×
Ad

ಉಡುಪಿ; ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ಜೈಲು ಶಿಕ್ಷೆ

Update: 2022-04-01 21:03 IST

ಉಡುಪಿ : ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜೆಸಿಬಿಯಿಂದ ಮರಗಳನ್ನು ಉರುಳಿಸಿ, ಆವರಣ ಗೋಡೆಯನ್ನು ಹಾನಿಗೊಳಿಸಿ, ಅವಾಚ್ಯ ಪದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

೨೦೧೪ರ ಫೆಬ್ರವರಿ 13ರಂದು ಬೆಳಗ್ಗೆ ಆರೋಪಿಗಳಾದ ಉಡುಪಿ ಬಡನಿಡಿಯೂರು ಗ್ರಾಮದ ಅರುಣ್ ಸನಿಲ್, ಆಲ್ವಿನ್ ವಾಝ್, ತೆಂಕನಿಡಿಯೂರು ಗ್ರಾಮದ ಜೋಯ್‌ಹೌಸ್ ನಿವಾಸಿ ಪ್ರಿಯಾ ರೋಡ್ರಿಗಸ್, ತೆಂಕನಿಡಿಯೂರು ಗ್ರಾಮದ ತೊಟ್ಟಂನ ಗ್ರೇಸಿ ಡಿ ಸೋಜಾ ಮತ್ತು ಮಲ್ಪೆಯ ಕೊಡವೂರು ಗ್ರಾಮದ ವಿಶ್ವನಾಥ ತಿಂಗಳಾಯ ಇವರುಗಳು, ಉಡುಪಿ ತಾಲೂಕು ತೆಂಕನಿಡಿಯೂರು ಗ್ರಾಮದ ರೇಖಾ ಪೈ ಇವರ ಪಟ್ಟಾ ಸ್ಥಳದಲ್ಲಿ, ಹೊಸದಾಗಿ ತಮ್ಮ ಅನುಕೂಲಕ್ಕೆ ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ರೇಖಾ ಪೈ ಇವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜಾಗದಲ್ಲಿ ಬೆಳೆದು ನಿಂತಿದ್ದ ಮರಗಳನ್ನು ಜೆಸಿಬಿಯಿಂದ ಬೀಳಿಸಿ, ಆವರಣ ಗೋಡೆಯನ್ನು ಹಾನಿ ಗೊಳಿಸಿದಾಗ ಇದಕ್ಕೆ ಆಕ್ಷೇಪಿಸಿದ ರೇಖಾ ಪೈ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿರುವ ಹಿನ್ನೆಲೆ, ಮಲ್ಪೆ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್‌ಪ್ರಕಾಶ್ ಮೇಲಿನ ಎಲ್ಲಾ ಆರೋಪಿಗಳಿಗೆ 2 ವರ್ಷದ ಕಾರಾಗೃಹ ವಾಸದ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News