ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರ ಲಂಚ ಆರೋಪ ಕುರಿತು ಪರಿಶೀಲಿಸಲು ಸಿಬಿಐಗೆ ಸೂಚಿಸಿದ ಸರಕಾರ
ಹೊಸದಲ್ಲಿ: 'ಅಂಬಾನಿ' ಮತ್ತು ಒಬ್ಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಧಿಕಾರಿಗೆ ಸೇರಿದ ಎರಡು ಫೈಲ್‍ಗಳನ್ನು ಅಂಗೀಕರಿಸಿದರೆ ರೂ. 300 ಕೋಟಿ ಲಂಚ ದೊರೆಯುವುದಾಗಿ ತನಗೆ ಹೇಳಲಾಗಿತ್ತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮಾಡಿರುವ ಆರೋಪ ಕುರಿತು ಪರಿಶೀಲಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರಕಾರವು ಸಿಬಿಐಗೆ ಕೇಳಿದೆ ಎಂದು ವರದಿಯಾಗಿದೆ.
ಈ ವಿಚಾರವನ್ನು ದೃಢೀಕರಿಸಿರುವ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, "ಉನ್ನತ ಹುದ್ದೆ ಹೊಂದಿದ್ದವರೊಬ್ಬರು ಈ ಆರೋಪ ಮಾಡಿರುವುದರಿಂದ ನಮಗೆ ಎಲ್ಲವೂ ಸ್ಪಷ್ಟವಾಗಬೇಕಿದೆ,'' ಎಂದಿದ್ದಾರೆ.
ಆಗಸ್ಟ್ 21, 2018ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಮಲಿಕ್ ಅವರನ್ನು ಗೋವಾ ರಾಜ್ಯಪಾಲರಾಗಿ ಅಕ್ಟೋಬರ್ 2019ರಲ್ಲಿ ವರ್ಗಾಯಿಸಲಾಗಿತ್ತು. ಪ್ರಸ್ತುತ ಅವರು ಮೇಘಾಲಯದ ರಾಜ್ಯಪಾಲರಾಗಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 17ರಂದು ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಆರೋಪಗಳನ್ನು ಮಾಡಿದ್ದರು.
"ಫೈಲ್‍ಗಳನ್ನು ಅಂಗೀಕರಿಸಿದರೆ ತಲಾ ರೂ. 150 ಕೋಟಿ ದೊರೆಯಲಿದೆ ಎಂದು ಕಾರ್ಯದರ್ಶಿಗಳು ನನಗೆ ಹೇಳಿದರು. ಆದರೆ ನಾನು ಐದು ಕುರ್ತಾ-ಪೈಜಾಮಗಳೊಂದಿಗೆ ಬಂದಿದ್ದೇವೆ ಅವುಗಳೊಂದಿಗೆ ಮಾತ್ರ ತೆರಳುತ್ತೇನೆ ಎಂದು ನಾನು ಹೇಳಿದೆ,'' ಎಂದಿದ್ದರು.
ಎರಡು ದೊಡ್ಡ ಉದ್ಯಮ ಸಂಸ್ಥೆಗಳಿಗೆ ಸೇರಿದ ಕಡತಗಳನ್ನು ಅಂಗೀಕರಿಸಲು ತನಗೆ ಈ ಲಂಚದ ಆಮಿಷವೊಡ್ಡಲಾಗಿತ್ತು ಎಂದು ಅವರು ಹೇಳಿದ್ದರು.
ಈ ವಿಚಾರ ತಿಳಿಸಲು ತಾವು ಪ್ರಧಾನಿ ನರೇಂದ್ರ ಮೋದಿಯನ್ನೂ ಭೇಟಿಯಾಗಿದ್ದಾಗಿ ಹೇಳಿದ್ದ ಅವರು "ನಾನು ಹುದ್ದೆ ತೊರೆಯಲು ಸಿದ್ಧ ಎಂದು ಅವರಿಗೆ (ಮೋದಿಗೆ) ನೇರವಾಗಿ ಹೇಳಿಬಿಟ್ಟಿ. ಆದರೆ ನಾನು ಹುದ್ದೆಯಲ್ಲಿ ಉಳಿದರೆ ಈ ಫೈಲ್‍ಗಳನ್ನು ಅಂಗೀಕರಿಸುವುದಿಲ್ಲ ಎಂದು ಹೇಳಿದೆ,'' ಎಂದಿದ್ದರು.
"ನಾನು ಹುದ್ದೆಯಲ್ಲಿದ್ದ ವೇಳೆ ಭ್ರಷ್ಟಾಚಾರ ನಡೆದಿಲ್ಲ, ಇತರ ಕಡೆಗಳಲ್ಲಿ ಶೇ 5ರಷ್ಟು ಕಮಿಷನ್ ಇದ್ದರೆ ಕಾಶ್ಮೀರದಲ್ಲಿ ಶೇ 15ರಷ್ಟಿದ್ದು ವ್ಯಾಪಕವಾಗಿತ್ತು,'' ಎಂದು ಅವರು ಆರೋಪಿಸಿದರು.
ಮೂರು ಕೃಷಿ ಕಾಯಿದೆಗಳು ಹಾಗೂ ರೈತರ ಹೋರಾಟ ಕುರಿತಂತೆಯೂ ಮಲಿಕ್ ಹಲವು ಬಾರಿ ಪ್ರಧಾನಿಯನ್ನು ಟೀಕಿಸಿದ್ದರು.