×
Ad

ಕಿರಿಕಿರಿಯಾಗುತ್ತಿದೆ ಎಂದು ಮೋಹಿನಿಯಾಟ್ಟಂ ಪ್ರದರ್ಶನ ನಿಲ್ಲಿಸಿದ ನ್ಯಾಯಾಧೀಶರ ವಿರುದ್ಧ ಟೀಕೆಗಳ ಮಹಾಪೂರ

Update: 2022-03-23 22:34 IST
Photo:Twitter/@HKupdate

ಪಾಲಕ್ಕಾಡ್ (ಕೇರಳ),ಮಾ.23: ಖ್ಯಾತ ನೃತ್ಯಗಾತಿ ನೀನಾ ಪ್ರಸಾದ್ ಅವರಿಂದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನವನ್ನು ನಿಲ್ಲಿಸಿದ ಜಿಲ್ಲಾ ನ್ಯಾಯಾಧೀಶ ಕಲಾಂ ಪಾಷಾ ಅವರ ನಡೆಗೆ ಕಲಾಲೋಕವು ಕಳವಳ ಮತ್ತು ಆಕ್ರೋಶಗಳೊಂದಿಗೆ ಪ್ರತಿಕ್ರಿಯಿಸಿದೆ.

ಪಾಲಕ್ಕಾಡ್ ಪಟ್ಟಣದ ಸರಕಾರಿ ಮೋಯನ್ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸಂಜೆ ಶೇಖರಿಪುರಂ ಗ್ರಂಥಾಲಯವು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ನೃತ್ಯ ಪ್ರದರ್ಶನವನ್ನು ಆಯೋಜಿಸಿತ್ತು. ಶಾಲೆಯ ಹಿಂಭಾಗದಲ್ಲಿ ವಾಸವಾಗಿರುವ ನ್ಯಾ.ಪಾಷಾರಿಗೆ ಈ ಕಾರ್ಯಕ್ರಮ ಕಿರಿಕಿರಿಯನ್ನುಂಟು ಮಾಡಿದ್ದರಿಂದ ರಾತ್ರಿ 8:30ರ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೋಯಿನಿಯಾಟ್ಟಂ ಪ್ರದರ್ಶನವನ್ನು ನಿಲ್ಲಿಸಿದ್ದರು. ಈ ವೇಳೆ ನೀನಾ ಪ್ರಸಾದ್ ಅವರು ಕೃಷ್ಣ ಮತ್ತು ಅರ್ಜುನರ ನಡುವಿನ ಸಂಬಂಧಗಳಲ್ಲಿಯ ವೈಪರೀತ್ಯಗಳನ್ನು ಬಿಂಬಿಸುವ ‘ಸಖ್ಯಂ’ ಶೀರ್ಷಿಕೆಯ ಒಂದು ಗಂಟೆ ಅವಧಿಯ ಪ್ರದರ್ಶನವನ್ನು ನೀಡುತ್ತಿದ್ದರು. ಪ್ರದರ್ಶನವನ್ನು ಬಲವಂತವಾಗಿ ಸ್ಥಗಿತಗೊಳಿಸಿದ್ದರಿಂದ ಅವರು ತನ್ನ ತಂಡದೊಂದಿಗೆ ಕಣ್ಣೀರಿಡುತ್ತಲೇ ವೇದಿಕೆಯಿಂದ ನಿರ್ಗಮಿಸಿದ್ದರು.

‘ಇದು ನನ್ನ ನೃತ್ಯ ವೃತ್ತಿಜೀವನದಲ್ಲಿಯ ಅತ್ಯಂತ ಕಹಿ ಘಟನೆಯಾಗಿದೆ. ಇದು ನನಗೆ ಮಾತ್ರವಲ್ಲ,ಎರಡು ವರ್ಷಗಳಿಂದ ಸುಪ್ತಾವಸ್ಥೆಯಲ್ಲಿದ್ದು ಹೆಚ್ಚಿನ ಭರವಸೆಯೊಂದಿಗೆ ವೇದಿಕೆಯನ್ನು ಏರಿದ್ದ ಸಹಕಲಾವಿದರಿಗೂ ಮಾಡಿರುವ ಅವಮಾನವಾಗಿದೆ ’ಎಂದು ಸುದ್ದಿಸಂಸ್ಥೆಗೆ ತಿಳಿಸಿದ ನೀನಾ ಪ್ರಸಾದ,ಇದು ನ್ಯಾಯಾಂಗ ಅಧಿಕಾರಿಯೋರ್ವರ ಉದ್ಧಟತನವಾಗಿದೆ ಎಂದು ಆರೋಪಿಸಿದರು. ಅವರ ಫೇಸ್ಬುಕ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವರು,ನ್ಯಾ.ಪಾಷಾರ ನಡೆಯನ್ನು ಸಾಂಸ್ಕೃತಿಕ ಸ್ವಾತಂತ್ರ ಉಲ್ಲಂಘನೆ ಎಂದು ಬಣ್ಣಿಸಿದ್ದಾರೆ.

ಅದು ಸಂಕೀರ್ಣವಾದ ಏಕವ್ಯಕ್ತಿ ಪ್ರದರ್ಶನವಾಗಿದ್ದು,ಅದಕ್ಕಾಗಿ ತುಂಬ ಪರಿಶ್ರಮ ಪಟ್ಟಿದ್ದೆ. ವಯಲಿನ್,ಮೃದಂಗದಂತಹ ಮೃದು ಸಂಗೀತ ಉಪಕರಣಗಳನ್ನೇ ಬಳಸಲಾಗಿತ್ತು. ಖಂಡಿತವಾಗಿಯೂ ಅಲ್ಲಿ ಗದ್ದಲವಿರಲಿಲ್ಲ ಎಂದು ನೀನಾ ಪ್ರಸಾದ್ ಹೇಳಿದರು.

ಘಟನೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವ ಪುರೋಗಮ ಕಲಾ ಸಾಹಿತ್ಯ ಸಂಘವು,ನ್ಯಾ.ಪಾಷಾರ ನಡೆಯು ಸಾಂಸ್ಕೃತಿಕ ಅಸಹಿಷ್ಣುತೆಯಾಗಿದೆ ಎಂದು ಹೇಳಿದ್ದರೆ,ಘಟನೆಯನ್ನು ರಾಜ್ಯಕ್ಕೆ ‘ನಾಚಿಕೆಗೇಡು ’ಎಂದು ಬಣ್ಣಿಸಿದ ಸ್ವರಾಲಯದ ಕಾರ್ಯದರ್ಶಿ ಟಿ.ಆರ್.ಅಜಯನ್ ಅವರು,ನ್ಯಾಯಾಧೀಶರೋರ್ವರಿಂದ ಇಂತಹ ದುರದೃಷ್ಟಕರ ವರ್ತನೆಯನ್ನು ನಾವೆಂದೂ ನಿರೀಕ್ಷಿಸಿರಲಿಲ್ಲ. ಇದು ಅಧಿಕಾರದ ಉದ್ಧಟತನವಲ್ಲದೆ ಬೇರೇನೂ ಅಲ್ಲ ಎಂದರು.

ನ್ಯಾ.ಪಾಷಾ ಹಿಂದೆಯೂ ಶಾಲೆಯ ಆವರಣದಲ್ಲಿ ಕಾರ್ಯಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News