ತಮಿಳು ಮುಖಂಡರನ್ನು ಭೇಟಿಯಾದ ಶ್ರೀಲಂಕಾ ಅಧ್ಯಕ್ಷ
ಕೊಲಂಬೊ, ಮಾ.25: ಅಧಿಕಾರ ವಹಿಸಿಕೊಂಡ ಸುಮಾರು 2 ವರ್ಷದ ಬಳಿಕ, ಇದೇ ಪ್ರಥಮ ಬಾರಿಗೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಶುಕ್ರವಾರ ಪ್ರಮುಖ ತಮಿಳು ರಾಜಕೀಯ ಪಕ್ಷ ತಮಿಳ್ ನ್ಯಾಷನಲ್ ಅಲಯನ್ಸ್(ಟಿಎನ್ಎ)ನ ಮುಖಂಡರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2019ರ ನವೆಂಬರ್ ನಲ್ಲಿ ಅಧ್ಯಕ್ಷ ಹುದ್ದೆಗೇರಿದ್ದರೂ, ಅಲ್ಪಸಂಖ್ಯಾತ ತಮಿಳು ಸಮುದಾಯದ ಮುಖಂಡರನ್ನು ಭೇಟಿಯಾಗಲು ಇದುವರೆಗೂ ನಿರಾಕರಿಸುತ್ತಾ ಬಂದಿದ್ದರು. ದೇಶದ ಉತ್ತರ ಮತ್ತು ಪೂರ್ವದಲ್ಲಿ ತಮಿಳರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಅಧ್ಯಕ್ಷರೊಂದಿಗೆ ಚರ್ಚೆಗೆ ಅವಕಾಶ ಕೋರಿ ಕಳೆದ ತಿಂಗಳು ಟಿಎನ್ಎ ಸಂಸದರ ತಂಡ ಸಂಸತ್ ಭವನದ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿತ್ತು.
ತಮಿಳು ಅಲ್ಪಸಂಖ್ಯಾತರ ರಾಜಕೀಯ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದ ಸಂವಿಧಾನದ 13ನೇ ತಿದ್ದುಪಡಿಯನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಬೇಕು ಎಂಬುದು ಟಿಎನ್ಎ ಪಕ್ಷದ ಕೋರಿಕೆಯಾಗಿದೆ. 1987ರಲ್ಲಿ ಅಂದಿನ ಶ್ರೀಲಂಕಾ ಅಧ್ಯಕ್ಷ ಜೆಆರ್ ಜಯವರ್ದನ ಮತ್ತು ಭಾರತದ ಪ್ರಧಾನಿ ರಾಜೀವ್ ಗಾಂಧಿಯವರ ನಡುವಿನ ಒಪ್ಪಂದಕ್ಕೆ ಅನುಸಾರವಾಗಿ ಶ್ರೀಲಂಕಾದ ಸಂವಿಧಾನಕ್ಕೆ 13ನೇ ತಿದ್ದುಪಡಿ ಮಾಡಲಾಗಿದೆ. ಇದು ಶ್ರೀಲಂಕಾದ ಅಲ್ಪಸಂಖ್ಯಾತ ತಮಿಳು ಸಮುದಾಯಕ್ಕೆ ಅಧಿಕಾರ ವಿಕೇಂದ್ರೀಕರಣವನ್ನು ಒದಗಿಸುತ್ತದೆ.
ಸಂವಿಧಾನದ 13ನೇ ತಿದ್ದುಪಡಿಯನ್ನು ಅರ್ಥಪೂರ್ಣವಾಗಿ ಜಾರಿಗೊಳಿಸಬೇಕು ಎಂಬುದು ಟಿಎನ್ಎ ಪಕ್ಷದ ಕೋರಿಕೆಯಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಮೇಲೆ ರಾಜ್ಯಪಾಲರ ನಿಯಂತ್ರಣ ಕೊನೆಯಾಗಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಟಿಎನ್ಎ ಪ್ರಧಾನ ವಕ್ತಾರ ಎಂಎ ಸುಮಂಥಿರನ್ ಹೇಳಿದ್ದಾರೆ.