×
Ad

ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

Update: 2022-03-31 22:52 IST

ಹೊಸದಿಲ್ಲಿ,ಮಾ.31: ಇಂಧನ ಬೆಲೆಗಳಲ್ಲಿ ಸತತ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಗುರುವಾರ ಲೋಕಸಭೆಯಲ್ಲಿ ಸಭಾತ್ಯಾಗವನ್ನು ನಡೆಸಿದರು. ಗುರುವಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀ.ಗೆ ತಲಾ 80 ಪೈಸೆ ಹೆಚ್ಚಿಸಲಾಗಿದ್ದು,ಇದರೊಂದಿಗೆ ಕಳೆದ 10 ದಿನಗಳಲ್ಲಿ ಈ ಇಂಧನಗಳ ಬೆಲೆಯಲ್ಲಿ ಪ್ರತಿ ಲೀ.ಗೆ 6.40 ರೂ.ಏರಿಕೆಯಾಗಿದೆ.

ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಇಂಧನಗಳ ಬೆಲೆಏರಿಕೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ಆರಂಭಿಸಿದ ಪ್ರತಿಪಕ್ಷ ಸದಸ್ಯರು ಏರಿಕೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಸದಸ್ಯರು ಮೋದಿ ಸರಕಾರದ ಜನವಿರೋಧಿ ನೀತಿಗಳಿಗಾಗಿ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಅಧಿವೇಶನದಲ್ಲಿ ಹಿಂದಿನ ನಾಲ್ಕು ಸಂದರ್ಭಗಳಲ್ಲಿ ವಿಷಯವನ್ನು ಪ್ರಸ್ತಾಪಿಸಲು ತಾನು ಅವಕಾಶ ನೀಡಿದ್ದೇನೆ ಎಂದು ಹೇಳಿದ ಸ್ಪೀಕರ್ ಓಂ ಬಿರ್ಲಾ ಅವರು,ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಕಲಾಪಗಳಲ್ಲಿ ಭಾಗವಹಿಸುವಂತೆ ಪ್ರತಿಭಟನಾನಿರತ ಸದಸ್ಯರಿಗೆ ಸೂಚಿಸಿದರು.

ಸ್ಪೀಕರ್ ಮನವಿಯನ್ನು ಕಡೆಗಣಿಸಿದ ಪ್ರತಿಪಕ್ಷ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಕಾಂಗ್ರೆಸ್ ಮತ್ತು ಟಿಎಂಸಿ ಜೊತೆ ಡಿಎಂಕೆ,ಸಿಪಿಎಂ,ಸಿಪಿಐ ಮತ್ತು ಟಿಆರ್ಎಸ್ ಸದಸ್ಯರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಟಿಆರ್‌ಎಸ್ ಸದಸ್ಯರು ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಕೋರಿ ಕೆಲವು ಭಿತ್ತಿಪತ್ರಗಳನ್ನೂ ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ಸುಮಾರು 30 ನಿಮಿಷಗಳ ಬಳಿಕ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಕೆಲವು ಸದಸ್ಯರು ಪ್ರತಿಭಟನೆಯಾಗಿ ಸದನದಿಂದ ಹೊರನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News