ರಷ್ಯಾ-ಉಕ್ರೇನ್ ಯುದ್ಧವನ್ನು 'ಗೌಣವಾಗಿಸಿದ್ದಕ್ಕೆ' ವಿಯೋನ್ ಚಾನಲ್ ಅನ್ನು ಬ್ಲಾಕ್ ಮಾಡಿದ ಯೂಟ್ಯೂಬ್ !

Update: 2022-03-26 11:08 GMT
Photo: wionews.com

ಹೊಸದಿಲ್ಲಿ: ಝೀ ಮೀಡಿಯಾದ 'ವಿಯೋನ್' ವಾಹಿನಿಯ ಚಾನಲ್ ಅನ್ನು ಯೂಟ್ಯೂಬ್ ನಿರ್ಬಂಧಿಸಿದೆ. ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವಿಯೋನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್ 10ರಂದು ವಿಯೋನ್ ತನ್ನ ಯೂಟ್ಯೂಬ್ ಚಾನಲ್‍ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋವೊಂದಕ್ಕೆ ಯೂಟ್ಯೂಬ್ ಆಕ್ಷೇಪ ಸೂಚಿಸಿದೆ ಎಂದು ವಿಯೋನ್ ಹೇಳಿದೆ.

ಉಕ್ರೇನ್ ವಿದೇಶ ಸಚಿವ ಡಿಮಿಟ್ರಿ ಕುಲೇಬ ಮತ್ತು ರಷ್ಯಾ ವಿದೇಶ ಸಚಿವ ಸರ್ಗೇಯಿ ಲವ್ರೋವ್ ಆವರ ಭಾಷಣಗಳನ್ನು ಈ ವೀಡಿಯೋ ತೋರಿಸಿದೆ ಎನ್ನಲಾಗಿದೆ.

ತನ್ನ ಯೂಟ್ಯೂಬ್ ಚಾನಲ್ ನಿರ್ಬಂಧಿಸದಂತೆ ವಿಯೋನ್ ಮಾಡಿದ ಮನವಿಯನ್ನು ತಿರಸ್ಕರಿಸಲಾಗಿದೆ 

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಸಹಿತ ಹಿಂಸಾತ್ಮಕ ಘಟನೆಗಳನ್ನು ನಿರಾಕರಿಸುವುದು ಅಥವಾ ಗೌಣವಾಗಿಸುವ ವಿಷಯವನ್ನು ನಮ್ಮ ಸಮುದಾಯ ಮಾರ್ಗಸೂಚಿಗಳು ನಿರ್ಬಂಧಿಸುತ್ತವೆ ಎಂದು ವಿಯೋನ್‍ಗೆ ನೀಡಿದ ಪ್ರತಿಕ್ರಿಯೆಯೆಲ್ಲಿ ಯೂಟ್ಯೂಬ್ ಹೇಳಿದೆ.

ಸುದ್ದಿ ವಾಹಿನಿ ಪೋಸ್ಟ್ ಮಾಡಿದ್ದ ವೀಡಿಯೋದಲ್ಲಿ ರಷ್ಯಾದ ವಿದೇಶ ಸಚಿವ ತಮ್ಮ ದೇಶ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ್ದನ್ನು ನಿರಾಕರಿಸಿದ್ದಾರೆನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ವಿಯೋನ್, ಉಕ್ರೇನ್ ವಿದೇಶ ಸಚಿವರ ಹೇಳಿಕೆಯಂತೆ ರಷ್ಯಾ ವಿದೇಶ ಸಚಿವರ ಹೇಳಿಕೆಯನ್ನು ಪ್ರಸಾರ ಮಾಡಲಾಗಿದೆ ಎಂದು ಹೇಳಿದೆ.

"ರಷ್ಯಾ ಹೇಳಿದ್ದೆಲ್ಲವನ್ನೂ ನಿರ್ಬಂಧಿಸಿ, ಪಾಶ್ಚಿಮಾತ್ಯ ದೇಶಗಳು ಹೇಳುವುದೆಲ್ಲವನ್ನೂ ತೋರಿಸುವ ರೀತಿಯ ಪತ್ರಿಕೋದ್ಯಮವನ್ನು ವಿಯೋನ್ ನಡೆಸುವುದಿಲ್ಲ. ಸಮತೋಲಿತ ಸುದ್ದಿ ಪ್ರಸಾರ ಮಾಡುವುದು ನಮ್ಮ ಉದ್ದೇಶ, ರಷ್ಯಾದ ಹೇಳಿಕೆಗಳನ್ನು ಪ್ರಸಾರ ಮಾಡದೇ ಇದ್ದ ಮಾತ್ರಕ್ಕೆ ಯುದ್ಧ ನಿಲ್ಲುವುದಿಲ್ಲ, ನಮ್ಮ ದನಿಯಡಗಿಸಲು ಯತ್ನಿಸಿದರೆ ನಮ್ಮ ಪತ್ರಿಕೋದ್ಯಮ ನಿಲ್ಲುವುದಿಲ್ಲ, ಜನರಿಗೆ ಸತ್ಯ ತಿಳಿಯುವಂತೆ  ಮಾಡುವುದು ನಮ್ಮ ಉದ್ದೇಶ,'' ಎಂದು ಸಂಸ್ಥೆ ಹೇಳಿದೆ.

ರಷ್ಯಾ ಸರಕಾರ ಪ್ರವರ್ತಿತ ಯೂಟ್ಯೂಬ್ ಚಾನೆಲ್‍ಗಳನ್ನು ತಾನು ನಿರ್ಬಧಿಸುತ್ತಿರುವುದಾಗಿ ಯೂಟ್ಯೂಬ್ ಮಾರ್ಚ್ 11ರಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News