ಶೂದ್ರ-ದಲಿತ, ಬ್ರಾಹ್ಮಣೇತರ ಚಳವಳಿಗಳ ಸಂಕ್ಷಿಪ್ತ ಇತಿಹಾಸವನ್ನು ಕಟ್ಟಿಕೊಡುವ ಕೃತಿ

Update: 2022-03-22 06:21 GMT

ಡಾ. ಟಿ. ಆರ್. ಚಂದ್ರಶೇಖರ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ 1996ರಿಂದ ಕಾರ್ಯನಿರ್ವಹಿಸಿ 2013ರಲ್ಲಿ ನಿವೃತ್ತರಾಗಿದ್ದಾರೆ. ಅಭಿವೃದ್ಧಿ, ವಿಕೇಂದ್ರೀಕರಣ, ಮಾನವ ಅಭಿವೃದ್ಧಿ, ಲಿಂಗ ಸಂಬಂಧಗಳು, ವಚನ ಸಂಸ್ಕೃತಿ ಇವರ ಅಧ್ಯಯನ ಕ್ಷೇತ್ರಗಳು. ವಾಸ್ತವವಾದಿ, ಜನಕೇಂದ್ರಿತ ದೃಷ್ಟಿಕೋನದಿಂದ ವಿಷಯ, ವಿದ್ಯಮಾನಗಳನ್ನು ವಿಶ್ಲೇಷಿಸುವ ಡಾ. ಟಿ. ಆರ್. ಚಂದ್ರಶೇಖರ ಅವರು ನಮ್ಮ ನಾಡಿನ, ಪ್ರಮುಖ ಲೇಖಕ, ಚಿಂತಕರಲ್ಲೊಬ್ಬರು.

‘ಪ್ರಸ್ತುತ ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ: ಒಂದು ಅಧ್ಯಯನ’ ಎಂಬ ಕೃತಿಯನ್ನು ಕನ್ನಡ ಓದುಗರ ಕೈಗಿತ್ತಿದ್ದಾರೆ. ಮೀಸಲಾತಿ ಮತ್ತು ಸಂವಿಧಾನ ಕುರಿತೇ ಪ್ರಶ್ನೆಗಳೇಳುತ್ತಿರುವ ಇಂದಿನ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಕೃತಿ, ಮೀಸಲಾತಿಯ ಅವಶ್ಯಕತೆ, ಅನುಷ್ಠಾನಗೊಂಡ ಸಂದರ್ಭ, ಅದಕ್ಕಾಗಿ ನಡೆದ ಚಳವಳಿಗಳನ್ನು ಮಾನವ ಸಮಾಜದ ವಿಕಾಸದ ಹಿನ್ನೆಲೆಯಿಂದ ಗ್ರಹಿಸಿ ರಚಿಸಲ್ಪಟ್ಟಿದೆ. ಲೇಖಕರು ಸ್ವಾತಂತ್ರ್ಯ ಪೂರ್ವದಿಂದ ಚಾತುರ್ವರ್ಣ ವ್ಯವಸ್ಥೆಯ ಪರಿಣಾಮದಿಂದ ಹೊರತಳ್ಳಲ್ಪಟ್ಟ ಜನಸಮೂಹದ ಸಂಕಟ ಸಂಘರ್ಷಗಳನ್ನು ದಾಖಲಿಸುತ್ತಲೇ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಸಂದರ್ಭದಲ್ಲಿ ಜಾತಿಕಾರಣದಿಂದ ಅವಕಾಶ ನಿರಾಕರಿಸಲ್ಪಟ್ಟ ಜನರಿಗಾಗಿ ರೂಪಗೊಂಡ ‘ಮಿಲ್ಲರ್ ಸಮಿತಿ’ ರಚನೆಯ ಸಂದರ್ಭ ಮತ್ತು ಪರಿಣಾಮಗಳ ಕುರಿತು ಬರೆದಿದ್ದಾರೆ.

ಈ ಕೃತಿ ಕೇವಲ ಮೀಸಲಾತಿ ಕುರಿತ ಮಾಹಿತಿಗಳಲ್ಲದೇ ಸ್ವಾಭಿಮಾನ ಮತ್ತು ಸ್ವಾವಲಂಬನೆಗಾಗಿ ನಡೆದ ಶೂದ್ರ-ದಲಿತ, ಬ್ರಾಹ್ಮಣೇತರ ಚಳವಳಿಗಳ ಸಂಕ್ಷಿಪ್ತ ಇತಿಹಾಸವನ್ನು ಕಟ್ಟಿಕೊಡುತ್ತದೆ. ಶತಮಾನದ ಹಿಂದೆಯೇ ಹಲವಾರು ವಿರೋಧಗಳನ್ನು ಎದುರಿಸಿ ಜಾರಿಗೆ ಬಂದ ಮಿಲ್ಲರ್ ಸಮಿತಿಯ ಶಿಫಾರಸುಗಳ ಜಾರಿಯ ಹೆಚ್ಚಿನ ಫಲಾನುಭವಿಗಳು ದಲಿತರಿಗಿಂತ ಹೆಚ್ಚಾಗಿ ಶೂದ್ರರು ಎಂಬುದು ಗಮನಾರ್ಹ, ಸಮಾಜೋ-ರಾಜಕೀಯ ಅಧ್ಯಯನಕ್ಕೆ ಸೂಕ್ತ ಆಕರವಾಗಿರುವ ಈ ಕೃತಿ ಹೆಚ್ಚು ಜನರಿಗೆ ತಲುಪಲೆಂದು ಆಶಿಸುವೆ.

(ಬೆನ್ನುಡಿಯಿಂದ)

Writer - ಡಾ. ಸಿದ್ದನಗೌಡ ಪಾಟೀಲ

contributor

Editor - ಡಾ. ಸಿದ್ದನಗೌಡ ಪಾಟೀಲ

contributor

Similar News