ಭಾರತದ ನೀರು ನಿರ್ವಹಣಾ ಕಾರ್ಯಕ್ರಮಗಳು ನೀರಿನ ಭದ್ರತೆಯನ್ನು ಸೃಷ್ಟಿಸಿಲ್ಲ
ನೀರು ನಿರ್ವಹಣೆಯ ಪರಿಪೂರ್ಣ ಯೋಜನೆ ಮತ್ತು ಅನುಷ್ಠಾನದಲ್ಲಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿನ ನೀರು ಬಳಕೆದಾರ ಸಂಘಗಳು ಮುಂತಾದ ಸರಕಾರಿ ನೇಮಿತ ಉಪ ಸಮಿತಿಗಳು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ. ಆದರೆ, ಈ ಸಮಿತಿಗಳ ಸಾಮರ್ಥ್ಯವು ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೀರಿನ ಮೂಲಗಳನ್ನು ಪತ್ತೆಹಚ್ಚುವುದಕ್ಕಾಗಿ ಹಾಗೂ ನಿಯಮಿತವಾಗಿ ಸಭೆಗಳನ್ನು ನಡೆಸುವುದಕ್ಕಾಗಿಯೂ ಇತರ ಸಾಮಾಜಿಕ ಸೇವಾ ಸಂಸ್ಥೆಗಳ ನೆರವನ್ನು ಅವುಗಳು ಪಡೆಯಬೇಕಾಗುತ್ತವೆ.
ನೀರಿಗೆ ಸಂಬಂಧಿಸಿದ ಕೇಂದ್ರ ಸರಕಾರದ ಕಾರ್ಯಕ್ರಮಗಳು, ವಿಕೇಂದ್ರೀಕೃತ ಮಾದರಿಯಲ್ಲಿ ಅಂತರ್ಜಲ ನಿರ್ವಹಣೆಯನ್ನು ಸಮುದಾಯಗಳೇ ಮಾಡಬೇಕು ಎಂದು ಹೇಳುತ್ತವೆ. ಆದರೆ, ಒಟ್ಟಾರೆಯಾಗಿ, ಈ ಕೆಲಸಕ್ಕೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಕೌಶಲ ಹೊಂದಿದ ಕೆಲಸಗಾರರ ಲಭ್ಯತೆ, ತರಬೇತಿ ಮತ್ತು ನಿಯೋಜನೆ ಬಗ್ಗೆ ಈ ಕಾರ್ಯಕ್ರಮಗಳು ಏನೂ ಹೇಳುವುದಿಲ್ಲ.
ವಿಕೇಂದ್ರೀಕರಣದ ಕೊನೆಯ ಹಂತವಾಗಿರುವ ಸ್ಥಳೀಯ ಮಟ್ಟದಲ್ಲಿ ನೀರು ನಿರ್ವಹಣೆಯು ಸಾಮಾನ್ಯವಾಗಿ ಅರೆ ಕಾಲಿಕ, ಸ್ವಯಂಸೇವೆಯ ಅಥವಾ ವೇತನರಹಿತ ಚಟುವಟಿಕೆಯಾಗಿದೆ. ಇದರಿಂದ ನೀರಿನ ಭದ್ರತೆಯೂ ಏರ್ಪಡುವುದಿಲ್ಲ, ಅಮೂಲ್ಯ ನೀರಿನ ಸಂಪನ್ಮೂಲಗಳನ್ನು ನಿರ್ವಹಿಸಲು ಅಗತ್ಯವಾದ ಉದ್ಯೋಗ ಸೃಷ್ಟಿಯೂ ಆಗುವುದಿಲ್ಲ ಎಂಬುದಾಗಿ ‘ಜಸ್ಟ್ ಜಾಬ್ಸ್ ನೆಟ್‌ವರ್ಕ್’ ಎಂಬ ಜಾಗತಿಕ ಸಂಶೋಧನಾ ಸಂಸ್ಥೆಯು ಬೆಂಗಳೂರಿನ ಅರ್ಘ್ಯಮ್ ಎಂಬ ಸಂಘಟನೆಯೊಂದಿಗೆ ನಡೆಸಿದ ಸಂಶೋಧನೆಯೊಂದು ಹೇಳಿದೆ.
ಭಾರತದ ಶೇ. 80ಕ್ಕೂ ಅಧಿಕ ನಗರ ಮತ್ತು ಗ್ರಾಮೀಣ ಗೃಹ ಬಳಕೆ ಪೂರೈಕೆಯಾಗುತ್ತಿರುವ ನೀರನ್ನು ಅಂತರ್ಜಲದಿಂದ ಪಡೆಯ ಲಾಗುತ್ತದೆ. ಜಾಗತಿಕ ಜನಸಂಖ್ಯೆಯ ಶೇ. 18 ಭಾರತದಲ್ಲಿದೆ. ಆದರೆ, ದೇಶದಲ್ಲಿರುವ ನವೀಕರಿಸಬಹುದಾದ ಜಲ ಮೂಲಗಳು ಒಟ್ಟು ಜಗತ್ತಿನ ಶೇ. 4 ಮಾತ್ರ. ದೇಶದ 700 ಜಿಲ್ಲೆಗಳ ಪೈಕಿ 250ಕ್ಕೂ ಅಧಿಕ ಜಿಲ್ಲೆಗಳ ಅಂತರ್ಜಲವು ‘ಅಪಾಯಕಾರಿ’ ಮಟ್ಟದಲ್ಲಿದೆ ಅಥವಾ ಅಧಿಕ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಕೇಂದ್ರೀಯ ಅಂತರ್ಜಲ ನೀರು ಮಂಡಳಿಯ 2017ರ ಅಂಕಿಅಂಶಗಳು ಹೇಳುತ್ತವೆ.
ನೀರು ನಿರ್ವಹಣಾ
ಕಾರ್ಯಕ್ರಮಗಳು
ಭಾರತದಲ್ಲಿ ನೀರು ಪೂರೈಕೆ ಮತ್ತು ನಿರ್ವಹಣೆಗಾಗಿ ಹಲವಾರು ಕಾರ್ಯ ಕ್ರಮಗಳಿವೆ. ಗ್ರಾಮಗಳನ್ನು ನೀರು ಸ್ವಾವಲಂಬಿಯನ್ನಾಗಿಸುವುದು ಈ ಕಾರ್ಯಕ್ರಮಗಳ ಗುರಿಯಾಗಿದೆ. ಹಳ್ಳಿಗಳಿಗೆ ಉತ್ತಮ ಗುಣಮಟ್ಟದ ನಳ್ಳಿನೀರನ್ನು ಪೂರೈಸುವ ಜಲಜೀವನ ಮಿಶನ್, ಅಂತರ್ಜಲ ನಿರ್ವಹಣೆಗಾಗಿ ಅಟಲ್ ಭೂಜಲ ಯೋಜನೆ ಹಾಗೂ ನೀರು ಪೂರೈಕೆ ಮತ್ತು ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ ಮಿಶನ್- ಆ ಪೈಕಿ ಕೆಲವು ಕಾರ್ಯಕ್ರಮಗಳು.
ಈ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವ ವರು ಸ್ಥಳೀಯ ಸಮುದಾಯಗಳಿಂದಲೇ ಬಂದವರಾಗಿರಬೇಕು; ಅವರಿಗೆ ಅಂತರ್ಜಲ ಮತ್ತು ಮೇಲ್ಪದರದ ನೀರಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ ತಿಳಿದಿರಬೇಕು; ಹಾಗೂ ನೀರಿನ ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ, ನೀರಿನ ಲಭ್ಯತೆಯನ್ನು ಆಧರಿಸಿ ಯೋಜನೆಗಳನ್ನು ರೂಪಿಸುವ, ಅಗತ್ಯ ರಚನೆಗಳನ್ನು ನಿರ್ಮಿಸುವ, ನಡೆಸುವ ಮತ್ತು ನಿರ್ವಹಣೆ ಮಾಡುವ ಕೌಶಲ ತಿಳಿದಿರಬೇಕು.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿ-ಅಂಶಗಳ ಪ್ರಕಾರ, ಗ್ರಾಮೀಣ ನಿರುದ್ಯೋಗ ದರವು ಫೆಬ್ರವರಿಯ ವೇಳೆಗೆ ಶೇ. 8.35 ಆಗಿತ್ತು. ಜಲ ಸಂಪನ್ಮೂಲ ಸೀಮಿತ ಸಂಪನ್ಮೂಲವಾಗಿದ್ದು, ಅದರ ನಿರ್ವಹಣೆಯ ಕೌಶಲಗಳನ್ನು ಸ್ಥಳೀಯ ಕೆಲಸಗಾರರಿಗೆ ಕಲಿಸಿಕೊಡುವ ಮತ್ತು ಹೊಸ ಕೌಶಲಗಳನ್ನು ಕಲಿತುಕೊಳ್ಳುವ ಅಗತ್ಯವಿದೆ. ಇದು ಎರಡು ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಭಾರತಕ್ಕೆ ನೆರವಾಗಬಹುದಾಗಿದೆ. ಅವುಗಳೆಂದರೆ: ಒಂದನೆಯದಾಗಿ, ವಿಶೇಷವಾಗಿ ಬಿಸಿ ವಾತಾವರಣದ ಸಮಯದಲ್ಲಿ ನೀರಿನ ಮೂಲಗಳು ಬತ್ತುತ್ತಿರುವಾಗ ನೀರಿನ ಅಭದ್ರತೆಯನ್ನು ನಿಭಾಯಿಸುವುದು; ಎರಡನೆಯದಾಗಿ, ದೇಶದ ಅಗಾಧ ಕಾರ್ಮಿಕ ಶಕ್ತಿ ಎದುರಿಸುತ್ತಿರುವ ಲಾಭದಾಯಕ ಉದ್ಯೋಗದ ಕೊರತೆಯನ್ನು ನಿಭಾಯಿಸುವುದು.
ಗ್ರಾಮೀಣ ಸಾರ್ವಜನಿಕ ನೀರಿನ ಮೂಲಗಳು, ಉದ್ಯೋಗಗಳು ಮತ್ತು ಕೌಶಲಗಳ ವ್ಯಾಪ್ತಿಯ ಬಗ್ಗೆ ಜಸ್ಟ್ ಜಾಬ್ಸ್ ಸಂಸ್ಥೆಯ ಜಲ ಕೌಶಲ ಯೋಜನೆಯು ಅರ್ಘ್ಯಮ್ ನೆರವಿನೊಂದಿಗೆ ಗ್ರಾಮ, ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ಸಮೀಕ್ಷೆ ನಡೆಸಿದೆ. ಕೌಶಲಗಳ ಕೊರತೆಯ ಬಗ್ಗೆ ಅಧ್ಯಯನ ಮಾಡುವ ಅಥವಾ ನೀರಿನ ನಿರ್ವಹಣೆಗಾಗಿ ಉದ್ಯೋಗಗಳನ್ನು ಸೃಷ್ಟಿಸುವ ಅಥವಾ ಸ್ವಯಂಸೇವಕರಿಗೆ ತರಬೇತಿ ನೀಡಿ ಅವರನ್ನು ಮುಂಚೂಣಿಯ ಕೆಲಸಗಾರರನ್ನಾಗಿ ನೇಮಿಸುವ ಹೊಣೆಯನ್ನು ಯಾವುದೇ ಸರಕಾರಿ ಸಂಸ್ಥೆಗೆ ವಹಿಸಲಾಗಿಲ್ಲ. ಜಲ ಕೌಶಲ ಯೋಜನೆಯು ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವುದರ ಜೊತೆಗೆ, ಖಾಯಂ ಉದ್ಯೋಗ ಮತ್ತು ಕೌಶಲಗಳ ಮೂಲಕ ನೀರಿನ ಭದ್ರತೆಗಾಗಿ ನೀಲನಕಾಶೆಯೊಂದನ್ನು ರಚಿಸುವ ಆಶಯವನ್ನೂ ಹೊಂದಿದೆ.
ಭಾರತವು ಜಗತ್ತಿನ ಅತಿ ದೊಡ್ಡ ಅಂತರ್ಜಲ ಬಳಕೆ ಮಾಡುವ ದೇಶವಾಗಿದೆ. ಅದು ಜಾಗತಿಕ ಅಂತರ್ಜಲದ ಶೇ. 25ರಷ್ಟನ್ನು ತೆಗೆಯುತ್ತದೆ. ಭಾರತದ ನಿರಂತರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ನೀರಿನ ಭದ್ರತೆ ಅಗತ್ಯವಾಗಿದೆ. ಭಾರತದ ನೀರಾವರಿ ಕೃಷಿಯ ಸುಮಾರು ಶೇ. 62 ಅಂತರ್ಜಲವನ್ನು ಅವಲಂಬಿಸಿದೆ. ಅದೇ ವೇಳೆ, ಗ್ರಾಮೀಣ ಭಾರತದ ಕುಡಿಯುವ ನೀರಿನ ಶೇ. 85ರಷ್ಟನ್ನು ಅಂತರ್ಜಲದಿಂದಲೇ ಪೂರೈಸಲಾಗುತ್ತದೆ. ಬದುಕು ಮತ್ತು ಜೀವನೋಪಾಯ ಚಟುವಟಿಕೆಗಳಿಗಳಿಗೆ ಅಗತ್ಯವಾಗಿರುವ ಅಂತರ್ಜಲವು ಸಾರ್ವಜನಿಕ ಸಂಪನ್ಮೂಲವಾಗಿದೆ ಹಾಗೂ ಅದನ್ನು ಗರಿಷ್ಠ ಪ್ರಮಾಣದಲ್ಲಿ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಬೇಕಾಗಿದೆ.
ಕುಶಲ ಕೆಲಸಗಾರರು
ಭಾರತೀಯ ಗ್ರಾಮೀಣರು ನದಿಗಳು, ಕೆರೆಗಳು ಮತ್ತು ಸರೋವರಗಳು ಮುಂತಾದ ಮೇಲ್ಪದರದ ಜಲ ಮೂಲಗಳು ಹಾಗೂ ಬಾವಿಗಳು, ಕೊಳವೆ ಬಾವಿಗಳು, ಕೊಳವೆ ಬಾವಿಗಳಿಗೆ ಜೋಡಣೆಯಾದ ನಳ್ಳಿಗಳು ಮತ್ತು ಕೈಪಂಪ್ ಮುಂತಾದ ಅಂತರ್ಜಲ ಮೂಲಗಳನ್ನು ಬಳಸುತ್ತಿದ್ದಾರೆ. ನೀರಿಗೆ ಸಂಬಂಧಿಸಿ ಹಲವು ಸಂಸ್ಥೆಗಳು ಮತ್ತು ಸರಕಾರಿ ಕಾರ್ಯಕ್ರಮಗಳಿವೆ. ಆದರೆ, ಈ ಕಾರ್ಯಕ್ರಮಗಳು ಪರಸ್ಪರ ಸಂಪರ್ಕ ಹೊಂದಿರುವುದಿಲ್ಲ. ಅದೂ ಅಲ್ಲದೆ, ಇಂತಹ ಹೆಚ್ಚಿನ ಕಾರ್ಯಕ್ರಮಗಳಿಗೆ, ಯೋಜನೆಗಳ ದಕ್ಷ ಹಾಗೂ ಪರಿಣಾಮಕಾರಿ ಜಾರಿಗಾಗಿ ಕುಶಲ ಕೆಲಸಗಾರರ ಅಗತ್ಯವಿದೆ. ಆದರೆ, ಇಂತಹ ಕುಶಲ ಕೆಲಸಗಾರರ ಲಭ್ಯತೆಯನ್ನು ಹೇಗೆ ಖಾತರಿಪಡಿಸುವುದು ಎಂಬ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳು ವೌನವಾಗಿವೆ.
ಈ ವಿಷಯದಲ್ಲಿ, ನಾವು ಮಾರ್ಚ್ 17ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಲಭಿಸುತ್ತಿಲ್ಲ.
ನೀರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ದೇಶದಲ್ಲಿ 5 ಲಕ್ಷದಿಂದ 10 ಲಕ್ಷ ಕುಶಲ ಕೆಲಸಗಾರರು ಇರುವ ಸಾಧ್ಯತೆಯಿದೆಯಾದರೂ (ಪ್ರತಿ ಗ್ರಾಮದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ತರಬೇತಿ ನೀಡಲಾಗಿದೆ ಎಂಬುದಾಗಿ ಭಾವಿಸಿ), ಈ ಕೆಲಸಗಾರರು ಹೆಚ್ಚಾಗಿ ಕಾಣುತ್ತಿಲ್ಲ ಹಾಗೂ ನಿರ್ದಿಷ್ಟ ಕಾರ್ಯಕ್ರಮದ ಮುಕ್ತಾಯದ ಬಳಿಕ ಅವರಿಗೆ ಉದ್ಯೋಗ ಭದ್ರತೆಯಿಲ್ಲ.
ಅದೂ ಅಲ್ಲದೆ, ಗ್ರಾಮ, ಗ್ರಾಮ ಪಂಚಾಯತ್ ಅಥವಾ ಜಿಲ್ಲಾ ಮಟ್ಟದಲ್ಲಿ ಈ ಕುಶಲ ಕೆಲಸಗಾರರಿಗೆ ಸಂಬಂಧಿಸಿದ ಅಂಕಿ-ಅಂಶವಿಲ್ಲ. ಸಮರ್ಪಕ ನೀರಿನ ನಿರ್ವಹಣೆಗಾಗಿ ಯಾವ ಕೌಶಲಗಳ ಅಗತ್ಯವಿದೆ ಎಂಬ ಮಾಹಿತಿಯೂ ಇಲ್ಲ. ಪ್ರತಿ ಬಾರಿ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸಿದಾಗ, ಹೊಸ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಇದು ಶ್ರಮ ಮತ್ತು ಪ್ರಯತ್ನಗಳನ್ನು ಪುನರಾವರ್ತಿಸಿದಂತೆ. ಗ್ರಾಮೀಣ ನೀರು ನಿರ್ವಹಣೆಯಲ್ಲಿ ತೊಡಗಿರುವ ಇಂತಹ ಜನರ ದಕ್ಷತೆ, ವಿಶ್ವಾಸಾರ್ಹತೆ ಹಾಗೂ ಬೇಡಿಕೆ ಮತ್ತು ಪೂರೈಕೆ ಅಂತರವನ್ನು ತಿಳಿದುಕೊಳ್ಳಲು ಅಗತ್ಯವಾದ ಸಾಕಷ್ಟು ಪ್ರಮಾಣದ ಅಂಕಿ-ಅಂಶಗಳೂ ಇಲ್ಲ.
ಫಲದಾಯಕ ಕೆಲಸಗಳ ಖಾತ್ರಿ
ಈ ಸರಕಾರಿ ಯೋಜನೆಗಳು ಮತ್ತು ನಾಗರಿಕ ಸಮಾಜದ ಉಪಕ್ರಮಗಳ ಮೂಲಕ ಅಲ್ಪಸ್ವಲ್ಪ ತರಬೇತಾದ ಕೆಲಸಗಾರರು ಲಭಿಸುತ್ತಾರೆ. ಅವರನ್ನು ನಿರ್ದಿಷ್ಟ ಗ್ರಾಮದ ನೀರು ನಿರ್ವಹಣೆ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಸೇರಿಸಿಕೊಳ್ಳಲಾಗುತ್ತದೆ. ಬಾವಿಗಳನ್ನು ತೋಡುವವರು, ಪೈಪ್‌ಲೈನ್‌ಗಳನ್ನು ಹಾಕುವವರು ಮತ್ತು ನಿರ್ವಹಣೆ ಮಾಡುವವರು, ಪಂಪ್ ಚಾಲನೆ ಮಾಡುವವರು, ಭೂಜಲದ ಬಗ್ಗೆ ಮಾಹಿತಿ ನೀಡುವವರು (ನೀರಿನ ಅರೆ ಪಂಡಿತರು), ಕೆರೆಗಳ ಹೂಳೆತ್ತುವ ಜವಾಬ್ದಾರಿ ನಿರ್ವಹಿಸುವ ಜಲ ಸಹೇಲಿಗಳು, ಧಾರಾ ಸೇವಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಈ ತರಬೇತಿ ಪಡೆದ ಸ್ವಯಂಸೇವಕರಲ್ಲಿ ಇರುತ್ತಾರೆ.
ಆದರೆ, ಪ್ರಮುಖ ಕಾರ್ಯಕ್ರಮಗಳಲ್ಲಿಯೂ ಈ ಕುಶಲ ಕೆಲಸಗಾರರ ಕೆಲಸಗಳನ್ನು ‘‘ಪಾತ್ರಗಳು ಮತ್ತು ಜವಾಬ್ದಾರಿಗಳು’’ ಎಂಬುದಾಗಿ ನಿರೂಪಿಸಲಾಗುವುದಿಲ್ಲ ಹಾಗೂ ಸ್ಪಷ್ಟ ನಿಯೋಜನೆ, ಕೌಶಲ ತರಬೇತಿ ಮತ್ತು ಸಂಭಾವನೆಯ ಪ್ರಸ್ತಾವವಿಲ್ಲ. ಜಲ ಜೀವನ ಮಿಶನ್ ಮತ್ತು ಅಟಲ್ ಭೂಜಲ ಯೋಜನೆಯ ಮಾರ್ಗದರ್ಶಿ ಸೂಚನೆಗಳ ವಿಶ್ಲೇಷಣೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇದರ ಫಲಿತಾಂಶವಾಗಿ, ನಾಗರಿಕ ಸಮಾಜದ ಗುಂಪುಗಳು ಇಂತಹ ಕುಶಲ ಕೆಲಸಗಾರರನ್ನು ಪತ್ತೆಹಚ್ಚಿ ಅವರಿಗೆ ತರಬೇತಿ ನೀಡಿದರೂ, ಅವರು ಯಾವುದೇ ಆದಾಯ ಅಥವಾ ಉದ್ಯೋಗದಲ್ಲಿ ಮುನ್ನಡೆಯಿಲ್ಲದೆ ಜಲ ನಿರ್ವಹಣೆಯ ತಮ್ಮ ಹವ್ಯಾಸವನ್ನು ನಡೆಸಬೇಕಾಗಿದೆ.
ಈ ಕುಶಲ ಕೆಲಸಗಾರರನ್ನು ಮಹಾರಾಷ್ಟ್ರದಲ್ಲಿ ‘ಜಲ ಸುರಕ್ಷಕರು’ ಮುಂತಾದ ಪೂರ್ಣಾವಧಿ ಉದ್ಯೋಗಗಳ ಮೂಲಕ ಮುಖ್ಯವಾಹಿನಿಗೆ ತರಲು ಕೆಲವು ಪ್ರಯತ್ನಗಳು ನಡೆದಿವೆ. ಅಂತರ್ಜಲ ಪರಿಸ್ಥಿತಿಯ ಮೇಲೆ ನಿಗಾ ಇಡಲು, ನೀರಿನ ಮಟ್ಟವನ್ನು ಅಳೆಯುವ ಉಪಕರಣಗಳನ್ನು ನಿಭಾಯಿಸಲು, ಬಾವಿಗಳನ್ನು ಗುರುತಿಸಲು ಮತ್ತು ಮಾಹಿತಿಯನ್ನು ಡಿಜಿಟಲ್ ವಿಧಾನದ ಮೂಲಕ ಅಂತರ್ಜಲ ಸಮೀಕ್ಷೆ ಮತ್ತು ಅಭಿವೃದ್ಧಿ ಸಂಸ್ಥೆಗೆ ರವಾನಿಸಲು ಅವರಿಗೆ ತರಬೇತಿ ನೀಡಲಾಗಿದೆ ಹಾಗೂ ಅದಕ್ಕಾಗಿ ಪ್ರಮಾಣಪತ್ರವನ್ನೂ ವಿತರಿಸಲಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಯೋಜನೆಗಳಂತಹ ಜೀವನೋಪಾಯ ಗಳಿಸಲು ಅವಕಾಶ ನೀಡುವ ಯೋಜನೆಗಳ ಮೂಲಕ ಗ್ರಾಮ ಮಟ್ಟದಲ್ಲಿ ಈ ಕುಶಲ ಕೆಲಸಗಾರರನ್ನು ನಿಯೋಜಿಸಲಾಗಿದೆ. ಅವರಿಗೆ ಗುತ್ತಿಗೆ ಆಧಾರದಲ್ಲಿ ನೀರಿನ ಕಾಮಗಾರಿಗಳಿಗೆ ಸಂಬಂಧಿಸಿದ ನಿರ್ಮಾಣಗಳನ್ನು ಮಾಡುವುದು, ನಡೆಸಿಕೊಂಡು ಹೋಗುವುದು ಮತ್ತು ನಿರ್ವಹಣೆಯ ಹೊಣೆಯನ್ನು ನೀಡಲಾಗಿದೆ. ‘ಸ್ವಚ್ಛಗ್ರಾಹಿಗಳು’ ಮತ್ತು ಪ್ರಮಾಣೀಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾ) ಅರೆಕಾಲಿಕ ಅಥವಾ ಭತ್ತೆ ಆಧಾರದಲ್ಲಿ ತಮ್ಮ ಇತರ ಕೆಲಸಗಳ ಜೊತೆಗೆ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಕೆಲಸದಲ್ಲಿಯೂ ತೊಡಗಿದ್ದಾರೆ.
ಕೆಲವು ರಾಜ್ಯಗಳಲ್ಲಿ ನೀರು ನಿರ್ವಾಹಕರ ಸಾಂಪ್ರದಾಯಿಕ ಕೆಲಸಗಳನ್ನು ಅಧಿಕೃತಗೊಳಿಸಲಾಗಿದೆ. ಅವುಗಳೆಂದರೆ: ಗರ್ವಾಲ್‌ನ ಕೊಲ್ಲಾಲುಗಳು, ಉತ್ತರಾಂಚಲದ ಕುಮಾಂವ್ ಬೆಟ್ಟದ ಚೌಕಿದಾರ್‌ಗಳು ಮತ್ತು ಮಹಾರಾಷ್ಟ್ರದ ಹವಾಲ್ದಾರ್, ಜಗ್ಲಿಯಾಗಳು ಅಥವಾ ಪಟ್ಕಾರಿಗಳು. ಈ ಕೆಲಸಗಳಿಗೆ ಸಂಬಂಧಿಸಿ ಕೆಲಸಗಾರರ ಪಾತ್ರಗಳು, ಜವಾಬ್ದಾರಿಗಳು ಮತ್ತು ಸಂಭಾವನೆಗಳನ್ನು ನಿಗದಿಪಡಿಸಲಾಗಿದೆ. ಆದರೆ, ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿರುವ ಹೊರತಾಗಿಯೂ, ಹೆಚ್ಚಿನ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಸ್ವಯಂಸೇವೆ ಅಥವಾ ಶ್ರಮದಾನ ಆಧಾರದಲ್ಲಿ ತಮ್ಮ ಸೇವೆಗಳನ್ನು ಮುಂದುವರಿಸಿದ್ದಾರೆ.
ನೀರು ನಿರ್ವಹಣೆಯ ಪರಿಪೂರ್ಣ ಯೋಜನೆ ಮತ್ತು ಅನುಷ್ಠಾನದಲ್ಲಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿನ ನೀರು ಬಳಕೆದಾರ ಸಂಘಗಳು ಮುಂತಾದ ಸರಕಾರಿ ನೇಮಿತ ಉಪ ಸಮಿತಿಗಳು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ. ಆದರೆ, ಈ ಸಮಿತಿಗಳ ಸಾಮರ್ಥ್ಯವು ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನೀರಿನ ಮೂಲಗಳನ್ನು ಪತ್ತೆಹಚ್ಚುವುದಕ್ಕಾಗಿ ಹಾಗೂ ನಿಯಮಿತವಾಗಿ ಸಭೆಗಳನ್ನು ನಡೆಸುವುದಕ್ಕಾಗಿಯೂ ಇತರ ಸಾಮಾಜಿಕ ಸೇವಾ ಸಂಸ್ಥೆಗಳ ನೆರವನ್ನು ಅವುಗಳು ಪಡೆಯಬೇಕಾಗುತ್ತವೆ.
ಕೃಪೆ:IndiaSpend.com