ವಿಧಿ 370ರ ರದ್ದತಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಇಳಿಕೆ, ಹೂಡಿಕೆ ವಾತಾವರಣ ಸೃಷ್ಟಿ: ನಿರ್ಮಲಾ ಸೀತಾರಾಮನ್

Update: 2022-03-23 17:17 GMT

Photo: Twitter/@MPLodha

ಹೊಸದಿಲ್ಲಿ,ಮಾ.23: ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಮೂಡಿಸುವ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡಿವೆ ಎಂದು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಇಂತಹ ಉಪಕ್ರಮಗಳ ಪರಿಣಾಮವಾಗಿ ಈ ಕೇಂದ್ರಾಡಳಿತ ಪ್ರದೇಶವು ಹಲವಾರು ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಈ ಧನಾತ್ಮಕ ಪ್ರವೃತ್ತಿಗೆ ವಿಧಿ 370ರ ರದ್ದತಿ ಕಾರಣವಾಗಿದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರಕ್ಕಾಗಿ ಮುಂಗಡಪತ್ರದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಅವರು,ಅಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಇದ್ದ ಎಲ್ಲ ತೊಡಕುಗಳನ್ನು ಕೇಂದ್ರ ಸರಕಾರವು ಪರಿಣಾಮಕಾರಿಯಾಗಿ ನಿವಾರಿಸಿದೆ. ಪ್ರಸ್ತುತ ಕೊಲ್ಲಿ ಸಹಕಾರ ರಾಷ್ಟ್ರಗಳ ನಿಯೋಗವೊಂದು ಜಮ್ಮು-ಕಾಶ್ಮೀರದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ನೂತನ ಕೈಗಾರಿಕಾ ನೀತಿ ಮತ್ತು ಹೂಡಿಕೆ ಪ್ರಸ್ತಾವ ಜಮ್ಮು-ಕಾಶ್ಮೀರದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ ಎಂದರು.

890 ಕೇಂದ್ರೀಯ ಕಾನೂನುಗಳ ಜಾರಿಯ ಬಳಿಕ ಜನರಿಗೆ ಲಾಭಗಳು ದೊರೆಯುತ್ತಿವೆ ಎಂದ ಸೀತಾರಾಮನ್, ಮೊದಲು ಅಲ್ಲಿ ಯಾವುದೇ ಹಕ್ಕುಗಳನ್ನು ಹೊಂದಿರದವರು ಈಗ ಸರಕಾರಿ ಉದ್ಯೋಗಗಳನ್ನು ಪಡೆಯಬಹುದು ಮತ್ತು ಆಸ್ತಿಗಳನ್ನು ಖರೀದಿಸಬಹುದು ಎಂದು ತಿಳಿಸಿದರು.

250 ರಾಜ್ಯ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು ಜಮ್ಮು-ಕಾಶ್ಮೀರದ ಸಮಗ್ರ ಅಭಿವೃದ್ಧಿಗಾಗಿ 137 ಕಾನೂನುಗಳನ್ನು ಮಾರ್ಪಡಿಸಲಾಗಿದೆ ಎಂದರು.

ಕೇಂದ್ರ ಸರಕಾರದ ಭಯೋತ್ಪಾದನೆ ನಿಗ್ರಹ ಉಪಕ್ರಮಗಳ ಕುರಿತು ವಿವರಿಸಿದ ಅವರು,ಜಮ್ಮು-ಕಾಶ್ಮೀರದಲ್ಲಿ ಈಗ ಭಯೋತ್ಪಾದನೆ ಸಂಬಂಧಿತ ಘಟನೆಗಳು ಕಡಿಮೆಯಾಗಿವೆ. ಈ ವರ್ಷವೊಂದರಲ್ಲಿಯೇ 38 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. 2021ರಲ್ಲಿ 32 ವಿದೇಶಿಯರು ಸೇರಿದಂತೆ 180 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು ಮತ್ತು ಅವರಲ್ಲಿ 42 ಹಿರಿಯ ಕಮಾಂಡರ್ಗಳೂ ಸೇರಿದ್ದರು ಎಂದರು.

2021ರಲ್ಲಿ ಒಳನುಸುಳುವಿಕೆ ಶೇ.33ರಷ್ಟು,ಕದನವಿರಾಮ ಉಲ್ಲಂಘನೆಗಳು ಶೇ.90ರಷ್ಟು,ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಶೇ.61ರಷ್ಟು ಮತ್ತು ಭಯೋತ್ಪಾದಕರಿಂದ ಅಪಹರಣ ಪ್ರಕರಣಗಳು ಶೇ.80ರಷ್ಟು ಇಳಿಕೆಯಾಗಿವೆ ಎಂದ ಸೀತಾರಾಮನ್, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ನೇಮಕಾತಿ ಪ್ರಮಾಣವು ಶೇ.16ರಷ್ಟು ಕುಸಿದಿದೆ ಎಂದೂ ತಿಳಿಸಿದರು.

2021ರಲ್ಲಿ ಮತ್ತು 2022ರಲ್ಲಿಯೂ ಈವರೆಗೆ ಶಸ್ತ್ರಾಸ್ತ್ರ ಕಸಿದುಕೊಳ್ಳುವಿಕೆಯ ಯಾವುದೇ ಘಟನೆ ನಡೆದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News