ಉತ್ತರಪ್ರದೇಶ: ಶೇ.50ರಷ್ಟು ಸಚಿವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವವರು!

Update: 2022-03-27 16:38 GMT

ಹೊಸದಿಲ್ಲಿ,ಮಾ.29: ಉತ್ತರಪ್ರದೇಶದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 45 ಮಂದಿ ರಾಜಕಾರಣಿಗಳಲ್ಲಿ ಅರ್ಧದಷ್ಟು ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದನ್ನು ತಾವು ಸಲ್ಲಿಸಿದ ಅಫಿಡವಿಟ್ ನಲ್ಲಿ ಘೋಷಿಸಿಕೊಂಡಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದ್ದಾರೆಂದು ಪ್ರಜಾತಾಂತ್ರಿಕ ಸುಧಾರಣೆಗಳಿಗಾಗಿ ಮತದಾನದ ಹಕ್ಕುಗಳ ಸಂಘ (ಎಡಿಆರ್) ಶನಿವಾರ ಪ್ರಕಟಿಸಿದ ವರದಿ ತಿಳಿಸಿದೆ.

 ಮುಖ್ಯಮಂತ್ರಿ ಸೇರಿದಂತೆ ಒಟ್ಟು 53 ಸಚಿವರ ಪೈಕಿ 45 ಮಂದಿ ಸಲ್ಲಿಸಿರುವ ಸ್ವಯಂಘೋಷಿತ ಅಫಿಡವಿಟ್ಗಳನ್ನು ಎಡಿಆರ್ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ. ಈ ವರದಿ ಪ್ರಕಟವಾಗುವ ಸಮಯದಲ್ಲಿ ಹಾಲಿ ಸಚಿವರಾದ ಸಂಜಯ್ ನಿಶಾದ್ ಹಾಗೂ ಜಿತಿನ್ ಪ್ರಸಾದ ಅವರ ಅಫಿಡವಿಟ್ ಗಳು ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ ವಿಶ್ಲೇಷಣೆಗೆ ಲಭ್ಯವಿರಲಿಲ್ಲ. ಸಚಿವರಾದ ಜೆ.ಪಿ.ಎಸ್.ರಾಥೋಡ್, ನರೇಂದ್ರ ಕಶ್ಯಪ್, ದಿನೇಶ್ ಪ್ರತಾಪ್ ಸಿಂಗ್, ದಯಾಶಂಕರ್ ಮಿಶ್ರಾ ದಯಾಳ್ ಹಾಗೂ ದಾನಿಶ್ ಆಝಾದ್ ಅನ್ಸಾರಿ ಅವರು ಪ್ರಸಕ್ತ ರಾಜ್ಯ ವಿಧಾನಸಭೆಯ ಅಥವಾ ವಿಧಾನಪರಿಷತ್ ಸದಸ್ಯರಲ್ಲವಾದ ಕಾರಣ ಅವರ ವಿವರಗಳನ್ನು ಲಭ್ಯವಿಲ್ಲ.

ಎಡಿಆರ್ ವರದಿಯ ಪ್ರಕಾರ 22 (ಶೇ.49) ಸಚಿವರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಘೋಷಿಸಿದ್ದಾರೆ ಹಾಗೂ 20 (ಶೇ.44) ಸಚಿವರುಗಳು ತಮ್ಮ ವಿರುದ್ಧ ಗಂಭೀರವಾದ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ. 5 ವರ್ಷಗಳು ಅಥವಾ ಅದಕ್ಕಿಂತ ಅಧಿಕ ಅವಧಿಯವರಿಗೆ ಗರಿಷ್ಠ ಶಿಕ್ಷೆಗೆ ವಿಧಿಸಬಹುದಾದ ಅಪರಾಧಗಳು, ಜಾಮೀನಿಗೆ ಯೋಗ್ಯವಲ್ಲದ ಅಥವಾ ಚುನಾವಣಾ ಅಪರಾಧಗಳನ್ನು ಗಂಭೀರವಾದ ಕ್ರಿಮಿನಲ್ ಪ್ರಕರಣಗಳೆಂದು ಪರಿಗಣಿಸಲ್ಪಡುತ್ತವೆಯೆಂದು ಎಡಿಆರ್ ಹೇಳಿದೆ.

ಗಮನಾರ್ಹವೆಂದರೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ತನ್ನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲವೆಂದು ಘೋಷಿಸಿದ್ದಾರೆ. ಆದಿತ್ಯನಾಥ್ ಹಿಂದಿನ ಅಧಿಕಾರಾವಧಿಯಲ್ಲಿ ಉ.ಪ್ರ. ಸರಕಾರವು ಅವರ ವಿರುದ್ಧ ದಾಖಲಾಗಿದ್ದ ದ್ವೇಷಭಾಷಣದ ಪ್ರಕರಣವನ್ನು ಹಿಂತೆಗೆದುಕೊಂಡಿತ್ತು.

ಉತ್ತರಪ್ರದೇಶದ ಹಾಲಿ ಸಚಿವರ ಪೈಕಿ ಬಹುತೇಕ ಮಂದಿ ಕೋಟ್ಯಾಧಿಪತಿಗಳೆಂಬುದನ್ನು ಕೂಡಾ ಎಡಿಆರ್ ವಿಶ್ಲೇಷಣೆಯು ಬಹಿರಂಗಪಡಿಸಿದೆ. ವಿಶ್ಲೇಷಣೆಗೊಳಗಾದ 45 ಸಚಿವರ ಪೈಕಿ 39 (ಶೇ.38) ಮಂದಿ ಕೋಟ್ಯಾಧಿಪತಿಗಳಾಗಿದ್ದು ಅವರು ಸರಾಸರಿ 9 ಕೋಟಿ ರೂ. ವೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆಂದು ವರದಿ ಹೇಳಿದೆ.

ತಿಲೋಯಿ ಕ್ಷೇತ್ರದಿಂದ ಆಯ್ಕೆಯಾಗಿರುವ ಮಯಾಂಕೇಶ್ವರ್ ಸಿಂಗ್ 58.07 ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿರುವುದಾಗಿ ಘೋಷಿಸಿದ್ದು, ಇದು ಅತ್ಯಧಿಕವಾಗಿದೆ. ವಿಧಾನಪರಿಷತ್ ಸದಸ್ಯ ಧರ್ಮ ವೀರ್ ಸಿಂಗ್ ಅವರು ಅತ್ಯಂತ ಕನಿಷ್ಠ ಮೊತ್ತದ ಅಂದರೆ 42.91 ಲಕ್ಷ ರೂ. ವೌಲ್ಯದ ಸಂಪತನ್ನು ಹೊಂದಿರುವುದಾಗಿ ಪ್ರಕಟಿಸಿದ್ದಾರೆ.

ಸಂಪುಟದ 9 ಸಚಿವರ ಶೈಕ್ಷಣಿಕ ಅರ್ಹತೆಯು 8ನೇ ತರಗತಿಯಿಂದ 12ನೇ ತರಗತಿಯ ಒಳಗಿದ್ದರೆ, 36 ಸಚಿವರು ಪದವೀಧರರು ಇಲ್ಲವೇ ಅದಕ್ಕಿಂತ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಹೊಂದಿದವರಾಗಿದ್ದಾರೆ.

20 ಸಚಿವರ ವಯಸ್ಸು 30 ಹಾಗೂ 50 ವರ್ಷಗಳ ಒಳಗಿದ್ದರೆ, 25 ಸಚಿವರುಗಳ ವಯಸ್ಸು 51 ಹಾಗೂ 70 ವರ್ಷಗಳ ಒಳಗಿರುವುದಾಗಿ ಅವರು ಸಲ್ಲಿಸಿದ ಅಫಿಡವಿಟ್ ಗಳಿಂದ ತಿಳಿದುಬಂದಿರುವುದಾಗಿ ಎಡಿಆರ್ ವಿಶ್ಲೇಷಣಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News