×
Ad

ಪರಮ್ ಬೀರ್ ಸಿಂಗ್ ವಿರುದ್ಧದ 5 ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಸುಪ್ರೀಂ

Update: 2022-03-25 00:00 IST

ಹೊಸದಿಲ್ಲಿ, ಮಾ. 24: ಮುಂಬೈಯ ಮಾಜಿ ಪೊಲೀಸ್ ವರಿಷ್ಠ ಪರಮ್ ಬೀರ್ ಸಿಂಗ್ ವಿರುದ್ಧ ದಾಖಲಾದ 5 ಪ್ರಕರಣಗಳ ತನಿಖೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಸಿಬಿಐಗೆ ವರ್ಗಾಯಿಸಿದೆ. ಇದುವರೆಗೆ ಈ ಪ್ರಕರಣಗಳ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ನಡೆಸುತ್ತಿದ್ದರು.

ತನ್ನ ವಿರುದ್ಧದ ಎರಡು ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯನ್ನು ನಿಲ್ಲಿಸದಂತೆ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ್ದ ಈ ಹಿಂದಿನ ತೀರ್ಪಿನ ವಿರುದ್ಧ ಸಿಂಗ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ ಎಂಎಂ ಸುಂದರೇಶ್ ಅವರನ್ನು ಒಳಗೊಂಡ ಪೀಠ ನಡೆಸಿತು. ಇವುಗಳಲ್ಲಿ ಒಂದು ಪ್ರಕರಣ ಕರ್ತವ್ಯ ಲೋಪ ಹಾಗೂ ದುರ್ನಡತೆಗೆ ಸಂಬಂಧಿಸಿದ್ದು. ಇನ್ನೊಂದು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ್ದು. ಎರಡೂ ಪ್ರಕರಣಗಳ ತನಿಖೆಯನ್ನು ಮಹಾರಾಷ್ಟ್ರ ಸರಕಾರ ಆರಂಭಿಸಿತ್ತು.

ಸಿಂಗ್ ಅವರ ಮನವಿಯ ವಿಚಾರಣೆ ಸಂದರ್ಭ ಸುಲಿಗೆ ಹಾಗೂ ವಂಚನೆ ಸೇರಿದಂತೆ ಸಿಂಗ್ ವಿರುದ್ಧ ಹಲವು ಆರೋಪಿಗಳಿಗೆ ಸಂಬಂಧಿಸಿದ ಇತರ ಐದು ಎಫ್ಐಆರ್ಗಳನ್ನು ಪೊಲೀಸರು ಸಲ್ಲಿಸಿದರು. ಸಿಂಗ್ ವಿರುದ್ಧದ ಎಫ್ಐಆರ್ನಲ್ಲಿರುವ ಆರೋಪದಲ್ಲಿ ಸತ್ಯಾಂಶವಿದೆಯೇ ? ಅಥವಾ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆಯೇ? ಎಂಬ ಬಗ್ಗೆ ಪಾರದರ್ಶಕ ತನಿಖೆ ನಡೆಸುವಂತೆ ನ್ಯಾಯಾಲಯ ಗುರುವಾರ ನಿರ್ದೇಶಿಸಿತು. ಸಿಂಗ್ ವಿರುದ್ಧದ ತನಿಖೆಯನ್ನು ನಿಲ್ಲಿಸಬಾರದು ಎಂಬ ಬಾಂಬೆ ಉಚ್ಚ ನ್ಯಾಯಾಲಯದ ಈ ಹಿಂದಿನ ತೀರ್ಪನ್ನು ಪೀಠ ತಿರಸ್ಕರಿಸಿತು. ಈ ಪ್ರಕರಣವನ್ನು ಸೇವಾ ವಿವಾದವಾಗಿ ಪರಿಶೀಲಿಸಿರುವುದರಿಂದ ಈ ಹಿಂದಿನ ತೀರ್ಪು ತಪ್ಪಾಗಿದೆ ಎಂದು ನ್ಯಾಯಾಧೀಶರು ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News