466 ಎನ್ಜಿಓಗಳ ಲೈಸೆನ್ಸ್ ನವೀಕರಣ ಅರ್ಜಿ ತಿರಸ್ಕೃತ: ಕೇಂದ್ರ ಗೃಹಸಚಿವಾಲಯ ಮಾಹಿತಿ

Update: 2022-03-29 16:14 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.29: 2020ನೇ ಇಸವಿಯಿಂದೀಚೆಗೆ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್ಸಿಆರ್ಎ)ಯಡಿ 466 ಸರಕಾರೇತರ ಸಂಘಟನೆಗಳ ( ಎನ್ಜಿಓ) ಪರವಾನಗಿಗಳ ನವೀಕರಣದ ಅರ್ಜಿಗಳನ್ನು ತಾನು ತಿರಸ್ಕರಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಲೋಕಸಭೆಗೆ ತಿಳಿಸಿದೆ. ಅವುಗಳ ಪರವಾನಗಿಳ ನವೀಕರಣಕ್ಕೆ ಬೇಕಾದ ಮಾನದಂಡಗಳನ್ನು ಈಡೇರಿಸದಿರುವುದೇ ಇದಕ್ಕೆ ಕಾರಣವೆಂದು ಹೇಳಿದೆ. 2020ರಲ್ಲಿ 100, 2021ರಲ್ಲಿ 341 ಹಾಗೂ ಈ ವರ್ಷ 25 ಎನ್ಜಿಓಗಳ ನವೀಕರಣ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಎಫ್ಸಿಆರ್ಎ ಲೈಸೆನ್ಸ್ ನ ನವೀಕರಣಕ್ಕಾಗಿ ಖ್ಯಾತ ಸರಕಾರೇತರ ಸಂಸ್ಥೆಯಾದ ಓಕ್ಸ್ಫಾಮ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಡಿಸೆಂಬರ್ 2021ರಲ್ಲಿ ತಿರಸ್ಕರಿಸಲಾಗಿತ್ತು. ಇದಕ್ಕೆ ಬ್ರಿಟನ್ ಭಾರತಕ್ಕೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಈ ಮಧ್ಯೆ ಎಫ್ಸಿಆರ್ಓ ವ್ಯಾಪ್ತಿಯೊಳಗೆ ಬಂದಿದ್ದ 5789 ಸಂಸ್ಥೆಗಳ ಪರವಾನಗಿಯನ್ನು ಕೂಡಾ ರದ್ದುಪಡಿಸಿದೆ. ವಿದೇಶಿ ದೇಣಿಗೆಯನ್ನು ಪಡೆಯಲು ಯಾವುದೇ ಎನ್ಜಿಓ ಸಂಸ್ಥೆಯು ಎಫ್ಸಿಆರ್ಎ ಪರವಾನಗಿಯನ್ನು ಹೊಂದುವುದು ಕಡ್ಡಾಯವಾಗಿದೆ.


179 ಎನ್ಜಿಓ ಸಂಸ್ಥೆಗಳು ಕಾನೂನುಗಳನ್ನು ಉಲ್ಲಂಘಿಸಿರುವುದು ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಈ ಪೈಕಿ ಹಲವಾರು ಸಂಘಟನೆಗಳು ತಮ್ಮ ಲೈಸೆನ್ಸ್ಗಳ ನವೀಕರಣವ ಕೋರಿ ಅರ್ಜಿಯನ್ನು ಸಲ್ಲಿಸಿವೆಯಾದರೂ ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ಅರ್ಜಿಗಳ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ದಿನಾಂಕವನ್ನು ಕೇಂದ್ರ ಸರಕಾರವು ಜೂನ್ 29ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಕಳೆದ ವರ್ಷದ ಡಿಸೆಂಬರ್ 31ರವರೆಗೆ 6 ಸಾವಿರಕ್ಕೂ ಅಧಿಕ ಸಂಘಟನೆಗಳ ಪರವಾನಿಗಳ ನವೀಕರಣವನ್ನು ರದ್ದುಪಡಿಸಲಾಗಿದೆ. ಏನೇ ಇದ್ದರೂ ಅಂತಿಮವಾಗಿ ಜೂನ್ 30ರಂದು ತಿರಸ್ಕೃತಗೊಂಡ ಅರ್ಜಿಗಳ ಕುರಿತಾದ ಅಂತಿಮ ಸಂಖ್ಯೆ ದೊರೆಯಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗೃಹಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News