ಸಿಲ್ವರ್ ಲೈನ್ ಯೋಜನೆ ಸ್ಥಗಿತದ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪು ದೇಶದ ಇತರ ಮಹತ್ವದ ಪ್ರಾಜೆಕ್ಟ್ ಗಳಿಗೂ ಅನ್ವಯ

Update: 2022-03-29 15:57 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.29:  ಸುಪ್ರೀಂಕೋರ್ಟ್‌ನ  ಅಭಿಪ್ರಾಯಿಸಿರುವಂತೆ ಸಿಲ್ವರ್ ಲೈನ್ ನಂತಹ ಮಹತ್ವಕಾಂಕ್ಷಿ ಯೋಜನೆಗಳನ್ನು ಸ್ಥಗಿತಗೊಳಿಸುವುದು ತಪ್ಪೆಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಿಸಿದೆ.

ದೇಶದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಅಖಿಲ ಭಾರತ ಮಟ್ಟದ ಹಿತಾಸಕ್ತಿಗೆ ಅನುಗುಣವಾದ ನಿಲುವನ್ನು ಕೈಗೊಳ್ಳುವ ಅಗತ್ಯವಿದೆಯೆಂದು ಸುಪ್ರೀಂಕೋರ್ಟ್ ಮಾರ್ಚ್ 28ರಂದು ನೀಡಿದ ತೀರ್ಪನ್ನು ಉಲ್ಲೇಖಿಸಿ ಕೇರಳ ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೇರಳದಲ್ಲಿ ಸೆಮಿ-ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯಾದ ಸಿಲ್ವರ್ ಲೈನ್ ಪ್ರಾಜೆಕ್ಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಕೇರಳ ಹೈಕೋರ್ಟ್ ಈ ಅನಿಸಿಕೆಯನ್ನು ವ್ಯಕ್ತಪಡಿಸಿದೆ.

ಸಿಲ್ವರ್ಲೈನ್ ಯೋಜನೆಗಾಗಿ ಭೂಸಮೀಕ್ಷೆಯನ್ನು ನಡೆಸಲು ಹಾಗೂ ಆ ಯೋಜನೆಗೆ ಸಂಬಂಧಿಸಿದ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ನಡೆಸಲು ಕೇರಳ ಸರಕಾರಕ್ಕೆ ಹಕ್ಕಿದೆ ಎಂಬ ಕೇರಳ ಹೈಕೋರ್ಟ್ ನ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಸಮೂಹವನ್ನು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಬಿ,ವಿ.ನಾಗರತ್ನ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠ ನ್ಯಾಯಪೀಠ ಸೋಮವಾರ ತಳ್ಳಿಹಾಕಿತ್ತು.
 ದೇಶದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸಿ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳ ವಿಚಾರಣೆಗಳ ನಿರ್ವಹಣೆಯಲ್ಲಿ ತಟಸ್ಥ ನಿಲುವು ವಹಿಸಬೇಕೆಂದು ಸುಪ್ರೀಂಕೋರ್ಟ್ ನ್ಯಾಯಾಲಯಗಳಿಗೆ ಸೂಚಿಸಿತ್ತು. ರಾಷ್ಟ್ರೀಯ ಹೆದ್ದಾರಿಗಳು, ಬುಲೆಟ್ ರೈಲುಗಳು ಯೋಜನೆಗಳಿಗೂ ಕೂಡಾ ಇದೇ ಮಾನದಂಡ ಅನ್ವಯವಾಗಬೇಕಾಗಿದೆಯೆಂದು ಅದು ತಿಳಿಸಿತ್ತು.

ಸಿಲ್ವರ್ ಲೈನ್ ಯೋಜನೆಗಾಗಿ ನಡೆಸಲಾಗುತ್ತಿರುವ ಸಮೀಕ್ಷೆಯ ಜೊತೆಗೆ ಕೇರಳ ಸರಕಾರ ಹಾಗೂ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗಾಗಿನ ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಲು ಸಂಸ್ಥೆಯು ಸಮೀಕ್ಷಾ ಸ್ಥಳದಲ್ಲಿ ಬೃಹತ್ ಗಾತ್ರದ ಕಾಂಕ್ರೀಟ್ ಕಂಬಗಳನ್ನು ಅಳವಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಆಲಿಕೆಯನ್ನು ಮಂಗಳವಾರ ನಡೆಸಿದ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ಕೆಲವು ರಾಜಕೀಯ ಪಕ್ಷಗಳು ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಬಗ್ಗೆಯೂ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಪ್ರಸ್ತಾವಿಸಿದ ಕೇರಳ ಹೈಕೋರ್ಟ್ ನ್ಯಾಯಾಧೀಶ ರಾಮಚಂದ್ರನ್ ಅವರು, ಇಲ್ಲಿನ ಯೋಜನೆಗಳನ್ನು ವಿರೋಧಿಸುವವರು, ಇತರ ಸ್ಥಳಗಳಲ್ಲಿನ ಯೋಜನೆಗಳನ್ನು ಕೂಡಾ ವಿರೋಧಿಸುತ್ತಾರೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶವು ಅಲ್ಲಿಗೂ ಅನ್ವಯವಾಗುತ್ತದೆ’’ ಎಂದು ಹೇಳಿದರು. ಸಮೀಕ್ಷೆ ನಡೆಯಲಿರುವ ಸ್ಥಳದಲ್ಲಿ ಕಾಂಕ್ರಿಟ್ ಕಂಬಗಳ ಅಳವಡಿಕೆ ಬಗ್ಗೆ ಪ್ರಸ್ತಾವಿಸಿದ ಹೈಕೋರ್ಟ್ ನ್ಯಾಯಾಧೀಶರು ಸಾಮಾನ್ಯ ಕಲ್ಲುಗಳ ಬದಲಿಗೆ ಬೃಹತ್ ಗಾತ್ರದ ಕಾಂಕ್ರೀಟ್ ಕಂಬಗಳನ್ನು ಯಾಕೆ ಅಳವಡಿಸುತ್ತಿದ್ದೀರಿ?. ಇಂತಹ ಕಲ್ಲುಗಳನ್ನು ಅಳವಡಿಸಿ ಜನರನ್ನು ಯಾಕೆ ಹೆದರಿಸಲು ಹೊರಟಿದ್ದೀರಿ ಎಂದು ಪ್ರಶ್ನಿಸಿತು.ಆದಾಗ್ಯೂ ತಾನು ಕೇಳಿದ ಪ್ರಶ್ನೆಗಳಿಗೆ ಎಪ್ರಿಲ್ 6ರಂದು ನಡೆಯಲಿರುವ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಉತ್ತರಿಸುವಂತೆ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News