×
Ad

ಪೊಲೀಸ್ ಗೋಲಿಬಾರ್ ಪ್ರಕರಣಗಳ ಕುರಿತ ಉತ್ತರ ನೀಡುವಾಗ ಪಂಚಕುಲಾದ ʼ32 ಜನರ ಹತ್ಯೆಯನ್ನುʼ ಕೈಬಿಟ್ಟ ಗೃಹ ಇಲಾಖೆ

Update: 2022-03-31 19:19 IST

ಹೊಸದಿಲ್ಲಿ,ಮಾ.31: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ)ವು ಕೈಗೆತ್ತಿಕೊಂಡಿರುವ ಪೊಲೀಸ್ ಗೋಲಿಬಾರ್ ದೂರುಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕೇಂದ್ರ ಗೃಹ ಸಚಿವಾಲಯವು ಮಾ.29ರಂದು ಲೋಕಸಭೆಯಲ್ಲಿ ಒದಗಿಸಿದೆ. ಅಚ್ಚರಿಯ ವಿಷಯವೆಂದರೆ ಇವುಗಳಲ್ಲಿ ಹರ್ಯಾಣದ ಪಂಚಕುಲಾದಲ್ಲಿ ಪೊಲೀಸ್ ಗೋಲಿಬಾರ್ ನಲ್ಲಿ ಕೊಲ್ಲಲ್ಪಟ್ಟಿದ್ದ 32 ಜನರ ಉಲ್ಲೇಖವೇ ಇಲ್ಲ.

2017,ಆ.25ರಂದು ಪಂಚಕುಲಾದಲ್ಲಿ ಪೊಲೀಸ್ ಗೋಲಿಬಾರ್ ನಲ್ಲಿ ಕನಿಷ್ಠ 32 ಜನರು ಕೊಲ್ಲಲ್ಪಟ್ಟಿದ್ದ ರೀತಿಯು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತ್ತು. ಅಂದು ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ ರಹೀಂ ಸಿಂಗ್ ನನ್ನು ದೋಷಿಯೆಂದು ಘೋಷಿಸಿತ್ತು. ನ್ಯಾಯಾಲಯದ ಹೊರಗೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಗುರ್ಮೀತ್ ಅನುಯಾಯಿಗಳು ಹಿಂಸಾಚಾರಕ್ಕಿಳಿದಾಗ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿಗಳು ಜನರ ಮೇಲೆ ಯದ್ವಾತದ್ವಾ ಗುಂಡುಗಳನ್ನು ಹಾರಿಸಿದ್ದರು. 

ಹೆಚ್ಚಿನ ಗುಂಡೇಟಿನ ಗಾಯಗಳು ತಲೆ ಮತ್ತು ಬೆನ್ನುಗಳಲ್ಲಿ ಉಂಟಾಗಿದ್ದವು,ಅಂದರೆ ನಿಯಮವನ್ನು ಗಾಳಿಗೆ ತೂರಿ ಗುಂಡುಗಳನ್ನು ಸೊಂಟದ ಮೇಲೆ ಹಾರಿಸಲಾಗಿತ್ತು. ಭದ್ರತಾ ಪಡೆಗಳು ಜನರನ್ನು ಕೊಲ್ಲಲು ಉದ್ದೇಶಿಸಿದ್ದವು,ಚದುರಿಸಲು ಅಲ್ಲ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸಿತ್ತು. ಸ್ಥಳದಿಂದ ಪರಾರಿಯಾಗುತ್ತಿದ್ದ ಮತ್ತು ಯಾವುದೇ ಬೆದರಿಕೆಯೊಡ್ಡಿರದವರನ್ನೇ ಗುರಿಯಾಗಿಸಿಕೊಂಡು ಪೊಲೀಸರು ಗುಂಡು ಹಾರಿಸಿದ್ದರು!

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕನಿಷ್ಠ 32 ಜನರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಡಿ,ಘಟನೆಯ ಬಗ್ಗೆ ಸೂಕ್ತ ತನಿಖೆಯೇ ನಡೆದಿಲ್ಲ. ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿದ್ದ ಎನ್ಎಚ್ಆರ್ಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಹರ್ಯಾಣದ ಡಿಜಿಪಿ ಮತ್ತು ಪಂಚಕುಲಾದ ಪೊಲೀಸ್ ಆಯುಕ್ತರಿಗೆ 2017,ಸೆ.6ರಂದು ನಿರ್ದೇಶ ನೀಡಿತ್ತು.

ಪ್ರಕರಣವು ಪಂಜಾಬ್ ಮತ್ತು ಹರ್ಯಾಣ ಮುಖ್ಯ ನ್ಯಾಯಾಲಯದಲ್ಲಿ ಇರುವುದರಿಂದ ಇನ್ನಷ್ಟು ಹಸ್ತಕ್ಷೇಪ ಅಗತ್ಯವಿಲ್ಲ ಎಂಬ ಅಭಿಪ್ರಾಯದೊಂದಿಗೆ ಎನ್ಎಚ್ಆರ್ಸಿ 2021ರಲ್ಲಿ ಪ್ರಕರಣವನ್ನು ಮುಚ್ಚಿತ್ತು. ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಅದು ಸರಕಾರಕ್ಕೆ ಯಾವುದೇ ನಿರ್ದೇಶ ನೀಡಿರಲಿಲ್ಲ.

ಮಂಗಳವಾರ ಬಿಜೆಡಿ ಸದಸ್ಯ ಪಿನಾಕಿ ಮಿಶ್ರಾ ಮತ್ತು ವಿಸಿಕೆ ಸದಸ್ಯ ರವಿಕುಮಾರ ಡಿ. ಅವರ ಪ್ರಶ್ನೆಗೆ ಗೃಹಸಚಿವಾಲಯವು ಉತ್ತರವನ್ನು ನೀಡಿತ್ತು.

2011ರಿಂದ ಪೊಲೀಸ್ ಗೋಲಿಬಾರ್/ಎನ್ಕೌಂಟರ್ಗಳಲ್ಲಿ ಸಾವುಗಳು ಅಥವಾ ಗಾಯಗಳ ಬಗ್ಗೆ ಎನ್ಎಚ್ಆರ್ಸಿ ದೂರುಗಳನ್ನು ಸ್ವೀಕರಿಸಿರುವ ಪ್ರಕರಣಗಳ ಸಂಖ್ಯೆ,2011ರಿಂದ ಎನ್ಎಚ್ಆರ್ಸಿ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಇಂತಹ ಪ್ರಕರಣಗಳ ಸಂಖ್ಯೆ,ಎನ್ಎಚ್ಆರ್ಸಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಇತರ ವಿವರಗಳನ್ನು ಈ ಸಂಸದರು ಕೋರಿದ್ದರು. ತನ್ನ ಉತ್ತರದಲ್ಲಿ ಗೃಹಸಚಿವಾಲಯವು ಮೂರು ಅನುಸೂಚಿಗಳೊಂದಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವರ್ಷವಾರು ದತ್ತಾಂಶಗಳನ್ನು ಒದಗಿಸಿದೆ.

ಒಂದು ಅನುಸೂಚಿಯಲ್ಲಿ 2011,ಎ.1 ಮತ್ತು 2022,ಫೆ.28ರ ನಡುವೆ ಪೊಲೀಸ್ ಗೋಲಿಬಾರ್ನಲ್ಲಿಯ ಸಾವುಗಳನ್ನು ತೋರಿಸಲಾಗಿದೆ. ಇದರಲ್ಲಿ ಹರ್ಯಾಣದ ಕಾಲಮ್ ನೆದುರು 2017-18ರ ವಿತ್ತವರ್ಷದಲ್ಲಿ ಕೇವಲ ಎರಡು ಸಾವುಗಳನ್ನು ಮತ್ತು ಪೊಲೀಸ್ ಎನ್ಕೌಂಟರ್ನಲ್ಲಿ ಕೇವಲ ನಾಲ್ಕು ಸಾವುಗಳನ್ನು ತೋರಿಸಲಾಗಿದೆ. 2017-18ರಲ್ಲಿ ಎನ್ಎಚ್ಆರ್ಸಿ ಪೊಲೀಸ್ ಗೋಲಿಬಾರಿನಿಂದ ಸಾವುಗಳ ಯಾವುದೇ ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಇನ್ನೊಂದು ಹೇಳಿಕೆ ತೋರಿಸಿದೆ. ಈ ಮೂರೂ ಅನುಸೂಚಿಗಳಲ್ಲಿ 2017,ಆ.25ರಂದು ಪಂಚಕುಲಾದಲ್ಲಿ ಏನು ಸಂಭವಿಸಿತ್ತು ಎನ್ನುವುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎನ್ನುವದು ಸ್ಪಷ್ಟವಾಗಿದೆ.
 
ಮರಣೋತ್ತರ ಪರೀಕ್ಷೆ ವರದಿಗಳಂತೆ ಪಂಚಕುಲಾದಲ್ಲಿ ಎಲ್ಲ ಸಾವುಗಳು ಗುಂಡೇಟಿನಿಂದಲೇ ಸಂಭವಿದ್ದವು. ಇತರ 267 ಜನರಿಗೆ ಗುಂಡೇಟಿನ ಗಾಯಗಳಾಗಿದ್ದವು.

2018 ಮಾರ್ಚ್ನಲ್ಲಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ದೇರಾ ಅನುಯಾಯಿಗಳು ಒಟ್ಟು ಎಂಟು ಅರ್ಜಿಗಳನ್ನು ಸಲ್ಲಿಸಿದ್ದು,ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ಕ್ರಮದಲ್ಲಿ 200 ದೇರಾ ಅನುಯಾಯಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಸಾವುಗಳ ನೈಜ ಸಂಖ್ಯೆಯನ್ನು ಮುಚ್ಚಿಡಲು ಹರ್ಯಾಣ ಸರಕಾರವು ಮೃತರ ಕುಟುಂಬಗಳಿಗೆ ಮರಣ ಪ್ರಮಾಣಪತ್ರಗಳನ್ನು ವಿತರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಗೃಹಸಚಿವಾಲಯದ ಉತ್ತರವು ಎನ್ಎಚ್ಆರ್ಸಿ ತಾನು ವಹಿಸಬೇಕಿದ್ದ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸಿತ್ತೇ ಎಂಬ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

32 ಜನರ ಹತ್ಯೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿತ್ತೇ ಎನ್ನುವುದನ್ನು ದೃಢಪಡಿಸಿಕೊಳ್ಳದೆ ಎನ್ಎಚ್ಆರ್ಸಿ ಪ್ರಕರಣದ ಕಡತವನ್ನು ಅವಸರವಸರವಾಗಿ ಮುಚ್ಚಿತ್ತು. ಅದು ಮೃತರ ಕುಟುಂಬಗಳಿಗೆ ಪರಿಹಾರ ನೀಡಿಕೆಗೆ ಯಾವುದೇ ಆದೇಶವನ್ನು ಹೊರಡಿಸಿರಲಿಲ್ಲ,ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕಾನೂನು ಅಥವಾ ದಂಡನಾ ಕ್ರಮಗಳನ್ನೂ ಅದು ಶಿಫಾರಸು ಮಾಡಿರಲಿಲ್ಲ.

ಕೃಪೆ: Thewire.in 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News