​ಕುರ್ಕಾಲು ಬಹುಗ್ರಾಮ ಕುಡಿಯುವ ನೀರು ಯೋಜನೆ: ಮಾ.29ರಂದು ಗ್ರಾಮಸ್ಥರ ಬೃಹತ್ ಪ್ರತಿಭಟನೆ

Update: 2022-03-26 16:14 GMT

ಉಡುಪಿ : ಕಾಪು ತಾಲೂಕು ಕುರ್ಕಾಲುನಲ್ಲಿ ಪಾಪನಾಶಿನಿ ನದಿ ಕಿಂಡಿ ಅಣೆಕಟ್ಟಿನ ಬಳಿ ಕಾಮಗಾರಿ ಪ್ರಾರಂಭ ಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರುದ್ಧ ಕುರ್ಕಾಲು, ಮಣಿಪುರ ಮತ್ತು ಕುಂಜಾರು ಗ್ರಾಮಗಳ ಗ್ರಾಮಸ್ಥರು ಮಾ.29 ಮಂಗಳವಾರ ಬೆಳಗ್ಗೆ 9.30ಕ್ಕೆ ಕುರ್ಕಾಲು ಕಿಂಡಿ ಅಣೆಕಟ್ಟಿನ ವಠಾರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಕುರ್ಕಾಲಿನವರೆಗೆ ಹರಿದು ಬರುವ ಮೊದಲು ಅಲ್ಲಲ್ಲಿ ಹಲವು ಕಿಂಡಿ ಅಣೆಕಟ್ಟುಗಳನ್ನು ಹೊಂದಿರುವ ಈ ಪುಟ್ಟ ಹೊಳೆಯ ನೀರು ಬೇಸಿಗೆಯಲ್ಲಿ ಒಂದು ಗ್ರಾಮಕ್ಕೂ ಸಾಲದು. ಹಾಗಿದ್ದೂ ಈ ಯೋಜನೆಯಿಂದ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಇದನ್ನು ಕಾರ್ಯಗತಗೊಳಿಸಲು ಹೊರಡುವು ದರಿಂದ ಜನರ ತೆರಿಗೆ ಹಣವನ್ನು ಯೋಜನೆ ಹೆಸರಲ್ಲಿ ಪೋಲು ಮಾಡುವುದು ಬಿಟ್ಟು ಬೇರಾವ ಸಾಧನೆಯಾಗು ವುದಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ಈ ನದಿಯನ್ನು ಪ್ರಕೃತಿದತ್ತವಾಗಿ ನಂಬಿಕೊಂಡು ಬದುಕುತ್ತಿರುವ ಇಕ್ಕೆಲಗಳ ಕೃಷಿ ಮತ್ತು ಜನವಸತಿ ಪ್ರದೇಶಗಳ ಸಹಿತ ಮಣಿಪುರ, ಕುರ್ಕಾಲು, ಕುಂಜಾರು, ಪಡುಬೆಳ್ಳೆ ಮತ್ತು ಮೂಡುಬೆಳ್ಳೆ ಗ್ರಾಮಗಳ ಜನತೆಗೆ ಮತ್ತು ಅಲ್ಲಿಯ ಪರಿಸರಕ್ಕೆ  ಯೋಜನೆ ದೀರ್ಘಕಾಲಿನ ಹಾನಿ ಉಂಟುಮಾಡಲಿದೆ. ಕುಡಿಯಲು ಮತ್ತು ಕೃಷಿಗೆ ತಮ್ಮ ಸ್ವಂತ ನೀರಿನ ಮೂಲಗಳನ್ನು ಹೊಂದಿರುವ ಜನತೆಗೆ ಈ ಯೋಜನೆಯಿಂದಾಗಿ ನೀರಿನ ಮೂಲಗಳ ಸೆಲೆಗಳು ಬತ್ತಿಹೋಗಿ ಅಲ್ಲಿ ಉಪ್ಪು ನೀರು ತುಂಬಿಕೊಳ್ಳಲಿದೆ. ಮುಂದೆ ನೀರಿನ ಅಭಾವವೆಂದು ಮುಂದಿನ ದಿನಗಳಲ್ಲಿ ಅಣೆಕಟ್ಟಿನ ಎತ್ತರವನ್ನು ಏರಿಸಲು ಹೊರಟರೆ ನದಿಯ ಇಕ್ಕೆಲಗಳಲ್ಲಿರುವ ಜನವಸತಿ ಮತ್ತು  ಕೃಷಿ ಭೂಮಿ ಮುಳುಗಡೆಯಾಗಲಿದೆ ಎಂಬ ಭೀತಿ ಗ್ರಾಮಸ್ಥರಿಗಿದೆ.

ಆದ್ದರಿಂದ ಈ ಯೋಜನೆಯನ್ನು ಆರಂಭದಲ್ಲೇ ನಿಲುಗಡೆಗೊಳಿಸಲು ಈ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕುರ್ಕಾಲು ಗ್ರಾಪಂ ಅಧ್ಯಕ್ಷ ಮಹೇಶ್ ಶೆಟ್ಟಿ, ಮಣಿಪುರ ಗ್ರಾಪಂ ಅಧ್ಯಕ್ಷ ಹಸನ್ ಮಣಿಪುರ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ಯೋಜನಾ ವಿರೋಧಿ ಸಮಿತಿ ಸಂಚಾಲಕರಾದ ರವಿ ಪೂಜಾರಿ ಕುರ್ಕಾಲು, ಮಣಿರಾಜ್ ಕುರ್ಕಾಲು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News