ರಶ್ಯದ ಯುದ್ಧಪ್ರಯತ್ನ ಬೆಂಬಲಿಸಬೇಡಿ: ಚೀನಾಕ್ಕೆ ನೇಟೊ ಎಚ್ಚರಿಕೆ

Update: 2022-03-23 17:51 GMT

ಬ್ರಸೆಲ್ಸ್, ಮಾ.23: ಉಕ್ರೇನ್ ಮೇಲೆ ಆಕ್ರಮಣ ಎಸಗಿರುವ ರಶ್ಯಕ್ಕೆ ಚೀನಾ ರಾಜಕೀಯ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ನೇಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟನ್‌ಬರ್ಗ್, ರಶ್ಯದ ಯುದ್ಧಯತ್ನಕ್ಕೆ ವಸ್ತುರೂಪದ ಬೆಂಬಲ ಒದಗಿಸದಂತೆ ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಬ್ಬರದ ಸುಳ್ಳು, ತಪ್ಪು ಮಾಹಿತಿ ಪ್ರಸಾರ ಮಾಡುವ ಮೂಲಕ ಚೀನಾವು ರಶ್ಯಕ್ಕೆ ರಾಜಕೀಯ ಬೆಂಬಲ ಒದಗಿಸುತ್ತಿದೆ. ರಶ್ಯದ ಆಕ್ರಮಣಕ್ಕೆ ಚೀನಾ ವಸ್ತುರೂಪದ (ಯುದ್ಧಸಾಮಾಗ್ರಿ ಮತ್ತಿತರ ರೀತಿಯಲ್ಲಿ) ನೆರವು ನೀಡಲಿದೆ ಎಂಬ ಆತಂಕ ನೇಟೊ ಮಿತ್ರರಾಷ್ಟ್ರಗಳಲ್ಲಿದೆ ಎಂದು ಸ್ಟಾಲ್ಟನ್‌ಬರ್ಗ್ ಹೇಳಿದ್ದಾರೆ. ಉಕ್ರೇನ್ ಮೇಲಿನ ರಶ್ಯ ಆಕ್ರಮಣದ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚಿಸಲು ಗುರುವಾರ ನೇಟೊದ ತುರ್ತು ಶೃಂಗಸಭೆ ನಡೆಯಲಿದೆ.

ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯನಾಗಿ ಚೀನಾ ತನ್ನ ಹೊಣೆಗಾರಿಕೆಯನ್ನು ಮರೆಯಬಾರದು, ರಶ್ಯದ ಯುದ್ಧ ಪ್ರಯತ್ನಕ್ಕೆ ಬೆಂಬಲ ಸೂಚಿಸುವುದರಿಂದ ದೂರ ಇರಬೇಕು ಮತ್ತು ಯುದ್ಧಕ್ಕೆ ತ್ವರಿತ ಶಾಂತಿಯುತ ಅಂತ್ಯಕ್ಕೆ ನಡೆಯುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವಂತೆ ವಿಶ್ವ ಮುಖಂಡರು ಆ ದೇಶಕ್ಕೆ ಕರೆ ನೀಡುವರೆಂದು ನಿರೀಕ್ಷಿಸುವುದಾಗಿ ಸ್ಟಾಲ್ಟನ್‌ಬರ್ಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News