ಗಂಗಾ ಸ್ಥಿತಿ ಇನ್ನೂ ಸುಧಾರಿಸಿಲ್ಲ
ಕುಲಗೆಟ್ಟಿರುವ ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರೂಪಿಸಲಾಗಿದ್ದ ರಾಷ್ಟ್ರೀಯ ಗಂಗಾ ಶುದ್ಧೀಕರಣ ಯೋಜನೆ (ಎನ್‌ಎಮ್‌ಸಿಜಿ)ಯ ಭಾಗವಾಗಿ 2015ರಲ್ಲಿ ಪ್ರಾಯೋಗಿಕ ಅರಣ್ಯ ಬೆಳೆಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ‘ಯಶಸ್ವಿ ಅನುಷ್ಠಾನ’ದ ಆಧಾರದಲ್ಲಿ ಈಗ ಇನ್ನೂ 13 ನದಿಗಳ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
‘ಅರಣ್ಯ ಮಧ್ಯಪ್ರವೇಶ’ದ ಮೂಲಕ ಭಾರತದ 13 ಬೃಹತ್ ನದಿಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯೊಂದನ್ನು ಕೇಂದ್ರ ಪರಿಸರ ಸಚಿವಾಲಯವು ಮಾರ್ಚ್ 14ರಂದು ಅನಾವರಣಗೊಳಿಸಿದೆ.
‘ಅರಣ್ಯ ಮಧ್ಯಪ್ರವೇಶ’ವೆಂದರೆ ನದಿಗಳ ಎರಡೂ ದಂಡೆಗಳ ಉದ್ದಕ್ಕೂ ಅರಣ್ಯಗಳನ್ನು ಬೆಳೆಸುವುದು. ಅರಣ್ಯಗಳು ಮಳೆ ನೀರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ನದಿಗಳಿಗೆ ಬಿಡುಗಡೆ ಮಾಡುತ್ತವೆ. ಆ ಮೂಲಕ ನದಿಗಳಲ್ಲಿ ನಿರಂತರವಾಗಿ ನೀರಿನ ಹರಿವನ್ನು ಖಾತರಿಪಡಿಸಬಹುದು ಎನ್ನುವುದು ಇದರ ಹಿಂದಿನ ಕಲ್ಪನೆಯಾಗಿದೆ.
ಹೆಸರೇ ಹೇಳುವಂತೆ, ಪರಿಸರ ಸಚಿವಾಲಯದ ಯೋಜನೆಯ ಪ್ರಧಾನ ಅಂಶವೆಂದರೆ ನದಿ ದಂಡೆಗಳಲ್ಲಿ ಅರಣ್ಯಗಳನ್ನು ಬೆಳೆಸುವುದು. ‘‘ನದಿ ಬದಿಯ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು’’ ಮತ್ತು ‘ಪರಿಸರ ಉದ್ಯಾನ’ಗಳ ಸ್ಥಾಪನೆ ಯೋಜನೆಯ ಇತರ ಅಂಶಗಳಾಗಿವೆ.
24 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಾಗೂ ಹಿಮಾಲಯ, ಪರ್ಯಾಯ ದ್ವೀಪ ಮತ್ತು ದ್ವೀಪಗಳ ಮೂಲಕ ಹಾದು ಹೋಗುವ ನದಿಗಳನ್ನು ಸರಕಾರ ಈ ಯೋಜನೆಗೆ ಆಯ್ಕೆ ಮಾಡಿದೆ. ಬಿಯಾಸ್, ಚೀನಾಬ್, ಝೀಲಮ್, ರಾವಿ, ಸಟ್ಲೇಜ್, ಲೂನಿ, ಯಮುನಾ, ನರ್ಮದಾ, ಗೋದಾವರಿ, ಕಾವೇರಿ, ಕೃಷ್ಣಾ, ಬ್ರಹ್ಮಪುತ್ರ ಮತ್ತು ಮಹಾನದಿ ನದಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಈ ಯೋಜನೆಗೆ ತಗಲುವ ಒಟ್ಟು ವೆಚ್ಚ 19,300 ಕೋಟಿ ರೂಪಾಯಿ.
ಕುಲಗೆಟ್ಟಿರುವ ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರೂಪಿಸಲಾಗಿದ್ದ ರಾಷ್ಟ್ರೀಯ ಗಂಗಾ ಶುದ್ಧೀಕರಣ ಯೋಜನೆ (ಎನ್‌ಎಮ್‌ಸಿಜಿ)ಯ ಭಾಗವಾಗಿ 2015ರಲ್ಲಿ ಪ್ರಾಯೋಗಿಕ ಅರಣ್ಯ ಬೆಳೆಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ‘ಯಶಸ್ವಿ ಅನುಷ್ಠಾನ’ದ ಆಧಾರದಲ್ಲಿ ಈಗ ಇನ್ನೂ 13 ನದಿಗಳ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಆದರೆ, ಈ ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ತಮಗೆ ಮನವರಿಕೆಯಾಗಿಲ್ಲ ಎಂಬುದಾಗಿ ತಜ್ಞರು ಹೇಳುತ್ತಾರೆ. ಅದಕ್ಕೆ ಅವರು ಎರಡು ಕಾರಣಗಳನ್ನು ನೀಡುತ್ತಾರೆ. ಅವುಗಳೆಂದರೆ- ಎನ್‌ಎಮ್‌ಸಿಜಿ ಪ್ರಾಯೋಜಿತ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವುದಕ್ಕೆ ಪುರಾವೆಯಿಲ್ಲ ಮತ್ತು ಹೊಸ ಪ್ರಸ್ತಾವಗಳು ನದಿಗಳನ್ನು ಇನ್ನಷ್ಟು ಕುಲಗೆಡಿಸಬಹುದು.
ಹದಿಮೂರು ಬೃಹತ್ ನದಿಗಳನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ಸಹಾಯಕ ಸಚಿವರು ವಿಸ್ತೃತ ಯೋಜನಾ ವರದಿ (ಡಿಪಿಆರ್)ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ನದಿಗಳು ಒಟ್ಟು 42,830 ಕಿ.ಮೀ. ಹರಿಯುತ್ತವೆ ಹಾಗೂ ಭಾರತದ ಭೌಗೋಳಿಕ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚಿನ ಭಾಗದ ನೀರನ್ನು ಹೀರಿಕೊಳ್ಳುತ್ತವೆ.
ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್‌ಆರ್‌ಇ)ಯು ಪರಿಸರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಅರಣ್ಯೀಕರಣ ಮತ್ತು ಪರಿಸರ ಅಭಿವೃದ್ಧಿ ಮಂಡಳಿಯ ಅನುದಾನದಿಂದ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಿದೆ.
ನದಿ ದಂಡೆಗಳಲ್ಲಿ ಬೆಳೆಯುವ ಅರಣ್ಯಗಳು ಅಂತರ್ಜಲವನ್ನು ತುಂಬಿಸುತ್ತವೆ ಹಾಗೂ ವರ್ಷವಿಡೀ ನದಿಗಳಲ್ಲಿ ನೀರಿನ ಹರಿವು ಇರುವಂತೆ ನೋಡಿಕೊಳ್ಳುತ್ತವೆ ಎನ್ನುವ ಕಾರಣಕ್ಕಾಗಿ ನದಿಗಳ ಪುನರುಜ್ಜೀವನಕ್ಕೆ ‘ಅರಣ್ಯ ಮಧ್ಯಪ್ರವೇಶ’ವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನದಿಗಳು ಹಾದು ಹೋಗುವ ಪ್ರದೇಶಗಳ ಮಾದರಿಗಳಿಗೆ -ಸಹಜ, ಕೃಷಿ ಮತ್ತು ನಗರ- ಅನುಗುಣವಾಗಿ ಭಿನ್ನ ಅರಣ್ಯ ‘ಮಾದರಿ’ಗಳನ್ನು ಬಳಸಲು ಉದ್ದೇಶಿಸಲಾಗಿದೆ.
ರೈತರಿಗೆ ಸಸಿಗಳನ್ನು ವಿತರಿಸುವುದು, ಹಣ್ಣು ಮತ್ತು ನಾಟ ಒದಗಿಸುವ ಮರಗಳನ್ನು ನೆಡುವುದು, ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಕುಳಿಗಳನ್ನು ತೋಡುವುದು, ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಇನ್ನಿತರ ಹಲವು ಉಪಕ್ರಮಗಳು ಈ ಮಾದರಿಗಳಲ್ಲಿ ಬರುತ್ತವೆ.
ಹೀಗೆ ಮಾಡಿದರೆ, ಅರಣ್ಯ ವ್ಯಾಪ್ತಿ ಹಿಗ್ಗುತ್ತದೆ, ಇಂಗಾಲದ ಡೈ ಆಕ್ಸೈಡನ್ನು ಹಿಡಿದಿಡುವ ಪ್ರಮಾಣ ಹೆಚ್ಚುತ್ತದೆ ಮತ್ತು ಅಂತರ್ಜಲ ಮರುಪೂರಣ ಮಟ್ಟ ಹೆಚ್ಚುತ್ತದೆ; ಭೂಮಿಯ ಸವಕಳಿ ತಗ್ಗುತ್ತದೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬುದಾಗಿ ಸಚಿವರು ಬಿಡುಗಡೆ ಮಾಡಿರುವ ದಾಖಲೆಗಳು ಹೇಳುತ್ತವೆ.
ಹಾಗಾಗಿ, ಭಾರತ ಸರಕಾರವು ಈ ಯೋಜನೆಯ ಫಲಿತಾಂಶಗಳು ಪ್ಯಾರಿಸ್ ಒಪ್ಪಂದ ಸೇರಿದಂತೆ ವಿವಿಧ ಅಂತರ್‌ರಾಷ್ಟ್ರೀಯ ಹವಾಮಾನ ಒಪ್ಪಂದಗಳ ಅಡಿ ತಾನು ನಿಭಾಯಿಸಬೇಕಾಗಿರುವ ಬದ್ಧತೆಗಳನ್ನು ಈಡೇರಿಸುತ್ತವೆ ಎಂಬುದಾಗಿ ಭಾವಿಸಿದೆ. ಪ್ಯಾರಿಸ್ ಒಪ್ಪಂದ, ವಿಶ್ವಸಂಸ್ಥೆಯ ಮರುಭೂಮೀಕರಣ ತಡೆ ಒಪ್ಪಂದ ಮತ್ತು ಸಹ್ಯ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿ ಭಾರತವು ಅಂತರ್‌ರಾಷ್ಟ್ರೀಯ ಬದ್ಧತೆಗಳನ್ನು ಹೊಂದಿದೆ.
ಆದರೆ, ಇದರ ತಕ್ಷಣದ ಪರಿಣಾಮವೆಂದರೆ, ನದಿ ಪುನರುಜ್ಜೀವನ ಯೋಜನೆಯು ಯಶಸ್ವಿಯಾಗದಿದ್ದರೆ ಭಾರತದ ಪರಿಸರ ಬದ್ಧತೆಗಳು ಅಪಾಯದಲ್ಲಿರಬಹುದು.
ಆದ್ಯತೆಗಳಲ್ಲಿ ಬದಲಾವಣೆ ಬೇಕು
ಅರಣ್ಯಗಳು ಮತ್ತು ನದಿಗಳು ಸಂಕೀರ್ಣ ವ್ಯವಸ್ಥೆಗಳು ಎಂಬುದಾಗಿ ದಾಖಲೆಯು ಹೇಳುತ್ತದೆ. ಇದು ಸ್ವಾಗತಾರ್ಹ. ಹಣಕಾಸು ವೌಲ್ಯವುಳ್ಳ ಔಷಧೀಯ ಸಸ್ಯಗಳು ಮತ್ತು ಇತರ ಸಸ್ಯಗಳನ್ನು ನೆಡುವುದು ಸ್ಥಳೀಯರ ಹಿತದೃಷ್ಟಿಯಿಂದ ಉತ್ತಮವಾಗಿದೆ. ಆದರೆ, ಇಲ್ಲಿ ಕೆಲವು ‘ಸಮಸ್ಯೆ’ಗಳಿವೆ ಹಾಗೂ ಕೆಲವೊಂದು ಆದ್ಯತೆಗಳನ್ನು ಬದಲಿಸಬೇಕಾಗುತ್ತದೆ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್‌ನಲ್ಲಿ ಎನ್ವಿರಾನ್‌ಮೆಂಟ್ ಮತ್ತು ಸಸ್ಟೇನಬಿಲಿಟಿ ಸ್ಕೂಲ್‌ನ ಡೀನ್ ಹಾಗೂ ಜಲ ತಜ್ಞ ಜಗದೀಶ್ ಕೃಷ್ಣಸ್ವಾಮಿ ಹೇಳುತ್ತಾರೆ.
ನದಿಗಳ ದಂಡೆಗಳಲ್ಲಿ ಸಸಿಗಳು ಮತ್ತು ಮರಗಳನ್ನು ನೆಡುವುದರಿಂದ ನದಿಗಳು ಪುನರುಜ್ಜೀವನಗೊಳ್ಳುವುದಿಲ್ಲ ಎಂದು ಅವರು ಹೇಳುತ್ತಾರೆ.
ವಾಸ್ತವವಾಗಿ, ಈ ಚರ್ಚಾ ವಿಷಯವು ಜಗ್ಗಿ ವಾಸುದೇವ್ ಮತ್ತು ಅವರ ಇಶಾ ಫೌಂಡೇಶನ್ 2017ರಲ್ಲಿ ‘ರ್ಯಾಲಿ ಫಾರ್ ರಿವರ್ಸ್’ ಎಂಬ ಯೋಜನೆಯನ್ನು ಆರಂಭಿಸಿದಾಗ ಮುನ್ನೆಲೆಗೆ ಬಂತು. ನದಿಗಳ ದಂಡೆಗಳಲ್ಲಿ 20,000 ಕಿ.ಮೀ. ಉದ್ದಕ್ಕೆ ಮರಗಳನ್ನು ನೆಡಲು ನಿಧಿ ಸಂಗ್ರಹಿಸುವುದು ಆ ಯೋಜನೆಯ ಪ್ರಧಾನ ಪ್ರಸ್ತಾವವಾಗಿತ್ತು. ನದಿ ದಂಡೆಗಳಲ್ಲಿ ಅರಣ್ಯಗಳನ್ನು ಬೆಳೆಸಿದರೆ ಅಂತರ್ಜಲ ತುಂಬುತ್ತದೆ ಮತ್ತು ನದಿಗಳಲ್ಲಿ ನೀರು ನಿರಂತರವಾಗಿ ಹರಿಯುತ್ತದೆ ಎಂಬ ಕಲ್ಪನೆಯ ಆಧಾರದಲ್ಲಿ ಆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಮರಗಳು ನದಿಗಳಲ್ಲಿ ನಿರಂತರವಾಗಿ ನೀರು ಹರಿಯುವಂತೆ ಮಾಡಬೇಕೆಂದೇನೂ ಇಲ್ಲ ಎಂಬುದಾಗಿ ಪರಿಸರ ತಜ್ಞರು ಹೇಳುತ್ತಾರೆ.
ಬದಲಿಗೆ, ನದಿ ನೀರಿನ ಹರಿವನ್ನು ಮರು ಸ್ಥಾಪಿಸುವುದು ನದಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ ಎಂದು ಕೃಷ್ಣಸ್ವಾಮಿ (The Wire Science) ಗೆ ಹೇಳಿದ್ದಾರೆ. ಅಣೆಕಟ್ಟುಗಳು ಮತ್ತು ಮರಳುಗಾರಿಕೆ ಮುಂತಾದ ಚಟುವಟಿಕೆಗಳಿಂದಾಗಿ ನಮ್ಮ ನದಿಗಳು ‘ಅಪಾಯದಲ್ಲಿವೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
‘‘ಕೃಷಿ, ಕೈಗಾರಿಕೆಗಳು ಮತ್ತು ನಗರಗಳಿಗಾಗಿ ನಾವು ಬಳಸುವ ನೀರಿನ ಪ್ರಮಾಣವನ್ನು ಬದಲಾಯಿಸದಿದ್ದರೆ ನಮ್ಮ ನದಿಗಳಲ್ಲಿ ನೀರಿನ ಹರಿವನ್ನು ಉಳಿಸಲು ಅಥವಾ ಹೆಚ್ಚಿಸಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ನಾವು ಎಷ್ಟು ಪ್ರಮಾಣದಲ್ಲಿ ಅಂತರ್ಜಲವನ್ನು ತೆಗೆಯುತ್ತಿದ್ದೇವೆ ಎಂದರೆ, ಹೆಚ್ಚಿನ ನದಿಗಳ ಹರಿವು ಒಣ ಋತುವಿನಲ್ಲಿ ಕಡಿಮೆಯಾಗಿರುತ್ತದೆ’’ ಎನ್ನುತ್ತಾರೆ.
ಅದೂ ಅಲ್ಲದೆ, ಇಂತಹ ‘ಬೃಹತ್ ಸಸಿ ನೆಡುವಿಕೆ’ ಕಾರ್ಯವನ್ನು ಕೈಗೆತ್ತಿಕೊಳ್ಳುವಾಗ ಹವಾಮಾನ ಬದಲಾವಣೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಅವರು ಹೇಳುತ್ತಾರೆ. ಇಂದು ನಾವು ತೆಗೆದುಕೊಳ್ಳುವ ಕ್ರಮಗಳು ಈಗ ನಡೆಯುತ್ತಿರುವ ಮತ್ತು ಭವಿಷ್ಯದ ಹವಾಮಾನ ಬದಲಾವಣೆಯನ್ನು ತಾಳಿಕೊಳ್ಳುವಂತಿರಬೇಕು.
ಉದಾಹರಣೆಗೆ; ಹೆಚ್ಚಿನ ನದಿಗಳ ದಂಡೆಗಳಲ್ಲಿ ಮಾವು, ಜಾಮೂನ್ ಮುಂತಾದ ಬೃಹತ್ ಹಳೆಯ ಮರಗಳಿವೆ. ಹೊಸ ಸಸಿಗಳನ್ನು ಎಷ್ಟೇ ಪ್ರಮಾಣದಲ್ಲಿ ನೆಟ್ಟರೂ ಅವುಗಳು ಇಂತಹ ಹಳೆಯ ಮರಗಳು ಮಾಡುವ ಪರಿಸರ ಕೆಲಸಗಳನ್ನು ಮಾಡಲಾರವು. ಹಾಗಾಗಿ, ಅಂತಹ ಬೃಹತ್ ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಕೃಷ್ಣಸ್ವಾಮಿ ಹೇಳಿದರು.
ಗಂಗಾ ನದಿಯ ‘ಯಶಸ್ಸು’
ಗಂಗಾ ನದಿಯ ದಂಡೆಯುದ್ದಕ್ಕೂ ಕೈಗೆತ್ತಿಕೊಳ್ಳಲಾಗಿರುವ ಅರಣ್ಯೀಕರಣ ಯೋಜನೆ ಯಶಸ್ವಿಯಾಗಿದೆ; ಇದರ ಆಧಾರದಲ್ಲಿ ಈಗ ಇತರ ಭಾರತೀಯ ನದಿಗಳನ್ನು ಪುನರುಜ್ಜೀವನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದಾಗಿ ಐಸಿಎಫ್‌ಆರ್‌ಇ ದಾಖಲೆ ಹೇಳುತ್ತದೆ. ಇದು ಸತ್ಯವೇ?
2015ರಲ್ಲಿ ಭಾರತ ಸರಕಾರವು ಗಂಗಾ ನದಿಯ ದಂಡೆಗಳುದ್ದಕ್ಕೂ ಪ್ರಾಯೋಗಿಕ ಅರಣ್ಯೀಕರಣ ಯೋಜನೆಯೊಂದನ್ನು ಕೈಗೆತ್ತಿಕೊಂಡಿತು ಎಂಬುದಾಗಿ ವರದಿ ಹೇಳುತ್ತದೆ. ಎನ್‌ಎಮ್‌ಸಿಜಿ ಅನುದಾನದಲ್ಲಿ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಝಾರ್ಖಂಡ್ ಮತ್ತು ಪಶ್ಚಿಮಬಂಗಾಳ ರಾಜ್ಯಗಳ ಅರಣ್ಯ ಇಲಾಖೆಗಳು 2016ರಿಂದೀಚೆಗೆ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ. ಈ ಯೋಜನೆಗೆ ನೀಡಲಾಗಿರುವ ಒಟ್ಟು ಅನುದಾನ 2,293 ಕೋಟಿ ರೂಪಾಯಿ.
ಆದರೆ, ಈಗ ಬಹುತೇಕ ಐದು ವರ್ಷಗಳ ಅನುಷ್ಠಾನದ ಬಳಿಕವೂ, ಆ ಯೋಜನೆ ಯಶಸ್ವಿಯಾಗಿದೆ ಎನ್ನುವ ಯಾವುದೇ ಸೂಚನೆ ಲಭಿಸಿಲ್ಲ ಎಂಬುದಾಗಿ ‘ಯಮುನಾ ಜೀಯೆ ಅಭಿಯಾನ್’ ಸಂಘಟನೆಯ ಮುಖ್ಯಸ್ಥ ಹಾಗೂ ಪರಿಸರ ಕಾರ್ಯಕರ್ತ ಮನೋಜ್ ಮಿಶ್ರಾ (The Wire Science) ಗೆ ಹೇಳಿದ್ದಾರೆ.
‘‘ಹಲವು ಆಯಾಮಗಳಿಂದ ಇದು ಸ್ಪಷ್ಟವಾಗಿದೆ. ಗಂಗಾ ನದಿಯ ಉಪನದಿಗಳ ಸ್ಥಿತಿಯು ಇದನ್ನೇ ಹೇಳುತ್ತದೆ. ಕೈಗಾರಿಕಾ ಮತ್ತು ನಗರ ತ್ಯಾಜ್ಯಗಳನ್ನು ಬಹುತೇಕ ಸಂಸ್ಕರಿಸದೆಯೇ ನದಿಗಳಿಗೆ ಬಿಡಲಾಗುತ್ತಿದೆ. ಇನ್ನೂ ಹಲವು ಅಂಶಗಳು ಇದನ್ನೇ ಹೇಳುತ್ತವೆ’’ ಎಂದು ದಕ್ಷಿಣ ಏಶ್ಯ ಅಣೆಕಟ್ಟುಗಳು, ನದಿಗಳು ಮತ್ತು ಜನರ ನೆಟ್‌ವರ್ಕ್ ಎಂಬ ಸಂಘಟನೆಯ ಸಮನ್ವಯಕಾರ ಹಿಮಾಂಶು ಠಕ್ಕರ್ ಹೇಳುತ್ತಾರೆ. ‘‘ಇದನ್ನು ಯಶಸ್ಸಿನ ಮಾದರಿಯಾಗಿ ಇತರ ನದಿಗಳಲ್ಲಿ ಅನುಷ್ಠಾನಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’’ ಎಂದು ಅವರು ಅಭಿಪ್ರಾಯಪಡುತ್ತಾರೆ.
(The Wire Science) 2021 ಡಿಸೆಂಬರ್‌ನಲ್ಲಿ ಹೀಗೆ ವರದಿ ಮಾಡಿತ್ತು:
‘‘... ಇದು ಭೂಮಿಯಲ್ಲೇ ಅತಿ ಹೆಚ್ಚು ಮಾಲಿನ್ಯಕ್ಕೊಳಗಾದ ನದಿಗಳಲ್ಲಿ ಒಂದು. ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ನ ಪೈಕಿ ಶೇ. 93ರಷ್ಟನ್ನು ಸಮುದ್ರಕ್ಕೆ ಸೇರಿಸುವ ಜಗತ್ತಿನ 10 ನದಿಗಳ ಪೈಕಿ ಗಂಗಾ ನದಿಯೂ ಒಂದು ಎಂಬುದಾಗಿ ಸಂಶೋಧಕರು 2018ರಲ್ಲಿ ಅಂದಾಜಿಸಿದ್ದರು.
ನದಿಯ ಅತಿ ದೊಡ್ಡ ಸಮಸ್ಯೆಯೆಂದರೆ ಸಂಸ್ಕರಣೆಯಿಲ್ಲದ ಕೊಳಚೆ ನೀರು. ನದಿಯ ನೀರಿನ ಗುಣಮಟ್ಟ ಹದಗೆಡುವ ಪ್ರಮುಖ ಕಾರಣವೆಂದರೆ ನಗರ ಪ್ರದೇಶಗಳ ಕೊಳಚೆ ನೀರನ್ನು ಸಂಸ್ಕರಿಸದೆಯೇ ನದಿಗೆ ಬಿಡುವುದು ಎಂಬುದಾಗಿ ಅಧ್ಯಯನವೊಂದು ವರದಿ ಮಾಡಿದೆ. ನದಿಯ ಶೇ.75 ಕೊಳಚೆಗೆ ಸಂಸ್ಕರಿಸದ ತ್ಯಾಜ್ಯ ನೀರು ಕಾರಣ ಎನ್ನುವುದನ್ನು ಇನ್ನೊಂದು ಅಧ್ಯಯನ ಕಂಡುಕೊಂಡಿದೆ. ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳು ನದಿಯ ಅರ್ಧಕ್ಕಿಂತಲೂ ಹೆಚ್ಚಿನ ನೀರನ್ನು ತೆಗೆಯುತ್ತವೆ. ಇದರಿಂದಾಗಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ ಹಾಗೂ ಮಾಲಿನ್ಯ ದಟ್ಟವಾಗುತ್ತದೆ.’’
ವಾಸ್ತವವಾಗಿ, ಗಂಗಾ ನದಿಯ ಪುನರುಜ್ಜೀವನ ಎನ್ನುವುದು ‘‘ಭ್ರಮೆ’’ ಎಂಬುದಾಗಿ ಮಿಶ್ರಾ ಹೇಳುತ್ತಾರೆ. ನಿರ್ದಿಷ್ಟ ಗಡುವುಗಳನ್ನು ಹೊಂದಿರುವ ಇಂಜಿನಿಯರಿಂಗ್ ತತ್ವಗಳ ಮೂಲಕ ನದಿಗಳನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಅವರು ಅಭಿಪ್ರಾಯ ಪಡುತ್ತಾರೆ. ಬದಲಿಗೆ, ಇಂತಹ ‘ಪರಿಸರ ಸವಾಲು’ಗಳನ್ನು ಒಂದು ಧ್ಯೇಯವನ್ನಾಗಿ ಮಾಡಿಕೊಂಡು ನಿಭಾಯಿಸಬೇಕು; ‘‘ಐದು ಅಥವಾ 10 ವರ್ಷಗಳ’’ ಅವಧಿಯಲ್ಲಿ ಅಲ್ಲ, ಯಾವುದೇ ಇತಿ ಮಿತಿ ಇರದ ರೀತಿಯಲ್ಲಿ ಎಂದು ಅವರು ಹೇಳುತ್ತಾರೆ.
ಯಾಕೆಂದರೆ, ನದಿಗಳು ಸಮುದ್ರವನ್ನು ಸೇರುವ ಹೊತ್ತಿಗೆ ಹಲವು ತೊರೆಗಳ ಸಂಗಮಗಳಾಗಿರುತ್ತವೆ. ನದಿಗಳನ್ನು ಪುನರುಜ್ಜೀವನಗೊಳಿಸುವುದೆಂದರೆ ಆ ಎಲ್ಲಾ ತೊರೆಗಳನ್ನು ಪುನರುಜ್ಜೀವನಗೊಳಿಸುವುದೇ ಆಗಿದೆ. ಪ್ರಸ್ತಾಪಿತ ಯೋಜನೆಯು ಈ ಕಲ್ಪನೆಯನ್ನು ಗಣನೆಗೆ ತೆಗೆದುಕೊಂಡಿಲ್ಲ.
ಅದೂ ಅಲ್ಲದೆ, ನದಿಗಳ ಪುನರುಜ್ಜೀವನದ ಅವಶ್ಯಕತೆಯನ್ನು ಸ್ಥಳೀಯ ಜನರು ಮತ್ತು ಸಂಸ್ಥೆಗಳು ಮನಗಾಣಬೇಕು ಹಾಗೂ ಅದರ ನೇತೃತ್ವವನ್ನು ವಹಿಸಿಕೊಳ್ಳಬೇಕು. ಇದರ ನೇತೃತ್ವವು ಯೋಜನೆಯನ್ನು ಕಾರ್ಯಗತಗೊಳಿಸುವ ಸರಕಾರಿ ಇಲಾಖೆಯೊಂದಕ್ಕೆ ಹೋಗಬಾರದು ಎಂದು ಮಿಶ್ರಾ ಅಭಿಪ್ರಾಯಪಡುತ್ತಾರೆ.
ಎರಡು ಮಾನದಂಡಗಳು ಮತ್ತು ವಿನಾಶ
ಎನ್‌ಎಮ್‌ಸಿಜಿ ವಿಫಲವಾದರೂ ನೂತನ ಯೋಜನೆ ಯಶಸ್ಸು ಕಾಣಬಹುದು ಎಂದು ವಾದಿಸುವುದಕ್ಕೆ ಈಗಲೂ ಅವಕಾಶವಿದೆ. ಆದರೆ, ಭಾರತದ ‘ನದಿ ದಂಡೆ ಅಭಿವೃದ್ಧಿ’ ಪ್ರಯತ್ನಗಳು ಕೂಡ ಯಶಸ್ವಿಯಾಗಿಲ್ಲ. ಗಂಗಾ ಮತ್ತು ಸಾಬರ್‌ಮತಿ ನದಿಯ ಉದಾಹರಣೆಗಳು ‘‘ವಿಶ್ವಾಸ ಹುಟ್ಟಿಸುವುದಿಲ್ಲ’’ ಎಂದು ಠಕ್ಕರ್ ಹೇಳುತ್ತಾರೆ.
2019ರಲ್ಲಿ, ಸಾಬರ್‌ಮತಿ ನದಿಯ ಪ್ರಸಕ್ತ ‘ಬರಗಾಲದಂತಹ ಪರಿಸ್ಥಿತಿ’ಗೆ ನದಿ ದಂಡೆ ಅಭಿವೃದ್ಧಿಯೇ ಕಾರಣ ಎಂಬುದನ್ನು ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರ್ಯಾವರಣ್ ಸುರಕ್ಷಾ ಸಮಿತಿ ನಡೆಸಿದ ಜಂಟಿ ತನಿಖೆ ನಿರ್ಧರಿಸಿತು. ನದಿಯ ಕಾಂಕ್ರೀಟೀಕೃತ ದಂಡೆಗಳು ಅಂತರ್ಜಲ ಮರುಪೂರಣಕ್ಕೆ ಅವಕಾಶ ನೀಡಲಿಲ್ಲ ಹಾಗೂ ನದಿಯಲ್ಲಿ ಸ್ಥಾಪಿಸಲಾಗಿರುವ ಜಲವಿದ್ಯುತ್ ಯೋಜನೆಯ ನಿರ್ವಹಣೆಗೆ ನರ್ಮದಾ ನದಿಯ ನೀರನ್ನು ಅವಲಂಬಿಸಬೇಕಾಯಿತು ಎಂಬುದಾಗಿ ವರದಿ ಹೇಳಿತು.
ವಾಸ್ತವವಾಗಿ, ನದಿಗಳನ್ನು ಪುನರುಜ್ಜೀವನಗೊಳಿಸುವಾಗ, ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ನದಿಗಳ ದಂಡೆಗಳು ತಮ್ಮ ಸಹಜ ಗುಣಲಕ್ಷಣಗಳನ್ನು ಉಳಿಸಿಕೊಳ್ಳಬೇಕು. ದಂಡೆಗಳನ್ನು ಕಾಂಕ್ರೀಟೀಕರಣಗೊಳಿಸಬಾರದು ಅಥವಾ ದಂಡೆಗಳಲ್ಲಿ ಕಾಂಕ್ರೀಟ್ ಕಾಲುವೆಗಳನ್ನು ನಿರ್ಮಿಸಬಾರದು. ಈವರೆಗಿನ ನದಿ ದಂಡೆ ಅಭಿವೃದ್ಧಿ ಯೋಜನೆಗಳಲ್ಲಿ ಇವುಗಳೇ ಪ್ರಧಾನವಾಗಿವೆ ಎಂದು ಕೃಷ್ಣಸ್ವಾಮಿ ಹೇಳಿದರು.
ವಾಸ್ತವವಾಗಿ, ‘ನದಿ ದಂಡೆ ಅಭಿವೃದ್ಧಿ’ ಮತ್ತು ‘ಪರಿಸರ ಉದ್ಯಾನವನಗಳು’ ಮೋಹಕ ಪದಗಳು ಮತ್ತು ಕಲ್ಪನೆಗಳಾಗಿವೆ. ಆದರೆ, ಅವುಗಳಿಗೂ ನದಿಗಳ ಪುನರುಜ್ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಮಿಶ್ರಾ ಅಭಿಪ್ರಾಯಪಡುತ್ತಾರೆ. ‘‘ಯಾವುದೇ ನದಿ ಪುನರುಜ್ಜೀವನ ಕಾರ್ಯಕ್ಕೆ ಸಾಬರ್‌ಮತಿ ಉದಾಹರಣೆಯು ಅತ್ಯಂತ ಕೆಟ್ಟ ಮಾದರಿಯಾಗಿದೆ’’ ಎಂದು ಅವರು ಹೇಳುತ್ತಾರೆ.
ಅದೂ ಅಲ್ಲದೆ, ಒಂದು ಕಡೆ ನದಿಗಳನ್ನು ಪುನರುಜ್ಜೀವನಗೊಳಿಸುವ ಮಾತುಗಳನ್ನು ಸರಕಾರ ಆಡುತ್ತದೆಯಾದರೂ, ಇನ್ನೊಂದು ಕಡೆ ನದಿಗಳನ್ನು ನಾಶಗೊಳಿಸುವ ಯೋಜನೆಗಳಿಗೆ ಉತ್ತೇಜನೆ ನೀಡುವುದನ್ನು ಅದು ಮುಂದುವರಿಸುತ್ತಿದೆ ಎಂದು ಠಕ್ಕರ್ ಹೇಳಿದರು.
ಈ ವೈರುಧ್ಯಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ, ಕೆನ್-ಬೇತ್ವ ನದಿ ಜೋಡಣೆ ಯೋಜನೆ. ಈ ಯೋಜನೆಗಾಗಿ ಭಾರತ ಸರಕಾರವು 23 ಲಕ್ಷ ಮರಗಳನ್ನು ಕಡಿಯಲಿದೆ. ಸುಮಾರು 9,000 ಹೆಕ್ಟೇರ್ ಭೂಮಿ ಮುಳುಗಡೆಯಾಗಲಿದೆ. ಇದರಲ್ಲಿ ಪನ್ನಾ ಹುಲಿ ಆಶ್ರಯಧಾಮವೂ ಸೇರಿದೆ. ಈ ಅರಣ್ಯಗಳು ಜೊತೆಯಾಗಿ ಮಹತ್ವದ ‘ನೀರಿನ ಸಂಪತ್ತೊಂದನ್ನು’ ರಚಿಸುತ್ತವೆ. ಯಾಕೆಂದರೆ, ಅವುಗಳು ಕೆನ್ ನದಿಯ ಮುಖಜ ಭೂಮಿಯಲ್ಲಿವೆ.
‘‘ಗಂಗಾ-ಯಮುನಾ ಬಯಲು ಸೀಮೆಯಲ್ಲಿ ಕೆನ್ ನದಿಯು ಅತ್ಯಂತ ಭವ್ಯ ಉಪನದಿಗಳ ಪೈಕಿ ಒಂದಾಗಿದೆ’’ ಎಂದು ಠಕ್ಕರ್ ಹೇಳುತ್ತಾರೆ. ‘‘ಅವರು ಹೊರತಂದಿರುವ ದಾಖಲೆಯಲ್ಲಿ, ಅರಣ್ಯೀಕರಣದ ಮೂಲಕ ನದಿ ಪುನರುಜ್ಜೀವನದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ, ಕೆನ್ ಮುಖಜ ಭೂಮಿಯಲ್ಲಿರುವ ಅರಣ್ಯಗಳನ್ನು ನೀರಿನ ಸಂಪತ್ತು ಎಂಬುದಾಗಿ ಸರಕಾರ ಯಾಕೆ ಪರಿಗಣಿಸುವುದಿಲ್ಲ?’’ ಎಂದು ಅವರು ಪ್ರಶ್ನಿಸುತ್ತಾರೆ.
ಕೃಪೆ: (thewire.in)