2024ರ ಲೋಕಸಭಾ ಚುನಾವಣೆ: ಪ್ರಾದೇಶಿಕ ಆಯುಕ್ತರ ನೇಮಕಾತಿ ಕುರಿತು ಸರಕಾರ, ಇಸಿ ಅಭಿಪ್ರಾಯ ಕೋರಿದ ಸಂಸದೀಯ ಸಮಿತಿ

Update: 2022-03-27 16:49 GMT

ಹೊಸದಿಲ್ಲಿ, ಮಾ.27: ಚುನಾವಣಾ ಆಯೋಗ (ಇಸಿ)ವು ಗರಿಷ್ಠ ಮಾನವಬಲವನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿರುವ ಕಾನೂನು ಮತ್ತು ಸಿಬ್ಬಂದಿ ಕುರಿತು ಸಂಸದೀಯ ಸ್ಥಾಯಿ ಸಮಿತಿಯು, 2024ರ ಲೋಕಸಭಾ ಚುನಾವಣೆಗಳಲ್ಲಿ ಆಯೋಗಕ್ಕೆ ನೆರವಾಗಲು ಪ್ರಾದೇಶಿಕ ಆಯುಕ್ತರನ್ನು ನೇಮಕಗೊಳಿಸುವ ಕುರಿತು ಸರಕಾರ ಮತ್ತು ಇಸಿ ಅಭಿಪ್ರಾಯಗಳನ್ನು ಕೋರಿದೆ.

ವಿವಿಧ ಚುನಾವಣೆಗಳಲ್ಲಿ ಚುನಾವಣಾ ಆಯೋಗಕ್ಕೆ ನೆರವಾಗಲು ಪ್ರಾದೇಶಿಕ ಆಯುಕ್ತರನ್ನು ನೇಮಿಸಲು ಸಂವಿಧಾನದಲ್ಲಿ ಅವಕಾಶವಿದೆ.

1951ರಲ್ಲಿ ಮೊದಲ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಆರು ತಿಂಗಳ ಅವಧಿಗೆ ಬಾಂಬೆ (ಈಗಿನ ಮುಂಬೈ) ಮತ್ತು ಪಾಟ್ನಾಗಳಲ್ಲಿ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿತ್ತು. ಅದರ ನಂತರ ಇಂತಹ ನೇಮಕಾತಿಗಳು ನಡೆದಿಲ್ಲ.

ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಗೆ 2022-23ನೇ ಸಾಲಿಗೆ ಅನುದಾನಗಳ ಬೇಡಿಕೆಗಳ ಕುರಿತು ತನ್ನ ವರದಿಯಲ್ಲಿ ಸುಶೀಲ ಮೋದಿ ನೇತೃತ್ವದ ಸಂಸದೀಯ ಸಮಿತಿಯು, ಸಾಂವಿಧಾನಿಕ ಅವಕಾಶಗಳನ್ನು ಮತ್ತು ಅಗತ್ಯವಾದರೆ ರಾಷ್ಟ್ರಪತಿಗಳು ಪ್ರಾದೇಶಿಕ ಆಯುಕ್ತರನ್ನು ನೇಮಿಸಬಹುದು ಎಂದು ಚುನಾವಣಾ ಆಯೋಗವು ಸಲ್ಲಿಸಿರುವ ಹೇಳಿಕೆಯನ್ನು ತಾನು ಗಮನಿಸಿದ್ದೇನೆ ಎಂದು ತಿಳಿಸಿದೆ. ಆದಾಗ್ಯೂ ಮೊದಲ ಲೋಕಸಭಾ ಚುನಾವಣೆಗಳ ಬಳಿಕ ಪ್ರಾದೇಶಿಕ ಆಯುಕ್ತರನ್ನು ನೇಮಕಗೊಳಿಸಿಲ್ಲ ಎನ್ನುವುದನ್ನೂ ಅದು ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.
ಶಾಸಕಾಂಗ ಇಲಾಖೆಯು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುವ ಸರಕಾರದಲ್ಲಿನ ನೋಡಲ್ ಏಜೆನ್ಸಿಯಾಗಿದೆ.
ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳನ್ನು ನಡೆಸಲು ಪ್ರತಿ ರಾಜ್ಯದಲ್ಲಿ ತನ್ನ ಮುಖ್ಯ ಚುನಾವಣಾಧಿಕಾರಗಳನ್ನು ನೆಚ್ಚಿಕೊಂಡಿದೆ. ಮುಖ್ಯ ಚುನಾಣಾಧಿಕಾರಿಗಳನ್ನು ಸಾಮಾನ್ಯವಾಗಿ ಚುನಾವಣಾ ಆಯೋಗದ ‘ಕೈಕಾಲುಗಳು’ಎಂದು ಬಣ್ಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News