×
Ad

ಇಮ್ರಾನ್ ಖಾನ್ ಪಕ್ಷದ 50 ಸಚಿವರು ನಾಪತ್ತೆ : ವರದಿ

Update: 2022-03-27 08:15 IST

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ದಿನ ಸಮೀಪಿಸುತ್ತಿದ್ದಂತೆ, ಆಡಳಿತಾರೂಢ ತೆಹ್ರಿಕ್ ಇ ಇನ್ಸಾಫ್ ಪಕ್ಷದ 50 ಮಂದಿ ಸಚಿವರು ಕಣ್ಮರೆಯಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಪಾಕಿಸ್ತಾನದಲ್ಲಿ 50ಕ್ಕೂ ಹೆಚ್ಚು ಮಂದಿ ಫೆಡರಲ್ ಮತ್ತು ಪ್ರಾಂತೀಯ ಸಚಿವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಎಕ್ಸ್‌ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ನಾಪತ್ತೆಯಾಗಿರುವ ಸಚಿವರಲ್ಲಿ 25 ಮಂದಿ ಫೆಡರಲ್ ಮತ್ತು ಪ್ರಾಂತೀಯ ಸಲಹೆಗಾರರು ಹಾಗೂ ವಿಶೇಷ ಸಹಾಯಕರಾಗಿದ್ದು, ಈ ಪೈಕಿ ನಾಲ್ಕು ಮಂದಿ ರಾಜ್ಯ ಸಚಿವರು. ನಾಲ್ಕು ಮಂದಿ ಸಲಹೆಗಾರರು ಹಾಗೂ 19 ಮಂದಿ ವಿಶೇಷ ಸಹಾಯಕರು ಎಂದು ಮೂಲಗಳನ್ನು ಉಲ್ಲೇಖಿಸಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವಿವರಿಸಿದೆ.

ಆದಾಗ್ಯೂ ರಾಷ್ಟ್ರಮಟ್ಟದಲ್ಲಿ ಪಾಕಿಸ್ತಾನಿ ಪ್ರಧಾನಿ ಇನ್ನೂ ತಮ್ಮ ಸಚಿವರ ಬೆಂಬಲ ಹೊಂದಿದ್ದಾರೆ. ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ, ಮಾಹಿತಿ ಸಚಿವ ಫವಾದ್ ಚೌದರಿ, ವಿದ್ಯುತ್ ಸಚಿವ ಹಮ್ಮದ್ ಅಝರ್, ರಕ್ಷಣಾ ಸಚಿವ ಪರ್ವೇಝ್ ಖಟ್ಟಾಕ್ ಮತ್ತು ಆಂತರಿಕ ಸಚಿವ ಶೇಖ್ ರಶೀದ್ ಅವರು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಿಸುತ್ತಿದ್ದಾರೆ.‌

ಏತನ್ಮಧ್ಯೆ ಇಮ್ರಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿಯನ್ನು ಮಾರ್ಚ್ 28ಕ್ಕೆ ಮುಂದೂಡಲಾಗಿದ್ದು, ಆಡಳಿತಾರೂಢ ತೆಹ್ರಿಕ್ ಇ ಇನ್ಸಾಫ್ ಮಿತ್ರಪಕ್ಷಗಳ ಓಲೈಕೆಯನ್ನು ಮುಂದುವರಿಸಿದೆ. ಎಂಕ್ಯೂಎಂ-ಪಿ ಪಕ್ಷದ ನಿಯೋಗ ಇಂದು ಪ್ರಧಾನಿಯನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News