ಉಕ್ರೇನ್: ನಾಟಕಶಾಲೆಯ ಮೇಲೆ ಬಾಂಬ್ ದಾಳಿ; ಕನಿಷ್ಟ 300 ಮಂದಿ ಮೃತಪಟ್ಟಿರುವ ಶಂಕೆ
ಕೀವ್: ಮಾರ್ಚ್ 16ರಂದು ಮರಿಯುಪೋಲ್ ನ ನಾಟಕಶಾಲೆಯ ಮೇಲೆ ರಶ್ಯ ಪಡೆ ನಡೆಸಿದ್ದ ಬಾಂಬ್ ದಾಳಿ ಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆಯಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಮರಿಯುಪೋಲ್ ನಗರದ ಮೇಲೆ ರಶ್ಯ ಸೇನೆ ನಡೆಸುತ್ತಿದ್ದ ನಿರಂತರ ವಾಯುದಾಳಿಯಿಂದ ರಕ್ಷಣೆ ಪಡೆಯಲು ಈ ನಾಟಕಶಾಲೆಯಲ್ಲಿ ಸುಮಾರು 1,300 ಜನ ಆಶ್ರಯ ಪಡೆದಿದ್ದರು. ಈ ನಾಟಕ ಶಾಲೆಯ ಹೊರಗಿನ ನೆಲದಲ್ಲಿ ದೊಡ್ಡ ಅಕ್ಷರದಲ್ಲಿ ‘ಮಕ್ಕಳು’ ಎಂದು ರಶ್ಯನ್ ಭಾಷೆಯಲ್ಲಿ ಬರೆಯಲಾಗಿತ್ತು. ಇದನ್ನು ಆಕ್ರಮಣಕಾರರು ಗಮನಿಸಿದ್ದರೂ ನಾಟಕ ಶಾಲೆಯನ್ನು ಗುರಿಯಾಗಿಸಿ ಬಾಂಬ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಸಾವುನೋವು ಸಂಭವಿಸಿಲ್ಲ. ಹೆಚಿನವರು ಅಲ್ಲಿಂದ ಪಾರಾಗಿದ್ದಾರೆ ಎಂದು ಇದುವರೆಗೆ ಭಾವಿಸಿದ್ದೆವು. ಆದರೆ ದಾಳಿಯಿಂದ ಪಾರಾಗಿ ಬಂದವರ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ದಾಳಿ ಸಂದರ್ಭ ನಾಟಕಶಾಲೆಯಲ್ಲಿ 1,300ರಷ್ಟು ಜನರಿದ್ದರು. ಆದ್ದರಿಂದ ಕನಿಷ್ಟ 300 ಮಂದಿ ಸಾವನ್ನಪ್ಪಿದ್ದಾರೆ. ಇದೊಂದು ಭಯಾನಕ ದುರಂತ ಎಂದು ಮರಿಯುಪೋಲ್ ನಗರ ಸಮಿತಿ ಹೇಳಿದೆ.
ರಶ್ಯದ ಆಕ್ರಮಣದಿಂದ ಮರಿಯುಪೋಲ್ ನಲ್ಲಿ ಸುಮಾರು 1 ಲಕ್ಷ ಮಂದಿ ಅನ್ನ, ಆಹಾರ, ವಿದ್ಯುತ್ ವ್ಯವಸ್ಥೆಯಿಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.