ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ಲಸಿಕೆ ಪ್ರಮಾಣಪತ್ರಗಳಲ್ಲಿ ಮತ್ತೆ ಪ್ರಧಾನಿಯ ಭಾವಚಿತ್ರ ಹಾಕಲು ಕ್ರಮ
Update: 2022-03-26 18:22 IST
ಹೊಸದಿಲ್ಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿದು ಫಲಿತಾಂಶಗಳು ಹೊರಬಿದ್ದಿರುವುದರಿಂದ ಈ ರಾಜ್ಯಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಪ್ರಕಟಿಸುವುದನ್ನು ಮುಂದುವರಿಸಲು ಕೇಂದ್ರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಚುನಾವಣೆಗಳಿದ್ದ ರಾಜ್ಯಗಳಾದ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರದಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಜಾರಿಯಾದ ಮಾದರಿ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅಲ್ಲಿನ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಚಿತ್ರ ಹಾಕುವುದನ್ನು ನಿಲ್ಲಿಸಲಾಗಿತ್ತು.
ಈಗ ಮತ್ತೆ ಪ್ರಧಾನಿಯ ಭಾವಚಿತ್ರವನ್ನು ಪ್ರಮಾಣಪತ್ರಗಳಲ್ಲಿ ಹಾಕಿಸುವ ಇಂಗಿತವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಕೋವಿನ್ ಆ್ಯಪ್‍ನಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.