ದ್ವೇಷಭಾಷಣ ಪ್ರಕರಣ: ಕಾಳಿಚರಣ್‍ಗೆ ಜಾಮೀನು ನೀಡಿದ ಛತ್ತೀಸಗಢ ಹೈಕೋರ್ಟ್
ರಾಯಪುರ್: ಮಹಾತ್ಮ ಗಾಂಧಿ ಕರಿತು ನಿಂದನಾತ್ಮಕ ಹೇಳಿಕೆ ನೀಡಿ ಗಾಂಧಿ ಹಂತಕ ಗೋಡ್ಸೆಯನ್ನು ವೈಭವೀಕರಿಸಿದ ಆರೋಪ ಹೊತ್ತು ಬಂಧನಕ್ಕೊಳಗಾಗಿದ್ದ ಹಿಂದು ಧಾರ್ಮಿಕ ನಾಯಕ ಕಾಳಿಚರಣ್‍ಗೆ ಆತನ ಬಂಧನದ ಮೂರು ತಿಂಗಳ ನಂತರ ಶುಕ್ರವಾರ ಛತ್ತೀಸಗಢ ಹೈಕೋರ್ಟ್ ಜಾಮೀನು ನೀಡಿದೆ.
ಕಾಳಿಚರಣ್‍ನನ್ನು ಮಧ್ಯ ಪ್ರದೇಶದ ಖಜುರಾಹೋದಿಂದ ಡಿಸೆಂಬರ್ 30ರಂದು ಬಂಧಿಸಲಾಗಿತ್ತು. ಗಾಂಧಿಯನ್ನು ನಿಂದಿಸಿದ್ದೇ ಅಲ್ಲದೆ ಗಾಂಧೀಜಿ ದೇಶವನ್ನು ನಾಶಗೈದಿದ್ದಾರೆ ಎಂದು ಆತ ರಾಯಪುರದಲ್ಲಿ ನಡೆದಿದ್ದ ಎರಡು ದಿನಗಳ ಧರ್ಮ ಸಂಸದ್ ಕಾರ್ಯಕ್ರಮವೊಂದರಲ್ಲಿ ಹೇಳುತ್ತಿರುವ ವೀಡಿಯೋ ಹೊರಬಿದ್ದ ನಂತರ ಆತನನ್ನು ಬಂಧಿಸಲಾಗಿತ್ತು.
"ನಾನು ನಾಥೂರಾಂ ಗೋಡ್ಸೆಗೆ ಗೌರವ ಸಲ್ಲಿಸುತ್ತೇನೆ. ಆತ ಅವರನ್ನು ಹತ್ಯೆಗೈದಿದ್ದಾನೆ. ಶಸ್ತ್ರಕ್ರಿಯೆ ಮೂಲಕ ಚರ್ಮದಲ್ಲಿರುವ ಗಂಟುಗಳನ್ನು ತೆಗೆಯುವುದು ಅಗತ್ಯ ಇಲ್ಲದೇ ಹೋದರೆ ಅದು ಕ್ಯಾನ್ಸರ್‍ಗೆ ಕಾರಣವಾಗಬಹುದು" ಎಂದು ಆತ ಹೇಳಿದ್ದ.
ಆತನಿಗೆ ಶುಕ್ರವಾರ ಕೋರ್ಟ್ ಜಾಮೀನು ನೀಡುವ ವೇಳೆ ರೂ. 1 ಲಕ್ಷದ ವೈಯಕ್ತಿಕ ಬಾಂಡ್ ಹಾಗೂ ತಲಾ ರೂ 50,000 ಮೊತ್ತದ ಎರಡು ಶೂರಿಟಿ ಒದಗಿಸುವಂತೆ ನ್ಯಾಯಾಲಯ ಹೇಳಿದೆ.
ತಮ್ಮ ಕಕ್ಷಿಗಾರ ನಿರಪರಾಧಿ ಹಾಗೂ ರಾಜಕೀಯ ದ್ವೇಷದಿಂದ ಅವರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಕಾಳಿಚರಣ್ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರಲ್ಲದೆ ಆತ ಛತ್ತೀಸಗಢ ಸರಕಾರ, ಭಾರತ ಸರಕಾರ ಅಥವಾ ಇನ್ಯಾವುದೇ ಸರಕಾರದ ವಿರುದ್ಧ ಏನನ್ನೂ ಮಾಡಿರುವ ಬಗ್ಗೆ ತಿಳಿದು ಬಂದಿಲ್ಲ ಎಂದಿದ್ದರು.
ಆದರೆ ಹೆಚ್ಚುವರಿ ಅಡ್ವಕೇಟ್ ಜನರಲ್ ಸುನಿ ಒತ್ವಾನಿ ಆತನಿಗೆ ಜಾಮೀನು ನೀಡುವುದನ್ನು ವಿರೋಧಿಸಿದ್ದರು.