ಭಾರತದ ಜಿಡಿಪಿ ಪ್ರಗತಿ ಅಂದಾಜು ಶೇ. 4.6ಕ್ಕೆ ಇಳಿಸಿದ ವಿಶ್ವಸಂಸ್ಥೆ ವರದಿ

Update: 2022-03-25 02:44 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಉಕ್ರೇನ್(Ukraine) ಯುದ್ಧದ ಪರಿಣಾಮವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ(GDP) ಪ್ರಗತಿ ದರವನ್ನು ಶೇಕಡ 2ರಷ್ಟು ಇಳಿಸಿ ಶೇ 4.6ರಷ್ಟಾಗಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸಿದ ಹಿನ್ನೆಲೆಯಲ್ಲಿ ಹೇರಿರುವ ನಿರ್ಬಂಧದಿಂದಾಗಿ, ಭಾರತದ ಇಂಧನ ಲಭ್ಯತೆ ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಡಿಪಿ ಪ್ರಗತಿದರ ಇಳಿಯಬಹುದು ಎಂದು ವಿಶ್ವಸಂಸ್ಥೆ ವರದಿ ಅಂದಾಜಿಸಿದೆ. ಆಹಾರ ಹಣದುಬ್ಬರ, ನೀತಿಗಳನ್ನು ಬಿಗಿಗೊಳಿಸಿರುವುದು ಮತ್ತು ಹಣಕಾಸು ಅಸ್ಥಿರತೆ ಕೂಡಾ ಜಿಡಿಪಿ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗಬಹುದು ಎಂದು ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.

ಅಂತೆಯೇ ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ಜಿಡಿಪಿ ಪ್ರಗತಿಯ ಅಂದಾಜು ದರವನ್ನು ಕೂಡಾ ಶೇಕಡ 3.6ರಿಂದ 2.6ಕ್ಕೆ ಇಳಿಸಲಾಗಿದೆ.

ಅಭಿವೃದ್ಧಿಶೀಲ ದೇಶಗಳು ಕೈಗೊಂಡಿರುವ ಆರ್ಥಿಕ ನೀತಿಗಳ ಕಾರಣದಿಂದ ಜಿಡಿಪಿ ದರ ಕುಸಿಯುವ ಸಾಧ್ಯತೆ ಇದೆ ಎಂದು ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಅಂಡ್ ಡೆವಲಪ್‍ಮೆಂಟ್ (ಯುಎನ್‍ಸಿಟಿಎಡಿ) ಅಂದಾಜಿಸಿದೆ.

ರಷ್ಯಾದಲ್ಲಿ ಈ ವರ್ಷ ತೀವ್ರ ಆರ್ಥಿಕ ಹಿಂಜರಿತದ ಸಾಧ್ಯತೆ ಇದ್ದು, ಪಶ್ಚಿಮ ಯೂರೋಪ್, ಕೇಂದ್ರ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲೂ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲಿದೆ. ಭಾರತ 2022ರಲ್ಲಿ ಶೇಕಡ 6.7ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಇದನ್ನು ಶೇಕಡ 4.6ಕ್ಕೆ ಇಳಿಸಲಾಗಿದೆ. 

ದಕ್ಷಿಣ ಮತ್ತು ಪಶ್ಚಿಮ ಏಷ್ಯಾದ ಇತರ ಕೆಲ ಆರ್ಥಿಕತೆಗಳು ಇಂಧನದ ಬೆಲೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಪ್ರಯೋಜನಗಳನ್ನು ಪಡೆಯಲಿವೆ. ಆದರೆ ಈ ದೇಶಗಳು ಪ್ರಾಥಮಿಕ ಸರಕು ಮಾರುಕಟ್ಟೆಯ ಪ್ರತಿಕೂಲ ಪರಿಸ್ಥಿತಿಯ ಪರಿಣಾಮವನ್ನು ಅನುಭವಿಸಲಿವೆ. ಮುಖ್ಯವಾಗಿ ಆಹಾರ ಹಣದುಬ್ಬರ ಮತ್ತು ಹಣಕಾಸು ಅಸ್ಥಿರತೆ ಈ ದೇಶಗಳನ್ನು ಕಾಡಲಿದೆ ಎಂದು ವರದಿ ವಿಶ್ಲೇಷಿಸಿದೆ.

ಭಾರತ ಹಲವು ರಂಗಗಳಲ್ಲಿ ತೊಡಕುಗಳನ್ನು ಎದುರಿಸಲಿದೆ. ಮುಖ್ಯವಾಗಿ ಇಂಧನ ಲಭ್ಯತೆ ಮತ್ತು ಬೆಲೆಗಳು, ಪ್ರಾಥಮಿಕ ಸರಕು ಇತಿಮಿತಿಗಳು, ವ್ಯಾಪಾರ ನಿರ್ಬಂಧದ ಪರಿಣಾಮಗಳು, ಆಹಾರ ಹಣದುಬ್ಬರ, ನೀತಿ ಬಿಗಿಗೊಳಿಸುವುದು ಮತ್ತು ಹಣಕಾಸು ಅಸ್ಥಿರತೆ ಎದುರಾಗಲಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News