ಐಪಿಎಲ್ ಉದ್ಘಾಟನಾ ಪಂದ್ಯ: ಚೆನ್ನೈ ವಿರುದ್ಧ ಮೊದಲು ಬೌಲಿಂಗ್ ಆಯ್ದುಕೊಂಡ ಕೆಕೆಆರ್
Update: 2022-03-26 19:31 IST
ಮುಂಬೈ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಶನಿವಾರ ಆರಂಭವಾಗಲಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದುಕೊಂಡ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಕೆಕೆಆರ್ ಮೂವರು ವಿದೇಶಿ ಆಟಗಾರರಾದ ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸ್ಸೆಲ್ ಹಾಗೂ ಸುನೀಲ್ ನರೇನ್‌ರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡಿದೆ. ಚೆನ್ನೈ ತಂಡವು ನಾಲ್ವರು ವಿದೇಶಿ ಆಟಗಾರರಾದ ಡಿವೊನ್ ಕಾನ್ವೇ, ಮಿಚೆಲ್ ಸ್ಯಾಂಟ್ನರ್, ಡ್ವೇಯ್ನಾ ಬ್ರಾವೊ ಹಾಗೂ ಆಡಮ್ ಮಿಲ್ನೆ ಅವರಿಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಿದೆ.
ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಹಾಗೂ ಚೆನ್ನೈ ತಂಡವನ್ನು ರವೀಂದ್ರ ಜಡೇಜ ಇದೇ ಮೊದಲ ಬಾರಿ ನಾಯಕರಾಗಿ ಮುನ್ನಡೆಸಲಿದ್ದಾರೆ. ಧೋನಿ ಈ ವಾರಾರಂಭದಲ್ಲಿ ಚೆನ್ನೈ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು.