ಆ್ಯಂಬ್ಯುಲೆನ್ಸ್ ಸಿಗದ ಕಾರಣ ಮೃತದೇಹವನ್ನು ಮಂಚದಲ್ಲಿ ಹೊತ್ತೊಯ್ದ ಮಹಿಳೆಯರು: ವೀಡಿಯೊ ವೈರಲ್

Update: 2022-03-30 08:27 GMT
‌Photo: Twitter

ಇಂದೋರ್:‌ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶವ ಕೊಂಡೊಯ್ಯಲು ಆಂಬ್ಯುಲೆನ್ಸ್‌ ಅಥವಾ ಇತರೆ ವಾಹನ ವ್ಯವಸ್ಥೆ ಇಲ್ಲದ ಕಾರಣ ನಾಲ್ವರು ಮಹಿಳೆಯರು ಮಂಚದ ಮೇಲೆ ಸಂಬಂಧಿಕರೊಬ್ಬರ ಶವವನ್ನು ಹೊತ್ತೊಯ್ಯುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೀಡಿಯೋದಲ್ಲಿ ನಾಲ್ವರು ಮಹಿಳೆಯರು ಹೆಗಲ ಮೇಲೆ ಮಂಚವನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಅನಾರೋಗ್ಯದಿಂಧ ಬಳಲುತ್ತಿದ್ದ ಸಂಬಂಧಿ ಜಿಲ್ಲೆಯ ರಾಯಪುರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಗ್ಯ ಕೇಂದ್ರದಿಂದ ಯಾವುದೇ ವಾಹನ ವ್ಯವಸ್ಥೆ ಮಾಡಿ ಕೊಡದ ಕಾರಣ ಮಹಿಳೆಯರು ಶವವನ್ನು ಮಂಚದೊಂದಿಗೆ ಹೊತ್ತೊಯ್ದಿದ್ದಾರೆ ಎಂದು ವರದಿ ಆಗಿದೆ.

ಶವವನ್ನು ಮನೆಗೆ ಕೊಂಡೊಯ್ಯಲು ಆರೋಗ್ಯ ಕೇಂದ್ರದಿಂದ ಶವ ವಾಹನವನ್ನು ನೀಡಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

"ನಾವು ಶವವನ್ನು ಮಂಚದ ಮೇಲೆ ಸಾಗಿಸಲು ನಿರ್ಧರಿಸಿದ್ದೇವೆ. ಆರೋಗ್ಯ ಕೇಂದ್ರ ಅಥವಾ ಆಡಳಿತವು ನಮಗೆ ಸಹಾಯ ಮಾಡಲಿಲ್ಲ" ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

 ಆದಾಗ್ಯೂ, ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಬಿ.ಎಲ್.ಮಿಶ್ರಾ, ಆರೋಗ್ಯ ಕೇಂದ್ರದ ಸಿಬ್ಬಂದಿ ಶವ ವಾಹನ ಅಥವಾ ಆಟೋಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಕುಟುಂಬವು ಶವವನ್ನು ಮಂಚದ ಮೇಲೆ ಸಾಗಿಸಲು ನಿರ್ಧರಿಸಿ ತರಾತುರಿಯಲ್ಲಿ ತೆರಳಿದರು ಎಂದು ಹೇಳಿದ್ದಾರೆ.

"ಇದು ದೊಡ್ಡ ವಿಷಯವಲ್ಲ, ಈ ಪ್ರದೇಶದಲ್ಲಿ ನಮ್ಮ ಬಳಿ ಶವ ವಾಹನವಿಲ್ಲ" ಎಂದು ಡಾ.ಮಿಶ್ರಾ ಹೇಳಿರುವುದಾಗಿ NDTV ವರದಿ ಮಾಡಿದೆ.

ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ, ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯಲು ವಾಹನಗಳ ಕೊರತೆಯಿಂದ ಈ ಹಿಂದೆಯೂ ತೊಂದರೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News