"ಕೋವಿಡ್ ಬಾಧಿತರಾಗಿ ನಾಗರಿಕ ಸೇವಾ ಪರೀಕ್ಷೆ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳ ಮನವಿ ಪರಿಶೀಲಿಸಿ"
ಹೊಸದಿಲ್ಲಿ, ಮಾ. 31: ಕೋವಿಡ್ ಬಾಧಿತರಾಗಿ ನಾಗರಿಕ ಸೇವೆಯ ಮುಖ್ಯ ಪರೀಕ್ಷೆ ಬರೆಯಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯತ್ನದ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರಕಾರಕ್ಕೇ ಸೂಚಿಸಿದೆ. ಈ ವಿಷಯವನ್ನು ಸಂಸದೀಯ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿತು.
ಕೋವಿಡ್ನಿಂದ ಬಾಧಿತರಾದ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲು ಸಂಸದೀಯ ಸಮಿತಿ ಶಿಫಾರಸು ಮಾಡಿದ ವರದಿಯನ್ನು ದೂರುದಾರರು ಉಲ್ಲೇಖಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ. ಸಂಸದೀಯ ಸಮಿತಿಯ 24.03.2022 ದಿನಾಂಕದ ವರದಿಯನ್ನು ದೂರುದಾರರು ಉಲ್ಲೇಖಿಸಿದ್ದಾರೆ. ಇದರ ಶಿಫಾರಸಿನ ಹಿನ್ನೆಲೆಯಲ್ಲಿ ಎರಡು ವಾರಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಕ್ತ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವುದರೊಂದಿಗೆ ಈ ಮನವಿಯನ್ನು ವಿಲೇವಾರಿ ಮಾಡುತ್ತೇವೆ.
ಪ್ರಾಧಿಕಾರ ನಿರ್ಣಯ ತೆಗೆದುಕೊಳ್ಳಲಿ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ಎ.ಎಸ್. ಓಕಾ ಹಾಗೂ ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡ ಪೀಠ ಹೇಳಿದೆ. ಕಳೆದ ವರ್ಷ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆದರೆ, ಕೋವಿಡ್ ಬಾಧಿತರಾದುದರಿಂದ ಮುಖ್ಯಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮೂವರು ಅಭ್ಯರ್ಥಿಗಳು ಈ ಮನವಿ ಸಲ್ಲಿಸಿದ್ದರು.