ ನದಿ ಕೂಡಿದಾಗ ಅವು ಹೇಗೆ ಅಭೇದ್ಯವಾಗುವವೋ ಹಾಗೆ ಮಾನವ ಕುಲ ಎಲ್ಲ ವರ್ಣ ಮತ್ತು ಜನಾಂಗಭೇದಗಳನ್ನು ಮೀರಿ ಒಂದಾಗಬೇಕು ಎಂಬುದು ಬಸವಣ್ಣನವರ ಆಶಯವಾಗಿದೆ. ವರ್ಗ, ಲಿಂಗ, ಜಾತಿ, ವರ್ಣ, ಧರ್ಮ, ದೇಶ, ಭಾಷೆಗಳು ಬೇರೆಬೇರೆಯಾದರೂ ಮಾನವಕುಲ ಒಂದೇ ಎಂಬ ಸತ್ಯದ ದರ್ಶನ ಈ ವಚನದಿಂದ ಆಗುತ್ತದೆ. ಈ ಸತ್ಯವನ್ನು ಅರಿತುಕೊಂಡಾಗ ಮಾತ್ರ ಸಾಮಾಜಿಕ ನ್ಯಾಯ ಕೊಡಲು ಮತ್ತು ಪಡೆಯಲು ಸಾಧ್ಯವಾಗುವುದು. ಸಾಮಾಜಿಕ ನ್ಯಾಯಕ್ಕಾಗಿ ನಾವು ಮಾನವಹಕ್ಕುಗಳ ಕಡೆಗೆ ಗಮನ ಹರಿಸಿದಾಗ ಮತ್ತೆ ಮತ್ತೆ ನಮಗೆ ಬಸವಣ್ಣನವರು ಬಹಳ ವಿಶಿಷ್ಟವಾಗಿ ಕಾಣುತ್ತಾರೆ. ಮಹಿಳೆಯರು, ದಲಿತರು ಮತ್ತು ಕಾಯಕಜೀವಿಗಳಿಗೆ ಐತಿಹಾಸಿಕವಾಗಿ ಎಂದೂ ನ್ಯಾಯ ಸಿಕ್ಕಿಲ್ಲ. ಬಸವಣ್ಣನವರು ಮಾನವ ಹಕ್ಕುಗಳ ವಿಚಾರದಲ್ಲಿ ಎಲ್ಲ ರೀತಿಯ ಜನರಿಗೆ ಸ್ಪಂದಿಸಿದ್ದಾರೆ. ಈ ಸ್ಪಂದನ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದೆ.

ಮಹಿಳೆಯರ, ಕಾರ್ಮಿಕರ ಮತ್ತು ಕರಿಯರ ಹಕ್ಕುಗಳ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಾರಿಗೂ ಕನಸು ಕೂಡ ಬೀಳದ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಈ ಎಲ್ಲರ ಹಕ್ಕುಗಳ ಬಗ್ಗೆ ಮಾತನಾಡಿದ್ದು ವಿಶ್ವದ ಇತಿಹಾಸದ ಪುಟಗಳಲ್ಲಿ ಸೇರಬೇಕಾಗಿದೆ. ಅಹಿಂಸಾ ಹೋರಾಟದ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸಬೇಕಾದ ಕಲೆಯನ್ನು ಬಸವಣ್ಣನವರು ಕಲಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಪ್ರತಿಕೂಲವಾದ ಲಿಂಗಭೇದ, ಜಾತಿ ಮತ್ತು ವರ್ಣಭೇದ ಹಾಗೂ ವರ್ಗಭೇದಗಳನ್ನು ರಕ್ಷಿಸುತ್ತ ಮಾನವ ಏಕತೆಯನ್ನು ಸಾಧಿಸಲಿಕ್ಕಾಗದು ಎಂದು ಬಸವಣ್ಣನವರು ಪ್ರತಿಪಾದಿಸಿದ್ದಾರೆ. 1776ರಲ್ಲಿ ಬ್ರಿಟನ್‌ನಿಂದ ಅಮೆರಿಕ ಸ್ವತಂತ್ರವಾಯಿತು. ಅಮೆರಿಕದ ಸ್ವಾತಂತ್ರ್ಯ ಘೋಷಣೆ ಮೇಲ್ವರ್ಗದ ಪುರುಷ ಪ್ರಧಾನವಾದ ಘೋಷಣೆಯಾಯಿತು. ಈ ಘೋಷಣೆಯಲ್ಲಿ ಎತ್ತಿಹಿಡಿದಂತಹ ಸ್ವಾತಂತ್ರ್ಯ ಮತ್ತು ಸಮಾನತೆ ಶ್ರೀಮಂತ ಪುರುಷರಿಗಾಗಿ ಮಾತ್ರ ಇತ್ತು. ಮಹಿಳೆಯರು, ಗುಲಾಮರು, ಆಸ್ತಿ ಇಲ್ಲದವರು ಮತ್ತು ಕರಿಯರು ಈ ಹಕ್ಕುಗಳಿಂದ ವಂಚಿತರಾದರು. ರೂಸೋನ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಘೋಷಣೆಯು 1789ರ ಫ್ರೆಂಚ್ ಕ್ರಾಂತಿಗೆ ಕಾರಣವಾಯಿತು. ಆದರೆ ಅದೇ ರೂಸೋ 1762ರಲ್ಲಿ ಮೌಢ್ಯವು ಮಹಿಳೆಯರಿಗೆ ಸಂಪೂರ್ಣ ಲಾಭದಾಯಕವಾಗಿದೆ ಎಂದು ಪ್ರತಿಪಾದಿಸಿದ್ದ. ಅವರು ರಾಜಕೀಯದಲ್ಲಿ ಇರಬಾರದು ಎಂದು ಕೂಡ ಹೇಳಿದ್ದ. ಹೀಗೆ ಜಗತ್ತಿನ ಎಲ್ಲೆಡೆ ಪುರುಷಪ್ರಧಾನ ಸಮಾಜಗಳಲ್ಲಿ ಮಹಿಳೆಯರು ಪುರುಷರ ಅಡಿಯಾಳುಗಳಾಗುತ್ತಲೇ ಬಂದಿದ್ದಾರೆ. ಫ್ರೆಂಚ್ ಕ್ರಾಂತಿಯ ನಂತರ 1789 ರಲ್ಲೇ ನಾಗರಿಕ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದಾಗ ಮಹಿಳೆಯರ ಕುರಿತ ರೂಸೋನ ವಿಚಾರಗಳನ್ನು ಆ ಘೋಷಣೆಯಲ್ಲಿ ಸೇರ್ಪಡೆ ಮಾಡಲಾಯಿತು. ಮಹಿಳೆಯರ ಮತ್ತು ಗುಲಾಮರ ಹಕ್ಕುಗಳ ಬಗ್ಗೆ ಮಾತನಾಡದ ಈ ಘೋಷಣೆ ಅಪೂರ್ಣವಾಯಿತು. ಹೀಗೆ ಇತಿಹಾಸದ ಬಹುಮುಖ್ಯ ಕ್ರಾಂತಿಗಳಲ್ಲಿ ಒಂದಾದ ಫ್ರೆಂಚ್ ಕ್ರಾಂತಿ ಮೇಲ್ವರ್ಗದ ಪುರುಷ ಪ್ರಧಾನ ಕ್ರಾಂತಿಯಾಗಿ ಮಾರ್ಪಟ್ಟಿತು.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News