ವೈರಲ್ ಆಗಿದೆ 'ಆಧಾರ್ ಕಾರ್ಡ್' ಮದುವೆ ಆಮಂತ್ರಣ ಪತ್ರಿಕೆ...!

Update: 2022-03-31 04:11 GMT

ದೇಶಾದ್ಯಂತ ಆಧಾರ್ ಕಾರ್ಡನ್ನ ಪ್ರತಿಯೊಬ್ಬರೂ ದಿನನಿತ್ಯ ಅನೇಕ ಸೌಲಭ್ಯಗಳಿಗಾಗಿ ಬಳಸುತ್ತಿದ್ದಾರೆ. ಅಲ್ಲದೆ ಆಧಾರ್ ಕಾರ್ಡ್ ಮೂಲಕ ತಮ್ಮ ತಮ್ಮ ಬ್ಯಾಂಕ್ ಕೆಲಸಗಳನ್ನ ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ.‌ ಇಂತಹ ಸಂದರ್ಭದಲ್ಲಿ ಇಲ್ಲೊಂದು ಮದುವೆ ಜೋಡಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ. ಇಷ್ಟು ದಿನ ಫೇಸ್ಬುಕ್-ವಾಟ್ಸ್ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಆಮಂತ್ರಣ ಪ್ರತಿಕೆ ಈಗ "ಆಧಾರ್" ಕಾರ್ಡ್ ರೂಪದಲ್ಲಿ ಕಂಡಿದ್ದು ವಿಶೇಷ.

ಆಧಾರ್ ನೋಂದಣಿ ಕುರಿತು ಜಾಗೃತಿ ಮೂಡಿಸಲು ಯುಡಿಐ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಬೆಳಗಾವಿಯ ಜೋಡಿ ತಮ್ಮ ಮದುವೆಯ ಮೂಲಕವು ಆಧಾರ್ ಕಾರ್ಡ್ ನೋಂದಣಿ ಮಾಡಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದು, ಇದಕ್ಕಾಗಿ ವಿಭಿನ್ನವಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ್ ಕಾರ್ಡ್ ನಂತೆ ವಿನ್ಯಾಸ ಮಾಡಿರುವುದು ವಿಶೇಷ.

ಎ.21ಕ್ಕೆ ಮದುವೆ

ಬಸಯ್ಯ - ಪವಿತ್ರಾ ಮತ್ತು  ಈಶ್ವರಯ್ಯ - ಕಾವೇರಿ ಜೋಡಿಯು ಎ.21ರಂದು ಹಸೆಮಣೆ ಎರಲಿದ್ದು, ತಮ್ಮ ವಿವಾಹ ಆಮಂತ್ರಣ ಪತ್ರಿಕೆ ಮೂಲಕ ಆಧಾರ್ ಕಾರ್ಡ್ ಮಾಡಿಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸುತ್ತಿರುವ ಪ್ರಯತ್ನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿ ಮದುವೆ ನಡೆಯಲಿದೆ, ಇದಕ್ಕೆ ವಿಭಿನ್ನವಾಗಿ ಆಹ್ವಾನ ನೀಡಿದ್ದಾರೆ.

ಆಹ್ವಾನ ಪತ್ರಿಕೆ ಹೀಗಿದೆ...

ಆಧಾರ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆಯಲ್ಲಿ ಭಾರತ ಸರ್ಕಾರದ ಹೆಸರಿನ ಬದಲಿಗೆ 'ಮದುವೆಯ ಮಮತೆಯ ಕರೆಯೋಲೆ' ಎಂಬ ಬರಹ ಹಾಕಿದ್ದಾರೆ. ಆಧಾರ್ ಕಾರ್ಡ್ ನಂಬರ್ ಜಾಗದಲ್ಲಿ ಮೊಬೈಲ್ ಹಾಕಿದ್ದು ವಿಶೇಷ.

ಆಧಾರ್ ನೋಂದಣಿದಾರರ ಹೆಸರು ಬರುವ ಸ್ಥಳದಲ್ಲಿ ದಂಪತಿಗಳ ಹೆಸರು ಎಂದು ಹಾಕಿ ಚಿ.ಬಸಯ್ಯ ಮತ್ತು ಚಿ.ಕು.ಸೌ.ಪವಿತ್ರಾ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲಿಗೆ ಮದುವೆ ದಿನಾಂಕ ಎಂದು ಹಾಕಿದ್ದಾರೆ. 21-04-2022, ಜೊತೆಗೆ ಧಾರೆ ಮೂಹುರ್ತವನ್ನು ಸಮಯ ಮಧ್ಯಾಹ್ನ 12.28 ಎಂದು ನಮೂದಿಸಿದ್ದಾರೆ.‌

ನಂತರದಲ್ಲಿ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ. ಮದುವೆಗೆ ಎಲ್ಲರಿಗೂ ಆಹ್ವಾನವನ್ನು ನೀಡಿದ್ದಾರೆ.

ಸಂದೇಶ: ಇದಲ್ಲದೇ ಆಧಾರ್ ನೋಂದಣಿ ಮಾಡಿಸಲು ಕರೆ ನೀಡಿದ್ದು, ಆಧಾರ್ ಕಾರ್ಡ್ ನಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ. ‌ʼಮದುವೆಗೆ ತಪ್ಪದೇ ಬನ್ನಿ, ತಪ್ಪದೆ ಆಧಾರ್ ನೋಂದಣಿ ಮಾಡಿಸಿ‌ʼ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News