ಭಾರತದ ಜತೆ ದ್ವಿಪಕ್ಷೀಯ ಮಾತುಕತೆ: ಪಾಕ್ ಸೇನಾ ಮುಖ್ಯಸ್ಥ ಕರೆ

Update: 2022-04-03 02:02 GMT

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಸೇರಿದಂತೆ ಭಾರತದ ಜತೆ ಎಲ್ಲ ವಿವಾದಗಳನ್ನು "ದ್ವಿಪಕ್ಷೀಯ ಮಾತುಕತೆ ಮತ್ತು ರಾಜತಾಂತ್ರಿಕತೆ" ಮೂಲಕ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಪ್ರಕಟಿಸಿದ್ದಾರೆ.

ಇದರೊಂದಿಗೆ ಅಮೆರಿಕ ಜತೆ ಉತ್ತಮ ಬಾಂಧವ್ಯದ ಸುಧೀರ್ಘ ಇತಿಹಾಸವನ್ನು ಮುಂದುವರಿಸುವ ಹಾಗೂ ಚೀನಾದ ಜತೆ ನಿಕಟ ಸಂಬಂಧ ಹೊಂದಲು ಪಾಕಿಸ್ತಾನ ಬಯಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರವಿವಾರ ನಡೆಯುವ ಅವಿಶ್ವಾಸ ನಿರ್ಣಯದ ಮೇಲಿನ ಮತದಾನದ ಹಿನ್ನೆಲೆಯಲ್ಲಿ ದೇಶದ ಭವಿಷ್ಯದ ವಿದೇಶಾಂಗ ನೀತಿಯ ಸ್ಪಷ್ಟ ಸೂಚನೆ ಇದಾಗಿದೆ.

ತಾವು ರಷ್ಯಾಗೆ ಭೇಟಿ ನೀಡಿದ ಬಳಿಕ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲು ಅಮೆರಿಕದ ಸೂಚನೆಯಂತೆ ವಿದೇಶಿ ನೆರವಿನ ಪಿತೂರಿ ನಡೆದಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದು, ಸೇನಾ ಮುಖ್ಯಸ್ಥರ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿದೆ. ಅಮೆರಿಕ ಜತೆಗಿನ ಸಂಬಂಧವನ್ನು ಮುಂದುವರಿಸುವ ಸುಳಿವನ್ನು ಸೇನಾ ಮುಖ್ಯಸ್ಥರು ನೀಡಿದ್ದಾರೆ. ದೇಶದ ಪೂರ್ವ ಗಡಿ ಮತ್ತು ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ "ತೃಪ್ತಿದಾಯಕ ಮತ್ತು ಶಾಂತಿಯುತ"ವಾಗಿ ಇರುವುದರಿಂದ ಪಾಕಿಸ್ತಾನ ನಿರಾಳವಾಗಿದೆ ಎಂದು ಜನರಲ್ ಬಾಜ್ವಾ ಹೇಳಿದ್ದಾರೆ.

"ವಿಶ್ವದ ಮೂರನೇ ಒಂದರಷ್ಟು ಭಾಗವಾದ ಗಲ್ಫ್ ಪ್ರದೇಶದಲ್ಲಿ ಒಂದಲ್ಲ ಒಂದು ಸಂಘರ್ಷ ಮತ್ತು ಯುದ್ಧ ನಡೆಯುತ್ತಿದ್ದರೆ, ನಮ್ಮ ಪ್ರದೇಶದಿಂದ ಈ ಜ್ವಾಲೆಯ ಹೊಗೆಯನ್ನು ದೂರ ಇಡುವುದು ಅಗತ್ಯ" ಎಂದು ಇಸ್ಲಾಮಾಬಾದ್ ಸೆಕ್ಯುರಿಟಿ ಡಯಲಾಗ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಪಾದಿಸಿದರು.

ಕಾಶ್ಮೀರ ಸಮಸ್ಯೆ ಹೊರತಾಗಿ ಪಾಕಿಸ್ತಾನವು ಭಾರತ- ಚೀನಾ ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. "ಉಭಯ ದೇಶಗಳ ರಾಜಕೀಯ ಮುಖಂಡರು ಭಾವನಾತ್ಮಕ ಮತ್ತು ಗ್ರಹಿಕೆಯ ಪೂರ್ವಾಗ್ರಹವನ್ನುಬಿಟ್ಟು, ಶಾಂತಿ ಮತ್ತು ಸಮೃದ್ಧತೆಯನ್ನು ಜನರಿಗೆ ತರುವ ಅಗತ್ಯವಿದೆ" ಎಂದು ಬಾಜ್ವಾ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News