ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ ಜಾರಿ

Update: 2022-04-03 01:48 GMT

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ಸೋಮವಾರ ವರೆಗೆ 36 ಗಂಟೆಗಳ ಕರ್ಫ್ಯೂ ಹೇರಲಾಗಿದೆ.

ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅರಾಜಕತೆಯನ್ನು ತಡೆಯುವ ಪ್ರಯತ್ನವಾಗಿ ದೇಶಾದ್ಯಂತ ಕರ್ಫ್ಯೂ ಹೇರಲಾಗಿದೆ. ದೇಶದ ಆರ್ಥಿಕ ಬಿಕ್ಕಟ್ಟಿಗೆ ಸರ್ಕಾರವೇ ನೇರ ಹೊಣೆಯಾಗಿದ್ದು, ಆಮದನ್ನೇ ಅವಲಂಬಿಸಬೇಕಾದ ದೇಶವಾಗಿ ಶ್ರೀಲಂಕಾ ಪರಿವರ್ತನೆಯಾಗಿದ್ದು, ಆಹಾರ ಮತ್ತು ಇಂಧನ ಖರೀದಿಸಲೂ ಜನತೆ ಬಳಿ ಹಣ ಇಲ್ಲ ಎನ್ನುವುದು ಪ್ರತಿಭಟನಾಕಾರರ ವಾದ.

ಅಧ್ಯಕ್ಷರಿಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಸರ್ಕಾರದ ಮಾಹಿತಿ ಮುಖ್ಯಸ್ಥ ಮೋಹನ್ ಸಮರನಾಯಕೆ ಹೇಳಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಅಭಾವವನ್ನು ಪ್ರತಿಭಟಿಸುವ ಸಲುವಾಗಿ ರವಿವಾರ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಬೆನ್ನಲ್ಲೇ, ಶುಕ್ರವಾರ ಮಧ್ಯರಾತ್ರಿ ತುರ್ತು ಅಧಿಕಾರಗಳನ್ನು ಚಲಾಯಿಸಿರುವ ರಾಜಪಕ್ಸ ಈ ಕ್ರಮ ಕೈಗೊಂಡಿದ್ದಾರೆ.

ಅರಾಜಕತೆ ಮತ್ತು ಹಿಂಸಾಚಾರದ ನಡುವೆಯೇ, ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯಲು ಅಧ್ಯಕ್ಷರು ದೇಶದಲ್ಲಿ ಸರ್ವಪಕ್ಷಗಳ ಸರ್ಕಾರ ರಚಿಸಬೇಕು ಎಂದು ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಫ್ರೀಡಂ ಪಾರ್ಟಿ ಆಗ್ರಹಿಸಿದೆ.

ಭಾರತ ತನ್ನ ನೆರೆಯ ದೇಶದ ನೆರವಿಗೆ ಧಾವಿಸಿದ್ದು, ಭಾರತೀಯ ವ್ಯಾಪಾರಿಗಳು 40 ಸಾವಿರ ಟನ್ ಅಕ್ಕಿಯನ್ನು ಶ್ರೀಲಂಕಾಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಕ್ರೆಡಿಟ್‍ಲೈನ್‍ನಲ್ಲಿ ಶ್ರೀಲಂಕಾ ಭಾರತದಿಂದ ಪಡೆಯುತ್ತಿರುವ ಮೊದಲ ದೊಡ್ಡ ಆಹಾರಧಾನ್ಯ ನೆರವು ಆಗಿರುತ್ತದೆ.

ಶ್ರೀಲಂಕಾದ ಪ್ರಮುಖ ಹಬ್ಬಕ್ಕೆ ಮುನ್ನ ಈ ನೆರವು ತಲುಪಲಿದ್ದು, ಒಂದು ವರ್ಷದಲ್ಲಿ ದ್ವಿಗುಣಗೊಂಡಿರುವ ಆಹಾರಧಾನ್ಯ ಬೆಲೆ ಇಳಿಯಲು ಇದು ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶ್ರೀಲಂಕಾಗೆ ಕಳುಹಿಸಲು ಅಕ್ಕಿ ಲೋಡಿಂಗ್ ಅರಂಭವಾಗಿದೆ ಎಂದು ಪಟ್ಟಾಭಿ ಆಗ್ರೊ ಫುಡ್ಸ್ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಕೃಷ್ಣ ರಾವ್ ಹೇಳಿದ್ದಾರೆ. ಭಾರತದ ಜತೆಗಿನ ಸಾಲ ಒಪ್ಪಂದದ ಅಡಿಯಲ್ಲಿ ಶ್ರೀಲಂಕಾದ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್‍ಗೆ ಅಕ್ಕಿ ರವಾನಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News