ಪ್ರಧಾನಿ ಪಂಜಾಬ್ ಭೇಟಿ: ಭದ್ರತಾ ಲೋಪವಿದ್ದರೂ ‘ಅತ್ಯುತ್ತಮ ’ ಸುರಕ್ಷತೆಗಾಗಿ 14 ಪೊಲೀಸರಿಗೆ ಪ್ರಶಸ್ತಿ
ಚಂಡಿಗಡ, ಮಾ.27: ಫಿರೋಝ್ ಪುರ ಭದ್ರತಾ ಲೋಪದ ಬಗ್ಗೆ ಟೀಕೆಗಳನ್ನು ಎದುರಿಸಿದ್ದ ಪಂಜಾಬ್ ಪೊಲೀಸ್ ಇಲಾಖೆಯು ಇತ್ತೀಚಿನ ವಿಧಾನಸಭಾ ಚುನಾವಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಜಲಂಧರ್ ಭೇಟಿಯ ವೇಳೆ ಲೋಪರಹಿತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದಕ್ಕಾಗಿ 14 ಪೊಲೀಸ್ ಸಿಬ್ಬಂದಿಗಳಿಗೆ ‘ಡಿಜಿಪಿಯವರ ಪ್ರಶಂಸಾ ಫಲಕ ’ಗಳನ್ನು ಪ್ರದಾನಿಸಿದೆ.
ಈ ವರ್ಷದ ಜನವರಿ 5ರಂದು ಮೋದಿಯವರು ಫಿರೋಝ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿಯ ಫ್ಲೈಓವರ್‌ನಲ್ಲಿ ಉಂಟಾದ ಟ್ರಾಫಿಕ್ ಜಾಮ್ ನಿಂದಾಗಿ ಭದ್ರತಾ ಲೋಪವುಂಟಾಗಿದ್ದು, ಇದಕ್ಕಾಗಿ ಪಂಜಾಬ್ ಪೊಲೀಸರು ತೀವ್ರ ಟೀಕೆಗೆ ತುತ್ತಾಗಿದ್ದರು. ಮೋದಿಯವರು ಫೆ.14ರಂದು ಜಲಂಧರ್ ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು, ಇದು ಫಿರೋಝ್ ಪುರ ಭದ್ರತಾ ವೈಫಲ್ಯದ ಬಳಿಕ ಪಂಜಾಬಿನಲ್ಲಿ ಅವರ ಮೊದಲ ಕಾರ್ಯಕ್ರಮವಾಗಿತ್ತು.
ಪಂಜಾಬ ಡಿಜಿಪಿ ವಿ.ಕೆ.ಭಾವ್ರಾ ಅವರ ಆದೇಶದಂತೆ ಶುಕ್ರವಾರ ಎಸ್ಎಸ್ಪಿ, ಎಐಜಿ, ಕಮಾಂಡಂಟ್, ಡಿಸಿಪಿ.ಎಡಿಸಿಪಿಗಳು ಸೇರಿದಂತೆ ಒಟ್ಟು 14 ಪೊಲೀಸ್ ಅಧಿಕಾರಿಗಳಿಗೆ ಪುರಸ್ಕಾರಗಳನ್ನು ವಿತರಿಸಲಾಗಿದೆ