ʼಮಸೀದಿ ಧ್ವನಿವರ್ಧಕ ತೆಗೆಸದಿದ್ದರೆ ಹನುಮಾನ್‌ ಚಾಲಿಸಾ ಹಾಡಿಸುತ್ತೇವೆʼ: ರಾಜ್‌ ಠಾಕ್ರೆ ಎಚ್ಚರಿಕೆ

Update: 2022-04-03 11:14 GMT

ಮುಂಬೈ: ಮಸೀದಿಯ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ರಾಜ್ಯ ಸರ್ಕಾರವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ, ಮಸೀದಿ ಮುಂದೆ ದೊಡ್ಡ ಶಬ್ದದಲ್ಲಿ ಹನುಮಾನ್‌ ಚಾಲಿಸಾ ನುಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಠಾಕ್ರೇ, ʼನಾನು ಯಾವುದೇ ಪ್ರಾರ್ಥನೆಗಳ ವಿರೋಧಿ ಅಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆಗಳನ್ನು ಮಾಡಬಹುದು. ಆದರೆ, ಮಸೀದಿಯ ಧ್ವನಿವರ್ಧಕಗಳನ್ನು ತೆಗೆಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಸೀದಿ ಮುಂಭಾಗದಲ್ಲಿ ಹನುಮಾನ್‌ ಚಾಲಿಸಾ ಹಾಡಿಸುವುದಾಗಿ ಎಚ್ಚರಿಸಿದ್ದಾರೆ. 
ಅಲ್ಲದೆ, ಮುಂಬೈಯ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿನ ಮಸೀದಿಗಳ ಮೇಲೆ ದಾಳಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಠಾಕ್ರೆ ಮನವಿ ಮಾಡಿದ್ದಾರೆ. ಹಾಗೂ ಅಲ್ಲಿ ವಾಸಿಸುವ ಜನರು "ಪಾಕಿಸ್ತಾನಿ ಬೆಂಬಲಿಗರು" ಎಂದು ಅವರು ಹೇಳಿದ್ದಾರೆ.

"ಮುಸ್ಲಿಂ ಗುಡಿಸಲುಗಳಲ್ಲಿರುವ ಮದರಸಾಗಳ ಮೇಲೆ ದಾಳಿ ಮಾಡುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ. ಪಾಕಿಸ್ತಾನಿ ಬೆಂಬಲಿಗರು ಈ ಗುಡಿಸಲುಗಳಲ್ಲಿ ನೆಲೆಸಿದ್ದಾರೆ. ಮುಂಬೈ ಪೊಲೀಸರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದೆ. ನಮ್ಮ ಶಾಸಕರು ಅವರನ್ನು ಮತ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ, ಅಂತಹವರಿಗೆ ಆಧಾರ್ ಕಾರ್ಡ್ ಕೂಡ ಇಲ್ಲ” ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಸರ್ಕಾರವನ್ನು ಶ್ಲಾಘಿಸಿದ ಠಾಕ್ರೆ, ಉತ್ತರ ಪ್ರದೇಶವು ಪ್ರಗತಿಯಲ್ಲಿದೆ ಮತ್ತು ಮಹಾರಾಷ್ಟ್ರದಲ್ಲಿ ಅದೇ ಅಭಿವೃದ್ಧಿಯನ್ನು ತಾವು ಬಯಸುವುದಾಗಿ ಹೇಳಿದ್ದಾರೆ. ಉತ್ತರ ಪ್ರದೇಶ ಪ್ರಗತಿಯಾಗುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಮಹಾರಾಷ್ಟ್ರದಲ್ಲೂ ಅದೇ ಅಭಿವೃದ್ಧಿಯನ್ನು ಬಯಸುತ್ತೇವೆ. ನಾನು ಶೀಘ್ರವೇ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ಆದರೆ ಯಾವಾಗ ಎಂದು ಇಂದು ಹೇಳುವುದಿಲ್ಲ. ಹಿಂದುತ್ವದ ಬಗ್ಗೆಯೂ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News