×
Ad

ದಿಲ್ಲಿ ಮನಪಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದರೆ ಆಪ್ ರಾಜಕೀಯ ತೊರೆಯಲಿದೆ:‌ ಕೇಜ್ರಿವಾಲ್

Update: 2022-03-23 22:37 IST

ಹೊಸದಿಲ್ಲಿ,ಮಾ.23: ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳ ಮುಂದೂಡಿಕೆಯ ಕುರಿತು ಬುಧವಾರ ಬಿಜೆಪಿ ವಿರುದ್ಧ ದಾಳಿ ನಡೆಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಬಿಜೆಪಿಯು ಈ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಿದರೆ ಮತ್ತು ಅವುಗಳನ್ನು ಗೆದ್ದರೆ ಆಪ್ ರಾಜಕೀಯವನ್ನೇ ತೊರೆಯಲಿದೆ ಎಂದು ಸವಾಲು ಹಾಕಿದರು.

ಉತ್ತರ,ಪೂರ್ವ ಮತ್ತು ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆಗಳ ಏಕೀಕರಣಕ್ಕಾಗಿ ಮಸೂದೆಯನ್ನು ಕೇಂದ್ರ ಸಂಪುಟವು ಮಂಗಳವಾರ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ರ ಈ ಹೇಳಿಕೆಯು ಹೊರಬಿದ್ದಿದೆ.

ದಿಲ್ಲಿ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್,ಬಿಜೆಪಿಯು ತಾನು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುತ್ತಿದೆ,ಆದರೆ ಅದು ಸಣ್ಣ ಪಕ್ಷವೊಂದಕ್ಕೆ ಮತ್ತು ಸಣ್ಣ ಚುನಾವಣೆಗೆ ಹೆದರಿಕೊಂಡಿದೆ. ಸಕಾಲದಲ್ಲಿ ದಿಲ್ಲಿ ಮನಪಾ ಚುನಾವಣೆಗಳನ್ನು ನಡೆಸುವಂತೆ ತಾನು ಬಿಜೆಪಿಗೆ ಸವಾಲು ಹಾಕುತ್ತೇನೆ ಎಂದರು.

ನಂತರ ಟ್ವೀಟ್‌ವೊಂದರಲ್ಲಿ ಕೇಜ್ರಿವಾಲ್,‘ಬಿಜೆಪಿಯಿಂದ ದಿಲ್ಲಿ ಮನಪಾ ಚುನಾವಣೆಗಳ ಮುಂದೂಡಿಕೆಯು ಬ್ರಿಟಷ್ರನ್ನು ಹೊರದಬ್ಬಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ತ್ಯಾಗ-ಬಲಿದಾನಗಳನ್ನು ಮಾಡಿದ್ದ ಹುತಾತ್ಮರಿಗೆ ಅವಮಾನವಾಗಿದೆ. ಇಂದು ಸೋಲಿನ ಭೀತಿಯಿಂದ ಅವರು ದಿಲ್ಲಿ ಮನಪಾ ಚುನಾವಣೆಗಳನ್ನು ಮುಂದೂಡುತ್ತಿದ್ದಾರೆ,ನಾಳೆ ಅವರು ರಾಜ್ಯಗಳ ಮತ್ತು ದೇಶದ ಚುನಾವಣೆಗಳನ್ನು ಮುಂದೂಡುತ್ತಾರೆ ’ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News