×
Ad

ಅರುಣಾಚಲ ಪ್ರದೇಶ: 'ಡ್ಯಾಂ ವಿರೋಧಿ ಹೇಳಿಕೆಯನ್ನು ಸರಕಾರಿ ಗೋಡೆಯಲ್ಲಿ ಬರೆದು' ಬಂಧನಕ್ಕೀಡಾದ ಹೋರಾಟಗಾರರಿಗೆ ಜಾಮೀನು

Update: 2022-03-30 14:24 IST
Photo: Facebook

ಇಟಾನಗರ್: ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದ ರಾಜ್ಯ ಸಿವಿಲ್ ಸೆಕ್ರಟೇರಿಯಟ್ ಕಟ್ಟಡದ ಆವರಣ ಗೋಡೆಯಲ್ಲಿ ರಾಜ್ಯದಲ್ಲಿನ ಜಲವಿದ್ಯುತ್ ಯೋಜನೆಗಳನ್ನು ವಿರೋಧಿಸಿ "ಇನ್ನು ಯಾವುದೇ ಡ್ಯಾಂಗಳು ಬೇಕಿಲ್ಲ" ಎಂದು  ಬರೆದಿದ್ದಕ್ಕೆ ಕಳೆದ ರವಿವಾರ ಬಂಧನಕ್ಕೀಡಾಗಿದ್ದ ಮಾನವ ಹಕ್ಕು ಹೋರಾಟಗಾರರಾಗಿರುವ ವಕೀಲ ಇ ಮಿಲ್ಲಿ ಹಾಗೂ  ಅಸ್ಸಾಂ ಮೂಲದ ಕಲಾವಿದ ನಿಲಿಮ್ ಮಹಂತಾ ಅವರಿಗೆ ಅರುಣಾಚಲ ಪ್ರದೇಶದ ನ್ಯಾಯಾಲಯವೊಂದು ಮಂಗಳವಾರ ಜಾಮೀನು ಮಂಜೂರುಗೊಳಿಸಿದೆ.

ದೊಡ್ಡ ಡ್ಯಾಂಗಳ ನಿರ್ಮಾಣದಿಂದ ಫಲವತ್ತಾದ ಜಮೀನುಗಳು ಮುಳುಗಡೆಯಾಗಲಿವೆ, ಪ್ರಾಕೃತಿಕ ಸಂಪತ್ತು ನಷ್ಟವಾಗಲಿದೆ ಹಾಗೂ ಸ್ಥಳೀಯರು ನಿರ್ವಸಿತರಾಗುತ್ತಾರೆ ಎಂಬ ಕಾರಣಕ್ಕೆ ಈ ಹೋರಾಟಗಾರರು ಅವುಗಳ ನಿರ್ಮಾಣಕ್ಕೆ ವಿರೋಧ ಸೂಚಿಸುತ್ತಾ ಬಂದಿದ್ದಾರೆ.

ಇಬ್ಬರ ವಿರುದ್ಧವೂ ಸಾರ್ವಜನಿಕ ಆಸ್ತಿ  ಹಾನಿ ತಡೆ ಕಾಯಿದೆ 1984 ಅನ್ವಯ ಪ್ರಕರಣ ದಾಖಲಾಗಿತ್ತು.

ಆದರೆ ಈ ಕಾಯಿದೆ ಮಹಂತ ಅವರಿಗೆ ಅನ್ವಯವಾಗುವುದಿಲ್ಲ ಏಕೆಂದರೆ ಎನ್‍ಜಿಒ ಒಂದು ಅವರನ್ನು ಈ ಕೆಲಸಕ್ಕೆ ನಿಯೋಜಿಸಿತ್ತು ಎಂದು ಮಂಗಳವಾರದ ವಿಚಾರಣೆ ವೇಳೆ ಅವರ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಸಾರ್ವಜನಿಕ ಅಭಿಯೋಜಕರೂ ಒಪ್ಪಿದ್ದರು.

ಆದರೆ ಅವರ ವಿರುದ್ಧ ಕಾಯಿದೆಯ ಸೆಕ್ಷನ್ 3 ಅನ್ವಯವಾಗುವುದೇ ಎಂಬುದನ್ನು ವಿಚಾರಣೆ ವೇಳೆ ಪರಿಗಣಿಸಬಹುದು ಆದರೆ ಇಬ್ಬರು ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವುದರಲ್ಲಿ ಶಾಮೀಲಾಗಿದ್ದಾರೆಂದು ಹೊರನೋಟಕ್ಕೆ ತಿಳಿದು ಬರುತ್ತದೆ ಎಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ತೆನ್ಝಿನ್ ಮೆಥೋ ಹೇಳಿದರು.

ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕು ಕೆಲವೊಂದು ಸಮಂಜಸ ನಿರ್ಬಂಧಗಳೊಂದಿಗೆ ಬರುತ್ತದೆ ಎಂದು ಹೇಳಿದ ನ್ಯಾಯಾಧೀಶರು ಇಬ್ಬರಿಗೂ ಜಾಮೀನು ಮಂಜೂರುಗೊಳಿಸಿದರಲ್ಲದೆ ಕೋರ್ಟ್ ಆದೇಶದ ಹತ್ತು ದಿನಗಳೊಳಗಾಗಿ ಅವರು ವಿರೂಪಗೊಳಿಸಿದ ಗೋಡೆಯನ್ನು ಹಿಂದಿನ ಸ್ಥಿತಿಗೆ ಮರಳಿಸಬೇಕೆಂದು ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News