‘ಸರಕಾರಿ ಆದೇಶ’ವನ್ನು ಉಲ್ಲೇಖಿಸಿ ಮಾಜಿ ಪ್ರೊಫೆಸರ್ ಕಾರ್ಯಕ್ರಮ ರದ್ದುಗೊಳಿಸಿದ ಇಂದೋರ್ ಸಭಾಂಗಣ

Update: 2022-03-26 17:31 GMT
Photo : AISA/Twitter

ಭೋಪಾಲ, ಮಾ.26: ‘ಸರಕಾರದ ಆದೇಶ ’ವನ್ನು ಉಲ್ಲೇಖಿಸಿ ಇಲ್ಲಿಯ ಟ್ರಸ್ಟ್‌ವೊಂದು ಇಂದೋರಿನಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಪ್ರೊಫೆಸರ್ ಹಾಗೂ ಲೇಖಕ ಶಮ್ಸುಲ್ ಇಸ್ಲಾಂ ಅವರು ಭಾಗವಹಿಸಲಿದ್ದ ಕಾರ್ಯಕ್ರಮವೊಂದನ್ನು ರದ್ದುಗೊಳಿಸಿದೆ.

ಜಲ್ ಆಡಿಟೋರಿಯಂ ಅನ್ನು ನಡೆಸುತ್ತಿರುವ ಜವಳಿ ಅಭಿವೃದ್ಧಿ ಟ್ರಸ್ಟ್ ‘ಸರಕಾರಿ ಆದೇಶ’ವನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಸೂಚಿಸಿ ಒಂದು ದಿನ ಮೊದಲು ಸಂಘಟಕರಿಗೆ ಪತ್ರವನ್ನು ರವಾನಿಸಿತ್ತು.

ಸಂಘಟಕರು ಶುಕ್ರವಾರ ಕಾರ್ಯಕ್ರಮಕ್ಕೆ ಮತ್ತೆ ಅನುಮತಿಯನ್ನು ಕೋರಿದ್ದರು. ಆದರೆ,ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಅವಕಾಶವನ್ನು ನೀಡಲು ಸಾಧ್ಯವಿಲ್ಲ ಎಂದು ಸಭಾಂಗಣದ ಮಾಲಿಕರು ತಿಳಿಸಿದ್ದರು.

ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮತ್ತು ಲೇಖಕ ಅಶೋಕ ಪಾಂಡೆ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು.

 ‘ಕಾರ್ಯಕ್ರಮವನ್ನು ಇಲ್ಲಿ ನಡೆಸುವಂತಿಲ್ಲ ಎಂಬ ಮಾಹಿತಿಯನ್ನು ನಾವು ಆಡಳಿತದಿಂದ ಪಡೆದಿದ್ದೇವೆ ’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಂ.ಸಿ.ರಾವತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಅನುಮತಿ ನಿರಾಕರಣೆಯ ಹಿಂದಿನ ಕಾರಣ ಕುರಿತಂತೆ ರಾವತ್ ತನ್ನ ಮೇಜನ್ನು ಗುದ್ದಿ,‘ಕಾರ್ಯಕ್ರಮಕ್ಕೆ ಅವಕಾಶ ನೀಡದಿರುವಂತೆ ಸರಕಾರವು ನಮಗೆ ತಿಳಿಸಿದೆ. ನಾಳೆ ಸರಕಾರವು ಈ ಮೇಜು ತನಗೆ ಬೇಕು ಎಂದು ಹೇಳಿದರೆ ನಾನು ಅದನ್ನು ಕೊಡಬೇಕಾಗುತ್ತದೆ’ ಎಂದರು.

‘ನಾನು ದೇಶಾದ್ಯಂತ ಪ್ರವಾಸ ಮಾಡುತ್ತ ಧಾರ್ಮಿಕ ಸೌಹಾರ್ದದ ಅಗತ್ಯದ ಕುರಿತು ಮಾತನಾಡುತ್ತಿದ್ದೇನೆ. ಕೆಲವರು ಹಿಂದುಗಳು ಮತ್ತು ಮುಸ್ಲಿಮರ ನಡುವೆ ಒಡಕು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಶ್ರೀಕೃಷ್ಣನ ಕುರಿತು ಮೌಲಾನಾ ಹಸರತ್ ಮೊಹಾನಿಯವರ ಗೀತೆಯನ್ನು ಓದಲು ನಾನು ಬಯಸಿದ್ದೇನೆ. ಭೋಪಾಲದ 20 ಕಡೆಗಳಲ್ಲಿ ನಾನು ಈ ಗೀತೆಯನ್ನು ಓದಿದ್ದೇನೆ ಮತ್ತು ಎಲ್ಲಿಯೂ ಸಮಸ್ಯೆಯಾಗಿರಲಿಲ್ಲ. ಆದರೆ ಅವರು ನನ್ನನ್ನು ತಡೆಯಲು ಬಯಸಿದ್ದಾರೆ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇಸ್ಲಾಮ್ ತಿಳಿಸಿದರು.

ಇಸ್ಲಾಮ್ ದಿಲ್ಲಿ ವಿವಿಯಲ್ಲಿ ರಾಜಕೀಯ ವಿಜ್ಞಾನದ ಬೋಧಕರಾಗಿದ್ದರು. ಇತರ ವಿಷಯಗಳ ಜೊತೆ ಧಾರ್ಮಿಕ ಮತಾಂಧತೆ,ನಿರಂಕುಶಾಧಿಕಾರ ಮತ್ತು ಮಹಿಳೆಯರಿಗೆ ಕಿರುಕುಳದ ವಿರುದ್ಧ ಅವರು ಲೇಖನಗಳನ್ನು ಬರೆಯುತ್ತಿದ್ದಾರೆ ಎಂದು ಅವರ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಭಾರತದಲ್ಲಿ ಮತ್ತು ವಿಶ್ವಾದ್ಯಂತ ರಾಷ್ಟ್ರವಾದದ ಉದಯ ಮತ್ತು ಅದರ ಏಳಿಗೆಯ ಬಗ್ಗೆ ತಾನು ಮೂಲಭೂತ ಸಂಶೋಧನೆಗಳನ್ನು ನಡೆಸಿದ್ದೇನೆ ಎಂದು ಇಸ್ಲಾಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News