ಎಸೆಸೆಲ್ಸಿ ಪರೀಕ್ಷೆಗಾಗಿ ವಿದ್ಯಾರ್ಥಿ- ಶಿಕ್ಷಕರ ಸಿದ್ಧತೆ: ಕೊನೆ ಕ್ಷಣದಲ್ಲೂ ಮುಂದುವರಿದ ಪರಿಶ್ರಮ

Update: 2022-03-29 10:11 GMT

ಮಂಗಳೂರು, ಮಾ.29: ವಿದ್ಯಾರ್ಥಿ ಜೀವನದಲ್ಲಿ ಎಸೆಸೆಲ್ಸಿ ಅತ್ಯಂತ ಮಹತ್ತರ ಘಟ್ಟವಾಗಿ ಪರಿಗಣಿಸಲ್ಪಡುತ್ತದೆ. ಪೂರ್ವ ಶಿಕ್ಷಣವನ್ನು ಹೊರತುಪಡಿಸಿ 1ರಿಂದ 9ನೇ ತರಗತಿವರೆಗೆ ಪಡೆದ ಶಿಕ್ಷಣಕ್ಕೆ ಪೂರಕವಾದ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಪ್ರತಿಯೊಬ್ಬ ಎಸೆಸೆಲ್ಸಿ ವಿದ್ಯಾರ್ಥಿಯ ಗುರಿಯಾದರೆ, ಹೆತ್ತವರ ಆಕಾಂಕ್ಷೆ, ಶಿಕ್ಷಕರ ಮಾಗದರ್ಶನ, ಮಕ್ಕಳ ಪರಿಶ್ರಮಕ್ಕ ಸಿಗುವ ಪ್ರತಿಫಲವೂ ಎಸೆಸೆಲ್ಸಿ ಫಲಿತಾಂಶವಾಗಿರುತ್ತದೆ. ಈ ಫಲಿತಾಂಶಕ್ಕಾಗಿ ಸಿದ್ಧತೆ ಕೊನೆಕ್ಷಣದವರೆಗೂ ಮುಂದುವರಿಯುತ್ತದೆ ಎಂಬುದು ಶಾಲೆಗಳಲ್ಲಿ ಪರೀಕ್ಷಾ ಸಂದರ್ಭದಲ್ಲೂ ನಡೆಯುವ ವಿಶೇಷ ತರಗತಿಗಳೇ ಸಾಕ್ಷಿ.

ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ ಮಾ.28ರಿಂದ ಆರಂಭಗೊಂಡಿದ್ದು, ಎ. 11ರವರೆಗೆ ನಡೆಯಲಿದೆ. ಈಗಾಗಲೇ ಪ್ರಥಮ ಭಾಷಾ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸುದ್ದು, ಮಾ.30ರಂದು ದ್ವಿತೀಯ ಭಾಷಾ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಇದಕ್ಕಾಗಿ ಮಕ್ಕಳು ಮನೆಗಳಲ್ಲಿಯೇ ಮನನ ಮಾಡಿಕೊಳ್ಳುತ್ತಿರುವುದು ಮಾತ್ರವಲ್ಲ, ಸರಕಾರಿ ಶಾಲಾ ಮಕ್ಕಳಿಗೆ ಶಾಲೆಗಳಲ್ಲಿಯೇ ಪಾಠಗಳ ಪುನರ್‌ಮನದ ಜತೆಗೆ ಖುದ್ದು ಆಯಾ ಪಠ್ಯಗಳ ಶಿಕ್ಷಕರೇ ಮಾರ್ಗದರ್ಶನ ಸಲಹೆ ನೀಡುವ ಕೆಲಸ ನಗರದ ಸರಕಾರಿ ಶಾಲೆಗಳಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಸೋಮವಾರ ಪರೀಕ್ಷಾ ಕರ್ತವ್ಯ ಮುಗಿಸಿದ ಬಳಿಕ ಮತ್ತೆ ತಮ್ಮ ಶಾಲೆಗಳಲ್ಲಿ ಮಧ್ಯಾಹ್ನದ ಬಳಿಕವೂ ಸರಕಾರಿ ಶಾಲೆಗಳ ಶಿಕ್ಷಕರು ತರಗತಿ ನಡೆಸುವ ಕಾರ್ಯ ಮಾಡಿದ್ದಾರೆ. ಇಂದು ಕೂಡಾ ನಗರದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಮನನದ ಜತೆಗೆ ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸುತ್ತಿರುವುದು ಕಂಡು ಬಂತು.

ಇಂದು ಬೆಳಗ್ಗೆ ನಗರದ ಹೃದಯ ಭಾಗದ ಬಲ್ಮಠ ಬಳಿಯ ಸರಕಾರಿ ಹೆಣ್ಣುಮಕ್ಕಳ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಹೈಸ್ಕೂಲ್ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಶಿಕ್ಷಕಿ ಮರ್ಲಿನ್ ಮೇಬಲ್ ಮಸ್ಕರೇನಸ್ ಪಾಠ ಮಾಡುತ್ತಿದ್ದರು. ಇಲ್ಲಿ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ 62 ಮಂದಿ ವಿದ್ಯಾರ್ಥಿಗಳಿದ್ದು, ಇವರಲ್ಲಿ 11 ವಿದ್ಯಾರ್ಥಿಗಳಿಗೆ (ಸಣ್ಣಪುಟ್ಟ ನ್ಯೂನತೆ ಇರುವ) ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳಿಂದ ವಿನಾಯಿತಿ ಇದೆ. ಉಳಿದೆಲ್ಲಾ ಮಕ್ಕಳು ಇಂದು ಹಾಜರಾಗಿದ್ದು, ಶಿಕ್ಷಕಿಯಿಂದ ಕೊನೆ ಕ್ಷಣದ ಸಿದ್ಧತೆಯಲ್ಲಿ ತೊಡಗಿದ್ದರು.

 ‘‘ನಿನ್ನೆ ಪರೀಕ್ಷೆ ಮುಗಿಸಿ ನೇರವಾಗಿ ನಾವು ಶಾಲೆಗೆ ಬಂದಿದ್ದೆವು. ನಮಗೆ ಇಲ್ಲಿಯೇ ಊಟದ ವ್ಯವಸ್ಥೆಯೂ ಇದೆ. ಜತೆಗೆ ಪಾಠವನ್ನೂ ಮಾಡುತ್ತಾರೆ. ನಾವು ಮನೆಗೆ ಹೋಗಿ ಕಲಿಯಬಹುದು. ಆದರೆ ಶಾಲೆಯಲ್ಲಿ ತರಗತಿ ಕೊಠಡಿಯೊಳಗೆ ನಮಗೆ ಖುದ್ದು ಶಿಕ್ಷಕರೇ ಜತೆಗಿದ್ದು ಹೇಳಿಕೊಡುವುದು, ಕೊನೆ ಕ್ಷಣದಲ್ಲಿ ನಮ್ಮಲ್ಲಿನ ಅನುಮಾನಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭ. ಕೊರೋನದಿಂದಾಗಿ ಕಳೆದ ಸುಮಾರು ಎರಡು ವರ್ಷಗಳಲ್ಲಿ ಬಹಳಷ್ಟು ಸಮಯ ನಮಗೆ ತರಗತಿಗೆ ಹಾಜರಾಗಿ ಪಾಠ ಕೇಳಲು ಸಾಧ್ಯವಾಗದಿದ್ದರೂ ಆನ್‌ಲೈನ್ ಮೂಲಕ ತರಗತಿ ನಡೆಸಿದ್ದಾರೆ. ಈ ಬಾರಿ ವಿಶೇಷ ತರಗತಿಗಳ ಮೂಲಕ ನಮಗೆ ಬೆಳಗ್ಗೆ ಸಂಜೆ ಹೊತ್ತು ಹೆಚ್ಚುವರಿ ತರಗತಿಗಳನ್ನು ನಡೆಸಿದ್ದಾರೆ. ಜತೆಗೆ ಇದೀಗ ಪರೀಕ್ಷೆ ಸಂದರ್ಭದಲ್ಲೂ ಶಿಕ್ಷಕರು ನಮ್ಮ ಜತೆಗಿದ್ದು ನಮಗೆ ಹೇಳಿಕೊಡುತ್ತಿರುವುದು ಖಷಿ ನೀಡುತ್ತಿದೆ’’ ಎಂದು ವಿದ್ಯಾರ್ಥಿನಿಯರು ಅಭಿಪ್ರಾಯಿಸಿದ್ದಾರೆ.

ನಗರದ ರಥಬೀದಿಯ ಸರಕಾರಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿಯಲ್ಲಿ 15 ವಿದ್ಯಾರ್ಥಿಗಳಿದ್ದು, ಅವರು ಕೂಡಾ ಇಂದು ತಮ್ಮ ಆಂಗ್ಲ ಭಾಷಾ ಶಿಕ್ಷಕಿ ಡೈಸಿ ಕೊರಿಯನ್ ಅವರಿಂದ ಕೊನೆ ಕ್ಷಣದ ಸಿದ್ಧತೆಯಲ್ಲಿ ತೊಡಗಿದ್ದರು. ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವಿದ್ಯಾರ್ಥಿನಿಯರು ಅವರಾಗಿಯೇ ಮನದಲ್ಲಿ ತೊಡಗಿದ್ದರೆ, ಸ್ವಲ್ಪ ಹಿಂದಿರುವ ಮಕ್ಕಳನ್ನು ಶಿಕ್ಷಕಿ ತಮ್ಮ ಸುತ್ತ ಕುಳ್ಳಿರಿಸಿ ಅವರ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಸಹಕರಿಸುತ್ತಿರುವುದು ಕಂಡು ಬಂತು.

‘‘ನಿನ್ನೆಯೂ ಪರೀಕ್ಷೆ ಮುಗಿದ ಬಳಿಕ ಮಕ್ಕಳು ಶಾಲೆಗೆ ಬಂದಿದ್ದಾರೆ. ಅವರಿಗೆ ಪುನರಾವರ್ತನೆ ಮಾಡುವ ಕಾರ್ಯವನ್ನು ಶಿಕ್ಷಕರು ಮಾಡಿದ್ದಾರೆ. ಇದಲ್ಲದೆ, ಈ ಹಿಂದಿನ ದಿನಗಳಲ್ಲೂ ಬೆಳಗ್ಗೆ ಸಂಜೆಯ ಹೊತ್ತು ವಿಶೇಷ ತರಗತಿಗಳ ಮೂಲಕ ಮಕ್ಕಳಿಗೆ ತಯಾರಿ ಕೆಲಸವನ್ನು ಮಾಡುತ್ತಿದ್ದೇವೆ. ಶಿಕ್ಷಕರು ಕೂಡಾ ತಮ್ಮ ಪರೀಕ್ಷಾ ಕೆಲಸಗಳನ್ನು ಮುಗಿಸಿ ನೇರವಾಗಿ ಶಾಲೆಗೆ ಬಂದು ಮಕ್ಕಳ ಜತೆಯಲ್ಲೇ ಕಳೆಯುತ್ತಿದ್ದಾರೆ. ನಾಳೆ ಪರೀಕ್ಷೆ ಮುಗಿದ ಬಳಿಕ ಮತ್ತೆ ಮಕ್ಕಳು ಬರುತ್ತಾರೆ. ಮುಂದಿನ ಪರೀಕ್ಷೆ ಗಣಿತ. 23 ವರ್ಷಗಳಿಂದ ಶಿಕ್ಷಕಿಯಾಗಿರುವ ನಾನು ಗಣಿತ ಶಿಕ್ಷಕಿಯಾಗಿ ಕಳೆದ ಆರು ವರ್ಷಗಳಿಂದ ಈ ಶಾಲೆಯಲ್ಲಿದ್ದೇನೆ. ನಾಳೆ ಮಧ್ಯಾಹ್ನದ ಬಳಿಕ ನಾನು ಮಕ್ಕಳಿಗೆ ಮನನ ಮಾಡಲಿದ್ದೇನೆ’’ ಎನ್ನುತ್ತಾರೆ ರಥಬೀದಿ ಪ್ರೌಢಶಾಲೆಯ ಶಿಕ್ಷಕಿ ಅನಸೂಯ ಡಿ.

ಬಂದರು ಬಳಿಯ ದ.ಕ. ಜಿ.ಪಂ. ಸರಕಾರಿ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯೂ ಮಕ್ಕಳು ನಾಳಿನ ಆಂಗ್ಲಭಾಷಾ ಪರೀಕ್ಷಾ ತಯಾರಿಯಲ್ಲಿ ತಲ್ಲೀನರಾಗಿರುವುದು ಕಂಡುಬಂತು. ಶಿಕ್ಷಕಿ ಝೀತಾ ಡಿಸೋಜ ಅ 13 ಮಂದಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪಾಠ ಮನನ ಮಾಡಿಸುತ್ತಿದ್ದರು.

‘‘ಈ ಬಾರಿ ಶಾಲೆಯಿಂದ 15 ವಿದ್ಯಾರ್ಥಿಗಳು ಎಸೆಸೆಲ್ಸಿಗೆ ನೋಂದಾಯಿಸಿದ್ದರೂ, ಕಳೆದ ಹಲವು ಸಮಯದಿಂದ ಇಬ್ಬರು ವಿದ್ಯಾರ್ಥಿಗಳು ತರಗತಿಗೆ ಗೈರಾಗಿದ್ದಾರೆ. 13 ಮಂದಿಯಲ್ಲಿ 10 ಮಂದಿ ಉರ್ದು ಪ್ರಥಮ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ’’ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರಪ್ಪ ಮುದ್ನಾಳ ತಿಳಿಸಿದರು.

‘‘ನಮಗೆ ಶಾಲೆಗೆ ಬಂದು ಓದುವುದೆಂದರೆ ಖುಷಿ. ಮನೆಯಲ್ಲಾದರೆ ಅದೂ ಇದು ಕೆಲಸ ಹೇಳುತ್ತಾರೆ. ಮಾತ್ರವಲ್ಲದೆ, ನಮ್ಮ ಮನಸ್ಸು ಕೂಡಾ ಬೇರೆಕಡೆ ಆಕರ್ಷಿತವಾಗುತ್ತದೆ. ಆದರೆ ಶಾಲೆಯಲ್ಲಿ ಶಿಕ್ಷಕರು ನಮ್ಮ ಅನುಮಾನಗಳನ್ನು ಬಗೆಹರಿಸಲು ನಮ್ಮ ಜತೆಯಲ್ಲೇ ಇರುತ್ತಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಜತೆಗೆ ಸಂಜೆಯ ವೇಳೆ ಚಹಾ ತಿಂಡಿಯ ವ್ಯವಸ್ಥೆಯೂ ಇದೆ’’ ಎಂದು ಖುಷಿಯಿಂದಲೇ ಹೇಳುತ್ತಾರೆ ಮಕ್ಕಳು.

ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎಂಬ ಕೂಗಿನ ನಡುವೆಯ ಶಾಲಾ ಶಿಕ್ಷಕರು ಮಾತ್ರ ಯಾವುದೇ ಫಲಾಪೇಕ್ಷೆಯಿಲ್ಲದೆ ಒತ್ತಡದ ನಡುವೆಯೂ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಜತೆಗೆ ವಿದ್ಯಾರ್ಥಿಗಳು ಕೂಡಾ ತಮ್ಮ ಭವಿಷ್ಯವನ್ನು ಉತ್ತಮವಾಗಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News