ಬೆಳೆಹಾನಿ ಪರಿಹಾರ ಆಗ್ರಹಿಸುತ್ತಿದ್ದ ರೈತರಿಂದ 12 ಅಧಿಕಾರಿಗಳ ಒತ್ತೆಸೆರೆ

Update: 2022-03-29 17:26 GMT
PHOTO PTI

ಚಂಡೀಗಢ,ಮಾ.29: ಬೆಳೆಹಾನಿಗಾಗಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸುತ್ತಿದ ರೈತರ ಗುಂಪೊಂದು 12 ಮಂದಿ ಸರಕಾರಿ ಅಧಿಕಾರಿಗಳನ್ನು ಹಲವು ತಾಸುಗಳ ಕಾಲ ಒತ್ತೆಸೆರೆ ಇರಿಸಿದ ಘಟನೆ ಮುಕ್ತಸರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

‌ಲಾಂಬಿ ಪಟ್ಟಣದಲ್ಲಿರುವ ಉಪತಹಶೀಲ್ ಕಚೇರಿಯ ಹೊರಗೆ ಸೋಮವಾರ 100ಕ್ಕೂ ಅಧಿಕ ರೈತರ ಗುಂಪೊಂದು ಹುಳುಬಾಧೆಯಿಂದಾಗಿ ತಮ್ಮ ಹತ್ತಿ ಬೆಳೆಗೆ ಹಾನಿಯಾಗಿರುವುದರಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿತ್ತು. ಸಂಜೆಯ ವೇಳೆಗೆ ಪ್ರತಿಭಟನಕಾರರ ಗುಂಪೊಂದು ಕಚೇರಿಯ ಕಟ್ಟಡದೊಳಗೆ ಪ್ರವೇಶಿಸಿ ಉಪತಹಶೀಲ್ದಾರ್, ಪಟ್ವಾರಿ ಸೇರಿದಂತೆ 12 ಮಂದಿ ಅಧಿಕಾರಿಗಳನ್ನು ಮಧ್ಯರಾತ್ರಿಯವರೆಗೆ ಒತ್ತೆಸೆರೆಯಲ್ಲಿರಿಸಿತ್ತು.

ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಪ್ರತಿಭಟನನಿರತ ರೈತರ ಮನವೊಲಿಸಲು ಯತ್ನಿಸಿದರು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆಗೆ ಅವಕಾಶ ಮಾಡಿಕೊಡುವ ಭರವಸೆಯನ್ನು ಕೂಡಾ ನೀಡಿದ್ದರು.
   
ಆದರೆ ತಮ್ಮ ಪಟ್ಟು ಸಡಿಲಿಸಿದ ಪ್ರತಿಭಟನಕಾರರು ತಡರಾತ್ರಿಯವರೆಗೂ ಅಧಿಕಾರಿಗಳನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದರು. ಕೊನೆಗೆ ಒತ್ತೆಸೆರೆಗೊಳಗಾದವರನನ್ನು ಸುರಕ್ಷಿತವಾಗಿ ಹೊರತರುವಂತೆ ಪೊಲೀಸರಿಗೆ ಆದೇಶ ನೀಡಲಾಯಿತು.
  
ಒತ್ತೆಸೆರೆಯಲ್ಲಿದ್ದ ಅಧಿಕಾರಿಗಳನ್ನು ಸಂಯಮದಿಂದ ಹಾಗೂ ಶಾಂತಿಯುತವಾಟ ವಿಧಾನಗಳಿಂದ ಪ್ರತಿಭಟನಕಾರರ ವಶದಿಂದ ಬಂಧಮುಕ್ತಗೊಳಿಸಲಾಯಿತು. ಆದರೆ ಈ ಸಂದರ್ಭದಲ್ಲಿ ಯಾವುದೇ ಬಲ ಪ್ರಯೋಗಿಸಲಾಗಿಲ್ಲವೆಂದು ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಕುಮಾರ್ ಮಲಿಕ್ ತಿಳಿಸಿದ್ದಾರೆ. ಅಧಿಕಾರಿಗಳು ಲಿಖಿತವಾಗಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಹಾಗೂ ಕೆಲವು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ.
 
ಆದರೆ ಒತ್ತೆಸೆರೆಯಲ್ಲಿದ್ದವರ ಬಂಧಮುಕ್ತಗೊಳಿಸಲು ಪೊಲೀಸರು ಬಲಪ್ರಯೋಗಿಸಿದ್ದು, ಇದರಿಂದಾಗಿ 6-7 ಮಂದಿ ಪ್ರತಿಭಟನಕಾರರು ಗಾಯಗೊಂಡಿದ್ದಾರೆಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News