ದಾಳಿಗೊಳಗಾದವರಲ್ಲಿ ಯಾರಿಗೆ ಶಿಕ್ಷೆಯಾಗಿದೆ?
ಮಾನ್ಯರೇ,
ಇತ್ತೀಚೆಗೆ ಭಾರೀ ಭ್ರಷ್ಟಾಚಾರದ ಆಧಾರದ ಮೇಲೆ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿರುವ ಕುಬೇರರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸಿಬಿ ಅಧಿಕಾರಿಗಳು ಆಗಾಗ ಭ್ರಷ್ಟರ ಮನೆಗಳ ಮೇಲೆ ದಾಳಿ ಮಾಡುತ್ತಲೇ ಇರುತ್ತಾರೆ. ಅಲ್ಲಿ ಕಂಡ ಸಂಪತ್ತನ್ನು ನೋಡಿ ದಾಳಿ ಮಾಡಿದ ಅಧಿಕಾರಿಗಳು ಸೇರಿದಂತೆ ಇಡೀ ರಾಜ್ಯದ ಜನತೆಯೇ ನಿಬ್ಬೆರಗಾಗುತ್ತಾರೆ. ಆದರೆ ಈ ದಾಳಿ ಕೇವಲ ಆ ದಿನಕ್ಕೆ ಸೀಮಿತವೇ ಎನ್ನುವ ಪ್ರಶ್ನೆ ಮೂಡುತ್ತಿದೆ. ಯಾಕೆಂದರೆ ಇಲ್ಲಿಯವರೆಗೂ ಕೇವಲ ದಾಳಿ ಮಾಡಿದ ವಿಷಯವನ್ನು ಮಾತ್ರ ತೋರಿಸಲಾಗುತ್ತಿದೆ. ವಿಚಾರಣೆ ಮುಗಿದ ಬಳಿಕ ದಾಳಿ ಮಾಡಿದವರ ಪೈಕಿ ಎಷ್ಟು ಅಧಿಕಾರಿಗಳಿಗೆ ಶಿಕ್ಷೆಯಾಗಿದೆ? ಎಷ್ಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ? ಸೇವೆಯಿಂದ ಅಮಾನತು ಮಾಡಲಾಗಿದೆ? ಎಷ್ಟು ಅಧಿಕಾರಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂಬ ಮಾಹಿತಿಯೆ ತಿಳಿಯದಂತಾಗಿದೆ. ಸರಕಾರಿ ನೌಕರರಿಗೆ ಎಸಿಬಿ ಅಧಿಕಾರಿಗಳು ಮತ್ತು ಕಾನೂನಿನ ಭಯವೇ ಇಲ್ಲದಂತಾಗಿ ಭ್ರಷ್ಟಾಚಾರಕ್ಕೆ ಕೊನೆಯೆಂಬುದೇ ಇಲ್ಲದಂತಾಗಿದೆ. ಸರಕಾರ ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಂತಹ ಕಠಿಣಾತಿ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಕೂಡ ಇದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿಯೇ ದೇಶದಲ್ಲಿ ಬಡವರು ಬಡವರಾಗಿಯೇ ಉಳಿಯುತ್ತಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಸಿಕ್ಕ ಮಾಹಿತಿ ಪ್ರಕಾರ ವರ್ಷದಲ್ಲಿ ನೂರಾರು ಸಂಖ್ಯೆಯ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆದರೂ ಶಿಕ್ಷೆಗೊಳಪಡುವುದು ಕೆಲವೇ ಬೆರಳೆಣಿಕೆಯ ಅಧಿಕಾರಿಗಳು ಮಾತ್ರ.
ಎಸಿಬಿ ಅಧಿಕಾರಿಗಳ ದಾಳಿಯ ಹಿಂದೆ ವರ್ಷಾನುಗಟ್ಟಲೆ ಅನೇಕ ಮಾಹಿತಿಗಳನ್ನು ಕಲೆಹಾಕಿ ಪೂರ್ವಸಿದ್ಧತೆ ಮಾಡಿಕೊಂಡಿರುತ್ತಾರೆ. ಆದ್ದರಿಂದ ಸರಕಾರ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಭ್ರಷ್ಟರ ಮೇಲಿನ ಆರೋಪವನ್ನು ಸಾಬೀತು ಪಡಿಸಿ ಶಿಕ್ಷೆಗೊಳಪಡಿಸಬೇಕಾಗಿದೆ. ಆಗ ಮಾತ್ರ ದಾಳಿ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ.