×
Ad

ಉಡುಪಿ: 27ರಂದು ವಿಶ್ವ ರಂಗಭೂಮಿ ದಿನಾಚರಣೆ

Update: 2022-03-25 20:30 IST

ಉಡುಪಿ, ಮಾ.25: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಎಂಜಿಎಂ ಕಾಲೇಜು ಉಡುಪಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಂಗಭೂಮಿ ಉಡುಪಿ 'ವಿಶ್ವ ರಂಗಭೂಮಿ ದಿನಾಚರಣೆ' ಯನ್ನು ಮಾ.27ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದೆ ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 6:00ಗಂಟೆಗೆ ನಡೆಯುವ ವಿಶ್ವ ರಂಗಭೂಮಿ ದಿನಾಚರಣೆಯನ್ನು ರಥಬೀದಿ ಗೆಳೆಯರು ಉಡುಪಿ ಇದರ ಅಧ್ಯಕ್ಷ ಹಾಗೂ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಉದ್ಘಾಟಿಸಲಿದ್ದಾರೆ. ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಎಂ.ಕೆ.ಮಠ ಉಪ್ಪಿನಂಗಡಿ, ಉದ್ಯಮಿ ಶ್ರೀಶ ನಾಯಕ್ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ ನಾಯ್ಕಾ ಉಪಸ್ಥಿತರಿರುವರು. ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಹಿರಿಯ ರಂಗಕರ್ಮಿ, ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್ ಎಂ. ಇವರನ್ನು ಸನ್ಮಾನಿಸಲಾಗುವುದು ಎಂದು ತಲ್ಲೂರು ತಿಳಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಪ್ರಶಾಂತ್ ಉದ್ಯಾವರ ನಿರ್ದೇಶನದಲ್ಲಿ 'ಉಡಿಯೊಳಗಣ ಕಿಚ್ಚು' ನಾಟಕದ ಪ್ರದರ್ಶನವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಜೊತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ, ಸದಸ್ಯರಾದ ಪೂರ್ಣಿಮ ಸುರೇಶ್, ಆನಂದ ಮೇಲಂಟ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News