×
Ad

ಪತನಗೊಂಡಿದ್ದ ಚೀನಾ ವಿಮಾನದ ಬ್ಲ್ಯಾಕ್‌ ಬಾಕ್ಸ್ ಪತ್ತೆ‌

Update: 2022-03-23 21:37 IST

ಸಾಂದರ್ಭಿಕ ಚಿತ್ರ

ಬೀಜಿಂಗ್, ಮಾ.23: ಚೀನಾದ ದಕ್ಷಿಣ ಪ್ರಾಂತದ ಪರ್ವತಪ್ರದೇಶದಲ್ಲಿ ಸೋಮವಾರ ಪತನಗೊಂಡಿದ್ದ ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಜೆಟ್ ವಿಮಾನದ ಬ್ಲ್ಯಾಕ್‌ ಬಾಕ್ಸ್ ಬುಧವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

   ಚೀನಾ ಈಸ್ಟರ್ನ್ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನ 29,000 ಅಡಿ ಎತ್ತರದಿಂದ ಏಕಾಏಕಿ ಲಂಬವಾಗಿ ನೆಲಕ್ಕುರುಳಿತ್ತು. ಈ ಅಸಹಜ ದುರಂತದ ಬಗ್ಗೆ ವಿಮಾನದ ಬ್ಲ್ಯಾಕ್ ಬಾಕ್ಸ್ ಹೆಚ್ಚಿನ ಬೆಳಕು ಚೆಲ್ಲಬಹುದು ಎಂದು ಚೀನಾದ ನಾಗರಿಕ ವಿಮಾನಯಾನ ಇಲಾಖೆಯ ವಕ್ತಾರ ಲಿಯು ಲುಸೋಂಗ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಆದರೆ ಬ್ಲ್ಯಾಕ್‌ ಬಾಕ್ಸ್ ತೀವ್ರ ಹಾನಿಗೊಳಗಾಗಿದೆ ಎಂದು ಚೀನಾ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಆ ಬಳಿಕ ವರದಿ ಮಾಡಿದೆ. ‌

ಪತನಗೊಂಡಿದ್ದ ವಿಮಾನದಲ್ಲಿ 2 ಬ್ಲ್ಯಾಕ್‌ ಬಾಕ್ಸ್‌ ಗಳಿವೆ. ಪ್ರಯಾಣಿಕರ ಕ್ಯಾಬಿನ್ ಬಳಿಯಿರುವ ಬ್ಲ್ಯಾಕ್‌ ಬಾಕ್ಸ್‌ ವಿಮಾನ ಹಾರಾಟದ ದಾಖಲೆಯನ್ನು ಸಂಗ್ರಹಿಸುತ್ತಿದ್ದರೆ, ಕಾಕ್‌ಪಿಟ್‌ನಲ್ಲಿರುವ ಮತ್ತೊಂದು ಬ್ಲ್ಯಾಕ್‌ ಬಾಕ್ಸ್‌ ಸಿಬಂದಿಯ ಸಂಭಾಷಣೆಯನ್ನು ದಾಖಲು ಮಾಡಿಕೊಳ್ಳುತ್ತದೆ. ಈಗ ಪತ್ತೆಯಾಗಿರುವ ಬ್ಲ್ಯಾಕ್‌ ಬಾಕ್ಸ್‌ ಯಾವುದು ಎಂಬುದು ಸ್ಪಷ್ಟವಾಗಿಲ್ಲ ಎಂದು ಲುಸೋಂಗ್ ಹೇಳಿದ್ದಾರೆ.

ಈ ಮಧ್ಯೆ, ಪತನಗೊಂಡ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಅವಶೇಷ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಪರ್ವತ ಪ್ರದೇಶದಲ್ಲಿ ರಕ್ಷಣಾ ತಂಡದ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News